ಮಾಧವಿ ಪಾರೇಖ್ ಗೆ ‘ನಂಜುಂಡರಾವ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
- by Suddi Team
- July 5, 2025
- 39 Views

ಬೆಂಗಳೂರು: ಗುಜರಾತಿನ ಹೆಸರಾಂತ ಚಿತ್ರ ಕಲಾವಿದೆ ಅವರಿಗೆ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಸಂಸ್ಥಾಪಕ ಡಾ.ಎಂ ಎಸ್ ನಂಜುಂಡರಾವ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿಯನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಮಾಧವಿ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಕಲೆಯ ಛಾಪು ಮೂಡಿಸಿದ್ದಾರೆ. ಅವರಿಗೆ ಈ ಪ್ರಶಸ್ತಿಯನ್ನು ಕೊಟ್ಟಿರುವುದರಿಂದ ಪುರಸ್ಕಾರದ ಮೌಲ್ಯವೇ ಹೆಚ್ಚಾಗಿದೆ. ಇದು ಅವರ ಕಲಾಪ್ರತಿಭೆಗೆ ಸಂದ ಗೌರವವಾಗಿದೆ’ ಎಂದಿದ್ದಾರೆ.
ಅರವತ್ತು ವರ್ಷಗಳ ಹಿಂದೆ ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸು ಅವರು ಚಿತ್ರಕಲಾ ಪರಿಷತ್ತಿಗೆ ನಗರದ ಹೃದಯ ಭಾಗದಲ್ಲಿ ಈ ಭೂಮಿಯನ್ನು ಉಚಿತವಾಗಿ ಕೊಟ್ಟರು. ನಂತರ ನಂಜುಂಡರಾವ್ ಅವರು ತಮ್ಮ ಗುರುಗಳಾದ ವೀರಪ್ಪ ಅವರ ಮಾರ್ಗದರ್ಶನ ಮತ್ತು ಪ್ರೋತ್ಸಾಹದಿಂದ ಈ ಮಟ್ಟಕ್ಕೆ ಬೆಳೆಸಿದರು. ಅವರಿಂದಾಗಿ ಮೈಸೂರು ಸಂಪ್ರದಾಯದ ಚಿತ್ರಕಲೆ ಪುನರುಜ್ಜೀವನ ಕಂಡಿತು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಕಲೆಯ ಸಾಧನೆಗೆ ತಾಳ್ಮೆ, ಪ್ರತಿಭೆ ಮತ್ತು ಪರಿಶ್ರಮ ಇರಬೇಕು. ಮಾಧವಿ ಪಾರೇಖ್ ಅವರು ಸದ್ದುಗದ್ದಲವಿಲ್ಲದೆ ಈ ಸಾಧನೆ ಮಾಡಿದ್ದಾರೆ. ನಂಜುಂಡರಾವ್ ಕೂಡ ಪರಿಷತ್ತಿನ ಆವರಣದಲ್ಲಿ ಅನಾಮಿಕರಂತೆ ಓಡಾಡುತ್ತಿದ್ದರು. ಆದರೆ ಅವರ ತಪಸ್ಸಿನಿಂದಾಗಿ ಚಿತ್ರಕಲಾ ಪರಿಷತ್ತು ದೇಶದ ಮಟ್ಟದಲ್ಲಿ ಗಮನ ಸೆಳೆಯುವಂತೆ ಬೆಳೆಯಿತು. ಈಗ ಪರಿಷತ್ತು ಉತ್ತರಹಳ್ಳಿಯಲ್ಲಿ ವಿಶಾಲ ಕ್ಯಾಂಪಸ್ ಹೊಂದಿದೆ. ಇದರ ಹಿಂದೆ ದಿವಂಗತ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಕಲಾಪ್ರೇಮವೂ ಇದೆ ಎಂದು ಅವರು ನೆನಪಿಸಿಕೊಂಡಿದ್ದಾರೆ.
ಆಧುನಿಕ ಜಗತ್ತಿನಲ್ಲಿ ಕಲೆಗೆ ತುಂಬಾ ಬೇಡಿಕೆ ಇದೆ. ಕಾರ್ಪೊರೇಟ್ ವಲಯದಲ್ಲಿ ಕಲೆಯ ಪೋಷಣೆ ನಡೆಯುತ್ತಿದೆ. ಕಲೆಯು ಸಂಪ್ರದಾಯ ಮತ್ತು ಆಧುನಿಕ ಧಾರೆ ಎರಡನ್ನೂ ಸಮನ್ವಯಗೊಳಿಸಿಕೊಂಡು ಹೋಗುತ್ತಿರುವುದು ಗಮನಾರ್ಹವಾಗಿದೆ ಎಂದು ಪಾಟೀಲ ನುಡಿದಿದ್ದಾರೆ.
ಕಾರ್ಯಕ್ರಮದಲ್ಲಿ ಪರಿಷತ್ ಅಧ್ಯಕ್ಷ ಬಿ ಎಲ್ ಶಂಕರ್, ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ ಸ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.
Related Articles
Thank you for your comment. It is awaiting moderation.
Comments (0)