ನ.28, 29ರಂದು ಡಾ. ಕೆ.ಎಸ್. ನಾರಾಯಣಾಚಾರ್ಯ ಸ್ಮರಣಾರ್ಥ ಸಾಹಿತ್ಯೋತ್ಸವ; ಭಾರತದ ಇತಿಹಾಸ ಮತ್ತು ಏಕತೆ ಕುರಿತು ವಿಚಾರ ಮಂಥನ

ಬೆಂಗಳೂರು : ರಾಮಾಯಣ, ಮಹಾಭಾರತ, ಭಾರತೀಯ ಇತಿಹಾಸ ಹಾಗೂ ರಾಷ್ಟ್ರೀಯ ಚಿಂತನೆಗಳ ಕುರಿತು ಅಪಾರ ಕೃತಿಗಳನ್ನು ರಚಿಸಿರುವ ಹಿರಿಯ ವಿದ್ವಾಂಸ ಡಾ. ಕೆ.ಎಸ್. ನಾರಾಯಣಾಚಾರ್ಯ ಅವರ ಸ್ಮರಣಾರ್ಥ ನವೆಂಬರ್ 28 ಮತ್ತು 29ರಂದು ನಗರದ ಜಯನಗರದಲ್ಲಿರುವ ಆರ್.ವಿ. ಶಿಕ್ಷಕರ ಕಾಲೇಜು ಸಭಾಂಗಣದಲ್ಲಿ ವಿಶೇಷ ಸಾಹಿತ್ಯೋತ್ಸವ ಮತ್ತು ಸನ್ಮಾನ ಸಮಾರಂಭವನ್ನು ಆಯೋಜಿಸಲಾಗಿದೆ.

ಪರಮ್ ಫೌಂಡೇಶನ್‌ನ ಇತಿಹಾಸ ವಿಭಾಗ, ಉದ್ಭವ ಸಂಸ್ಥೆ ಹಾಗೂ ಸುಬ್ಬು ಪಬ್ಲಿಕೇಶನ್ ಜಂಟಿಯಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿವೆ. ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯಗಳ ವೈವಿಧ್ಯತೆಯ ನಡುವೆಯೂ ಭಾರತವನ್ನು ಒಂದು ನಾಗರಿಕತೆಯಾಗಿ ಬೆಸೆದಿರುವ ಮೌಲ್ಯಗಳು ಯಾವುವು ಎಂಬುದರ ಕುರಿತು ಇಲ್ಲಿ ವಿಸ್ತೃತ ಸಂವಾದ ನಡೆಯಲಿದೆ.

ಕಾರ್ಯಕ್ರಮದ ವಿವರ:

ನವೆಂಬರ್ 28ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಸಾಹಿತ್ಯೋತ್ಸವ ನಡೆಯಲಿದ್ದು, ‘ಭಾರತವನ್ನು ಒಗ್ಗೂಡಿಸುವುದು ಯಾವುದು?’ ಎಂಬ ಕೇಂದ್ರ ಆಶಯದಡಿ ಹಲವು ವಿದ್ವಾಂಸರು, ಲೇಖಕರು ಹಾಗೂ ಚಿಂತಕರು ಭಾರತದ ಏಕತೆಯ ವಿವಿಧ ಆಯಾಮಗಳ ಕುರಿತು ವಿಚಾರ ಮಂಡಿಸಲಿದ್ದಾರೆ. ನವೆಂಬರ್ 29ರಂದು ಸಂಜೆ 4ರಿಂದ ರಾತ್ರಿ 8.30ರವರೆಗೆ ಡಾ. ಕೆ.ಎಸ್. ನಾರಾಯಣಾಚಾರ್ಯರ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ, ಸನ್ಮಾನ ಹಾಗೂ ಅವರ ಚಿಂತನೆಗಳ ಕುರಿತ ಉಪನ್ಯಾಸ ಕಾರ್ಯಕ್ರಮ ಜರುಗಲಿದೆ.

ಸಮಾರಂಭದಲ್ಲಿ ಹಿರೇಮಗಳೂರು ಕಣ್ಣನ್, ಡಾ. ಮಲ್ಲೇಪುರಂ ಜಿ. ವೆಂಕಟೇಶ, ಡಾ. ಜಿ.ಬಿ. ಹರೀಶ್, ಪವನ್ ಗುಪ್ತಾ, ಸ್ಮಿತಾ ಎಚ್.ಎಸ್., ಗಣೇಶ್ ವಿಜಯನ್ ಸೇರಿದಂತೆ ನಾಡಿನ ಪ್ರಮುಖ ವಿದ್ವಾಂಸರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ವಿದ್ಯಾರ್ಥಿಗಳು ಹಾಗೂ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಆಯೋಜಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

 

Related Articles

Comments (0)

Leave a Comment