ಬಹು ನಿರೀಕ್ಷಿತ ಕೇಬಲ್ ಆಧಾರಿತ ಸಿಗಂದೂರು ಸೇತುವೆ ನಾಳೆ ಲೋಕಾರ್ಪಣೆ; ಲಾಂಚ್ ಅವಲಂಬನೆಗೆ ಬೀಳಲಿದೆ ತೆರೆ
- by Suddi Team
- July 13, 2025
- 257 Views

ಶಿವಮೊಗ್ಗ: ದಶಕಗಳಿಂದ ಕಾಯುತ್ತಿದ್ದ ಸಾಗರ ತಾಲ್ಲೂಕು ಕಳಸವಳ್ಳಿ – ಅಂಬಾರಗೊಡ್ಲು ಮಾರ್ಗದ ನಡುವೆ ಶರಾವತಿ ಹಿನ್ನೀರಿನ ಪ್ರದೇಶದಲ್ಲಿ ನಿರ್ಮಾಣ ಮಾಡಿರುವ ಕೇಬಲ್ ಆಧಾರಿತ ಸಿಗಂದೂರು ಸೇತುವೆ ನಾಳೆ ಲೋಕಾರ್ಪಣೆ ಆಗಲಿದ್ದು, ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ. ಇದರಿಂದ, ಲಾಂಚ್ ಅವಲಂಬನೆಗೂ ತೆರೆ ಬೀಳಲಿದೆ.
ನವನವೀನ ತಂತ್ರಜ್ಞಾನ ಹಾಗೂ ಆಧುನಿಕ ತಾಂತ್ರಿಕ ವ್ಯವಸ್ಥೆಯಿಂದ ಅತ್ಯಂತ ಅಚ್ಚುಕಟ್ಟಾಗಿ ಸುಮಾರು 430 ಕೋಟಿ ರೂ. ಅನುದಾನದಲ್ಲಿ ನಿರ್ಮಾಣಗೊಂಡಿರುವ ರಾಜ್ಯದ ಅತಿ ಉದ್ದದ 2.25 ಕಿ.ಮೀ ಕೇಬಲ್ ಆಧಾರಿತ ಸೇತುವೆಯನ್ನು ನಾಳೆ ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಉದ್ಘಾಟಿಸಲಿದ್ದಾರೆ.
ನಾಳೆ ನಾಗಪುರದಿಂದ ಶಿವಮೊಗ್ಗಕ್ಕೆ ವಿಮಾನದಲ್ಲಿ ಆಗಮಿಸಲಿರುವ ನಿತಿನ್ ಗಡ್ಕರಿ, ಅಲ್ಲಿಂದ ಹೆಲಿಕಾಪ್ರ್ ಮೂಲಕ ಸಾಗರಕ್ಕೆ ತೆರಳಲಿದ್ದಾರೆ. ಸಂಪುಟ ಸಹೋದ್ಯೋಗಿ ಪ್ರಲ್ಹಾದ್ ಜೋಶಿ ಅವರೊಂದಿಗೆ ಸಿಗಂದೂರಿಗೆ ತೆರಳಿ ಪೂಜೆ ಸಲ್ಲಿಸಿ ಸೇತುವೆ ಉದ್ಘಾಟಿಸಲಿದ್ದಾರೆ. ಸೇತುವೆ ಉದ್ಘಾಟನೆ ನಂತರ ಮಧ್ಯಾಹ್ನ ಸಾಗರದ ನೆಹರೂ ಮೈದಾನದಲ್ಲಿ ಆಯೋಜಿಸಿರುವ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಸೇತುವೆ ವಿಶೇಷತೆಗಳು:
ಟೆಂಡರ್ ಮೊತ್ತ : 473 ಕೋಟಿ ರೂಪಾಯಿ
ಕಾಮಗಾರಿ ಆರಂಭವಾದ ದಿನ : 2019, ಡಿಸೆಂಬರ್ 12
ಕಾಮಗಾರಿ ಮುಕ್ತಾಯವಾದ ದಿನ : 2025, ಜುಲೈ 14
ಕಾಮಗಾರಿ ನಿರ್ವಹಿಸಿದ ಏಜೆನ್ಸಿ : ದಿಲೀಪ್ ಬಿಲ್ಡ್ ಕಾನ್
ಸೇತುವೆಯ ಉದ್ದ : 2125 ಮೀಟರ್
ಸೇತುವೆಯ ಅಗಲ : 16 ಮೀಟರ್
ಸೇತುವೆ ಫುಟ್ಪಾತ್ : 2×1.5 ಮೀಟರ್
ಸಂಪರ್ಕ ರಸ್ತೆ : 1.05 ಕಿ.ಮೀ. ನಿಂದ 3 ಕಿ.ಮೀ.
ತಳಪಾಯ : 164 ಫೈಲ್ಸ್
ಉಕ್ಕಿನ ಕೇಬಲ್ ಉದ್ದ : 470 ಮೀಟರ್
ಕೇಬಲ್ ಎತ್ತರ : 38.50 ಮೀಟರ್
ಮಲೆನಾಡ ಹಚ್ಚ ಹಸಿರಿನ ರಾಜಧಾನಿ ಶಿವಮೊಗ್ಗ ಜಿಲ್ಲೆ ಹಲವಾರು ವಿಶೇಷತೆಗಳಿಂದ ವಿಶ್ವ ಭೂಪಟದಲ್ಲಿ ಗುರುತಿಸಿಕೊಂಡಿದೆ. ಅದರಲ್ಲೂ, ವಿಶೇಷವಾಗಿ ಸಾಗರ ತಾಲ್ಲೂಕಿನ ಶರಾವತಿ ಹಿನ್ನೀರಿನ ಅಂಬಾರಗೋಡ್ಲು – ಕಳಸವಳ್ಳಿ ನಡುವೆ ಸಾಗುವ ಹಾದಿಗೆ ನಿರ್ಮಾಣ ಮಾಡಿರುವ ಈ ಸಿಗಂದೂರು ಸೇತುವೆ ಒಂದು ಹೊಸ ಮೈಲಿಗಲ್ಲು ಎಂದು ದಾಖಲೆ ಬರೆದಿದೆ.
ಸಿಗಂದೂರು ಸೇತುವೆ ದೇಶದ ಎರಡನೇ ಅತೀ ಉದ್ದನೆಯ ಸೇತುವೆಯಾಗಲಿದೆ. ಶರಾವತಿ ನದಿಯ ಪ್ರವಾಹ ತಡೆಯುವ ಸಾಮರ್ಥ್ಯ ಹೊಂದಿದೆ. ಲಾಂಚ್ ಸಂಚಾರ ಸಮಯ ಮುಗಿದ ನಂತರ ಸಿಗಂದೂರು ಅಥವಾ ತುಮರಿಯಿಂದ ಸಾಗರ ಪಟ್ಟಣಕ್ಕೆ ಬರಲು ಅಂದಾಜು 80 ಕಿ.ಮೀ ಪ್ರಯಾಣಿಸಬೇಕಿತ್ತು. ಈ ಸೇತುವೆ ಪ್ರಯಾಣದ ಅವಧಿಯನ್ನು ಬಹುತೇಕ ಕಡಿಮೆ ಮಾಡಲಿದೆ. ಇದರ ಜೊತೆಯಲ್ಲಿ ಶಿವಮೊಗ್ಗ ಹಾಗೂ ಉಡುಪಿ ನಡುವಿನ ಸಂಪರ್ಕ ಮತ್ತಷ್ಟು ಸನಿಹವಾಗಲಿದೆ. ಹಾಗೆಯೇ ಪ್ರಸಿದ್ದ ಧಾರ್ಮಿಕ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಾಲಯ ಭೇಟಿ ಸುಲಭವಾಗಲಿದೆ, ದೇವಾಲಯದ ಭಕ್ತರು ಹಾಗು ಸ್ಥಳೀಯರು ಲಾಂಚ್ ಅವಲಂಬಿಸಿ ಕಾರ್ಯಚಟುವಟಿಕೆ ನಡೆಸುವುದಕ್ಕೆ ತೆರೆ ಬೀಳಲಿದೆ. ಜತೆಗೆ ಶರಾವತಿ ಹಿನ್ನೀರು ಭಾಗದ ಸಂಪರ್ಕ, ಆರ್ಥಿಕ ಚಟುವಟಿಕೆ, ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾಗಲಿದೆ.
ಸೇತುವೆ ಉದ್ಘಾಟನೆ ಕುರಿತು ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಸಂಕಲ್ಪದ ಫಲವೇ ಐತಿಹಾಸಿಕ ಸಿಗಂಧೂರು ಸೇತುವೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸುಮಾರು 423 ಕೋಟಿ ಅನುದಾನ ಬಿಡುಗಡೆಗೊಳಿಸಿ ಆರು ದಶಕಗಳ ಹೋರಾಟಕ್ಕೆ ಶಾಶ್ವತ ಪರಿಹಾರ ನೀಡಲು ಶರಾವತಿ ಹಿನ್ನೀರಿಗೆ ನಿರ್ಮಿತವಾದ ಕೇಬಲ್ ಆಧಾರಿತ ದೇಶದ ಎರಡನೇ ಅತಿ ಉದ್ದದ ಅಂಬಾರಗೋಡ್ಲು – ಕಳಸವಳ್ಳಿ – ಸಿಗಂಧೂರು ಸಂಪರ್ಕ ಸೇತುವೆ ನಾಳೆ ರಾಷ್ಟ್ರಕ್ಕೆ ಸಮರ್ಪಣೆ ಆಗಲಿದೆ ಎಂದರು.
ಶಿವಮೊಗ್ಗ ಕ್ಷೇತ್ರದ ನನ್ನ ಪ್ರೀತಿಯ ಮತದಾರ ಬಾಂಧವರು ಈ ಐತಿಹಾಸಿಕ ಉದ್ಘಾಟನಾ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ರಾಷ್ಟ್ರಕ್ಕೆ ಸಮರ್ಪಣೆ ಮಾಡುವ ಕ್ಷಣಕ್ಕೆ ಕಾರಣೀಭೂತರಾಗಬೇಕೆಂದು ಮನವಿ ಮಾಡಿದರು.
Related Articles
Thank you for your comment. It is awaiting moderation.
Comments (0)