ಆಲಮಟ್ಟಿ ಎತ್ತರ ವಿರೋಧಿಸಿ ಮಹಾರಾಷ್ಟ್ರ ಕೋರ್ಟ್ ಗೆ ಹೋದಲ್ಲಿ ನಾವೂ ಪ್ರತ್ಯೇಕ ಹೋರಾಟ ಮಾಡುತ್ತೇವೆ; ಡಿಸಿಎಂ
- by Suddi Team
- September 17, 2025
- 267 Views
ಬೆಂಗಳೂರು:ಮಹಾರಾಷ್ಟ್ರ ಮುಖ್ಯಮಂತ್ರಿಗಳು ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಳವನ್ನು ವಿರೋಧಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ಹೇಳಿದ್ದಾರೆ. ಈ ವಿಚಾರವಾಗಿ ನಾವು ಪ್ರತ್ಯೇಕವಾಗಿ ಹೋರಾಟ ಮಾಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,“ಕರ್ನಾಟಕ ರಾಜ್ಯ ತನ್ನ ಪಾಲಿನ ನೀರನ್ನು ಪಡೆಯಲು ನಾನು ಹಾಗೂ ಮುಖ್ಯಮಂತ್ರಿಗಳು ಹಲವು ಬಾರಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಈ ವಿಚಾರವಾಗಿ ಮನವಿ ಮಾಡಿದ್ದೇವೆ. ನಮ್ಮ ಮನವಿಗೆ ಸ್ಪಂದಿಸಿರುವ ಕೇಂದ್ರ ಸಚಿವರು ಅಧಿಸೂಚನೆ ಹೊರಡಿಸಲು ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಕೇಂದ್ರ ಸಚಿವರು ಈ ವಿಚಾರವಾಗಿ ಎರಡು ಬಾರಿ ಸಭೆ ನಿಗದಿ ಮಾಡಿದ್ದರಾದರೂ ರಾಜಕೀಯ ಒತ್ತಡಗಳಿಂದಾಗಿ ಈ ಸಭೆ ಮುಂದೂಡಲಾಗಿತ್ತು. ಒಂದು ಬಾರಿ ಮಹಾರಾಷ್ಟ್ರ ಹಾಗೂ ಮತ್ತೊಂದು ಬಾರಿ ಆಂಧ್ರ ಪ್ರದೇಶದ ಒತ್ತಡದಿಂದ ಸಭೆ ಮುಂದೂಡಲಾಗಿದೆ. ಈ ವಿಚಾರದಲ್ಲಿ ಆತಂಕ ಪಡುವ ಅಗತ್ಯವಿಲ್ಲ. ಮತ್ತೊಂದು ದಿನಾಂಕ ನಿಗದಿ ಮಾಡಿ ಸಭೆ ಮಾಡೋಣ ಎಂದು ಕೇಂದ್ರ ಸಚಿವರು ಪತ್ರ ಬರೆದಿದ್ದಾರೆ. ಹೀಗಾಗಿ ನಾವು ಯೋಜನೆ ಜಾರಿಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ” ಎಂದು ಹೇಳಿದರು.
“ಈ ಮಧ್ಯೆ ಮಹಾರಾಷ್ಟ್ರ ಮುಖ್ಯಮಂತ್ರಿಗಳು ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಳವನ್ನು ವಿರೋಧಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ಹೇಳಿದ್ದಾರೆ. ಈ ವಿಚಾರವಾಗಿ ನಾವು ಪ್ರತ್ಯೇಕವಾಗಿ ಹೋರಾಟ ಮಾಡುತ್ತೇವೆ. ಅದರ ಬಗ್ಗೆ ಸಧ್ಯಕ್ಕೆ ಚರ್ಚೆ ಮಾಡುವುದಿಲ್ಲ. ಈಗ ಬಂದಿರುವ ತೀರ್ಪಿನ ಪ್ರಕಾರ ನಮ್ಮ ಪಾಲಿನ ನೀರನ್ನು ಪಡೆಯುವುದು ನಮ್ಮ ಹಕ್ಕು. ನಮ್ಮ ರಾಜ್ಯದ ರೈತರ ಹಿತರಕ್ಷಣೆ ಮಾಡುವುದು ನಮ್ಮ ಕರ್ತವ್ಯವಾಗಿದ್ದು, ಈ ಯೋಜನೆಯಲ್ಲಿ ಭೂಮಿ ಕಳೆದುಕೊಳ್ಳುವ ಸಂತ್ರಸ್ತ ರೈತರನ್ನು ರಕ್ಷಣೆ ಮಾಡಲಾಗುವುದು” ಎಂದು ತಿಳಿಸಿದರು.
ಈ ಪ್ರಕರಣದಲ್ಲಿ ನ್ಯಾಯಾಧೀಕರಣದ ತೀರ್ಪು ಹೊರಬಂದಿದೆ. ಈ ವಿಚಾರದಲ್ಲಿ ಮಹಾರಾಷ್ಟ್ರ ಸಿಎಂಗೆ ಬೇರೆ ಆಯ್ಕೆ ಇಲ್ಲ. ಈ ಹಿಂದೆ ಮಹಾರಾಷ್ಟ್ರ ಈ ಯೋಜನೆಗೆ ಒಪ್ಪಿಗೆ ನೀಡಿತ್ತು. ಸಮುದ್ರಕ್ಕೆ ಸೇರುತ್ತಿರುವ ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು ನಾವು ಮುಂದಾಗಿದ್ದೇವೆ. ಇನ್ನು ತೆಲಂಗಾಣ ಹಾಗೂ ಆಂಧ್ರಪ್ರದೇಶ ಈ ವಿಚಾರದಲ್ಲಿ ಒಪ್ಪಿಗೆ ನೀಡುವ ವಿಶ್ವಾಸವಿದೆ. ಈ ಯೋಜನೆಯಿಂದ ಎಲ್ಲಾ ರಾಜ್ಯಗಳ ರೈತರಿಗೂ ಪ್ರಯೋಜನವಾಗಲಿದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸುವುದೊಂದೇ ಬಾಕಿ ಇದೆ” ಎಂದು ತಿಳಿಸಿದರು.
Related Articles
Thank you for your comment. It is awaiting moderation.


Comments (0)