ಲಾಲ್‌ಬಾಗ್ ಸುರಂಗ ರಸ್ತೆ ಯೋಜನೆಯಿಂದ ಕೈಬಿಡಲು ನಿರ್ಧಾರ: ಬೆಂಗಳೂರಿಗರ ಹೋರಾಟಕ್ಕೆ ಮೊದಲ ಜಯ ಎಂದ ತೇಜಸ್ವಿ ಸೂರ್ಯ

ಬೆಂಗಳೂರು: ಸುರಂಗ ರಸ್ತೆ ಯೋಜನೆಯಿಂದ ಲಾಲ್‌ಬಾಗ್‌ ಅನ್ನು ಕೈಬಿಡುವುದಾಗಿ ಬೃಹತ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಹೇಳಿಕೆ ನೀಡಿರುವುದು ಬೆಂಗಳೂರಿಗರ ಹೋರಾಟಕ್ಕೆ ಸಿಕ್ಕ ಮೊದಲ ಜಯ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಲಾಲ್‌ಬಾಗ್‌ನ ಹಸಿರು ಉಳಿಸಲು ಹಾಗೂ ಅವೈಜ್ಞಾನಿಕ ಸುರಂಗ ರಸ್ತೆ ಯೋಜನೆ ವಿರೋಧಿಸಿ ನಡೆದ ಹೋರಾಟದಲ್ಲಿ ಭಾಗಿಯಾದ ಬೆಂಗಳೂರಿಗರಿಗೆ ಧನ್ಯವಾದ ಸಲ್ಲಿಸಿರುವ ಅವರು, ಯೋಜನೆಯ ಮಾರ್ಗ ಬದಲಾವಣೆಯಿಂದ ಮಾತ್ರ ಅದು ವೈಜ್ಞಾನಿಕವಾಗುವುದಿಲ್ಲ. ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಾಗಲಿದೆ ಎಂದು IISc ಸೇರಿದಂತೆ ಹಲವು ಸಂಶೋಧನಾ ಸಂಸ್ಥೆಗಳು ಮತ್ತು ತಜ್ಞರು ಎಚ್ಚರಿಸಿದ್ದಾರೆ. ಹೀಗಾಗಿ ಯೋಜನೆ ವಿರೋಧಿಸಿ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

ಯೋಜನೆಯ ಸಾಧಕ-ಬಾಧಕಗಳ ಕುರಿತು ಬೆಂಗಳೂರಿಗರ ಸಮ್ಮುಖದಲ್ಲಿ ಬಹಿರಂಗ ಚರ್ಚೆಗೆ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಸವಾಲು ಹಾಕಿದ್ದಾರೆ. ಸುರಂಗ ರಸ್ತೆ ಯೋಜನೆಯಿಂದ ಮೆಟ್ರೋ ರೆಡ್ ಲೈನ್ ವಿಸ್ತರಣೆಗೆ ತಡೆ ಉಂಟಾಗಿದ್ದು, ವೆಟರ್ನರಿ ಕಾಲೇಜು ಮೆಟ್ರೋ ನಿಲ್ದಾಣ ಕೈಬಿಡಲಾಗಿದೆ ಎಂದೂ ಆರೋಪಿಸಿದ್ದಾರೆ.

ಹೆಬ್ಬಾಳದ ಕಿರು ಸುರಂಗ ಯೋಜನೆಯಿಂದ ಕೆಂಪೇಗೌಡರ ಕೊಡುಗೆಯಾದ ಹೆಬ್ಬಾಳ ಕೆರೆಯ 3.3 ಎಕರೆ ಪ್ರದೇಶಕ್ಕೆ ಅಪಾಯ ಎದುರಾಗಿದೆ. ಲಾಲ್‌ಬಾಗ್‌ನಂತೆ ಹೆಬ್ಬಾಳ ಕೆರೆಯನ್ನೂ ಉಳಿಸಬೇಕು. ಹೀಗಾಗಿ ಕಿರು ಸುರಂಗ ಯೋಜನೆಯನ್ನೂ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.

ಸಾರ್ವಜನಿಕ ಸಾರಿಗೆ ಬಲಪಡಿಸುವುದು ಮತ್ತು ಪಾದಚಾರಿಗಳ ಹಿತ ಕಾಪಾಡುವುದಾಗಿ ಹೇಳಿರುವ ಮುಖ್ಯಮಂತ್ರಿ, ಅದಕ್ಕೆ ವಿರುದ್ಧವಾಗಿ ಸುರಂಗ ರಸ್ತೆ ಯೋಜನೆ ಮುಂದುವರಿಸುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರಿಗೆ ಮತ್ತಷ್ಟು ಕಾರುಗಳ ಬದಲಾಗಿ ಮೆಟ್ರೋ, ಉಪನಗರ ರೈಲು, ಫೀಡರ್ ಬಸ್‌ಗಳು ಮತ್ತು ಪಾದಚಾರಿ ಮಾರ್ಗಗಳನ್ನು ಒಳಗೊಂಡ ಸಮಗ್ರ ಸಾರಿಗೆ ವ್ಯವಸ್ಥೆ ಅಗತ್ಯ. ವೈಜ್ಞಾನಿಕ ಹಾಗೂ ಸುಸ್ಥಿರ ಬೆಂಗಳೂರಿಗಾಗಿ ಹೋರಾಟ ಮುಂದುವರಿಯಲಿದೆ ಎಂದು ತೇಜಸ್ವಿ ಸೂರ್ಯ ತಿಳಿಸಿದ್ದಾರೆ.

Related Articles

Comments (0)