ಪರಿಶಿಷ್ಟ ಜಾತಿಗಳ ಮೀಸಲಾತಿ ಸಂಬಂಧಿಸಿದ ಅನ್ಯಾಯ ಸರಿಪಡಿಸಲು ಸರ್ಕಾರಕ್ಕೆ ವಾರದ ಗಡುವು

ಬೆಂಗಳೂರು: ಪರಿಶಿಷ್ಟ ಜಾತಿಗಳ ಮೀಸಲಾತಿ ವಿಚಾರದಲ್ಲಿ ಬಂಜಾರ, ಭೋವಿ, ಕೊರಚ, ಕೊರವ, ಅಲೆಮಾರಿ ಸಮುದಾಯದವರಿಗೆ ಅನ್ಯಾಯ ಮಾಡುವ ಮತ್ತು ಸಮಾಜದಲ್ಲಿ ವಿಷಬೀಜ ಬಿತ್ತುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ್ದಾರೆ ಇದನ್ನು ಸರಿಪಡಿಸದೇ ಇದ್ದಲ್ಲಿ ಹೋರಾಟ ಉಗ್ರ ಸ್ವರೂಪಕ್ಕೆ ತಿರುಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.

ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ಅವೈಜ್ಞಾನಿಕವಾಗಿ ವರ್ಗೀಕರಣ ಮಾಡಿ ಬಂಜಾರ, ಭೋವಿ, ಕೊರಚ, ಕೊರವ ಸಮುದಾಯಗಳಿಗೆ ಅನ್ಯಾಯವೆಸಗಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದು ಬೆಳಿಗ್ಗೆ ಫ್ರೀಡಂ ಪಾರ್ಕ್ ನಲ್ಲಿ “ಬೆಂಗಳೂರು ಚಲೋ” ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು,ಮುಖ್ಯಮಂತ್ರಿಗಳೇ, ಮನೆ ಮುರಿಯುವ ಕೆಲಸ ಮಾಡುವುದು ಸುಲಭ. ಮನೆ ಕಟ್ಟುವುದು ಅತ್ಯಂತ ಕಷ್ಟದ ಕೆಲಸ. ರಾಜ್ಯದ ಜನರು ನಿಮಗೆ ಆಶೀರ್ವಾದ ಮಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ತಂದಿದ್ದಾರೆ. ಈ ರಾಜ್ಯದ ಎಲ್ಲ ಪರಿಶಿಷ್ಟ ಜಾತಿ, ಪರಿಶಿಷ್ಟ ಸಮುದಾಯಗಳು, ಅಲೆಮಾರಿ ಸಮುದಾಯಕ್ಕೆ ನ್ಯಾಯ ಕೊಡುವ ಅಪೇಕ್ಷೆ ಜನರಲ್ಲಿತ್ತು ಆದರೆ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಸರಕಾರವು ಶೋಷಿತರಿಗೆ ನ್ಯಾಯ ನೀಡುವ ವಿಚಾರದಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.

ಬಂಜಾರ, ಭೋವಿ, ಕೊರಚ, ಕೊರವ, ಅಲೆಮಾರಿ ಸಮುದಾಯದವರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಹಿಂದೆ ಬಿಜೆಪಿ ಸರಕಾರ ಇದ್ದಾಗ ನಿಮ್ಮ ಸಮಾಜಕ್ಕೆ ಅನ್ಯಾಯ ಆಗಬಾರದೆಂದು ಶೇ 4.5 ರಷ್ಟು ಮೀಸಲಾತಿ ಕೊಟ್ಟಿದ್ದರು. ಅಲೆಮಾರಿ ಸಮುದಾಯಕ್ಕೆ ನ್ಯಾಯ ಕೊಡಲು ಶೇ 1 ಪ್ರತ್ಯೇಕವಾಗಿ ಇಡಲಾಗಿತ್ತು. ಬೊಮ್ಮಾಯಿಯವರ ನೇತೃತ್ವದ ಬಿಜೆಪಿ ಸರಕಾರ ಇದ್ದಾಗ ನಿಮ್ಮ ಪರವಾಗಿ ನಿರ್ಧಾರ ಮಾಡಿತ್ತು.ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ ಅವರು ತಾಂಡಾ ಅಭಿವೃದ್ಧಿ ನಿಗಮ, ಬೋವಿ ಅಭಿವೃದ್ಧಿ ನಿಗಮ ರಚಿಸಿದ್ದರು. ಅಲೆಮಾರಿ ಸಮುದಾಯ, ಕೊರಚ, ಕೊರಮ ಸೇರಿ ಯಾವುದೇ ಸಮುದಾಯಕ್ಕೆ ಅನ್ಯಾಯ ಆಗದ ರೀತಿಯಲ್ಲಿ ಹಿಂದೆ ಯಡಿಯೂರಪ್ಪ ಅವರು ನೋಡಿಕೊಂಡಿದ್ದರು ಎಂದರು.

ಬ್ರಿಟಿಷರ ಒಡೆದಾಳುವ ನೀತಿಯನ್ನು ಕಾಂಗ್ರೆಸ್ ಸರಕಾರ ಈಗ ಅನುಸರಿಸುತ್ತಿದೆ. ಬಂಜಾರ, ಭೋವಿ, ಕೊರಚ, ಕೊರವ, ಅಲೆಮಾರಿ ಸಮುದಾಯದವರಿಗೆ ಅನ್ಯಾಯ ಮಾಡುವ ಮತ್ತು ಸಮಾಜದಲ್ಲಿ ವಿಷಬೀಜ ಬಿತ್ತುವ ಕೆಲಸವನ್ನು ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮಾಡಿದ್ದಾರೆ. ಮುಖ್ಯಮಂತ್ರಿಗಳನ್ನು ಆ ಭಗವಂತನೂ ಕ್ಷಮಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ರಾಜ್ಯ ಸರಕಾರಕ್ಕೆ ಒಂದು ವಾರದ ಗಡುವು: 

ಪರಿಶಿಷ್ಟ ಜಾತಿಗಳ ಮೀಸಲಾತಿಯ ಸಂಬಂಧಿಸಿದ ಅನ್ಯಾಯವನ್ನು ಸರಿಪಡಿಸಲು ಸರಕಾರಕ್ಕೆ ಒಂದು ವಾರದ ಗಡುವು ನೀಡಲಾಗಿದೆ ಎಂದು ಮಾಜಿ ಶಾಸಕರಾದ ಪಿ. ರಾಜೀವ್ ಅವರು ತಿಳಿಸಿದ್ದಾರೆ.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಪಿ. ರಾಜೀವ್ ಅವರು ಸರಕಾರಕ್ಕೆ ನಮ್ಮ ಬೇಡಿಕೆಗಳನ್ನು ಸಲ್ಲಿಸಲಾಗಿದೆ. ‘ಇಂದಿನದು ಕೇವಲ ಟ್ರೈಲರ್ ಮಾತ್ರ; ಪಿಕ್ಚರ್ ಅಭಿ ಬಾಕಿ ಹೈ’ ಅಧಿಕಾರಿಗಳು ತಮಗೆ ಮನವಿ ಕೊಡುವಂತೆ ಹೇಳಿದ್ದು ನಾವು ಅದಕ್ಕೆ ಒಪ್ಪಲಿಲ್ಲ; ಬಳಿಕ ಹಿರಿಯ ಅಧಿಕಾರಿಗಳನ್ನು ಕಳಿಸುವುದಾಗಿ ಹೇಳಿದ್ದರು. ಅದಕ್ಕೂ ಒಪ್ಪಲಿಲ್ಲ; ಹೋರಾಟವು ಉಗ್ರ ಸ್ವರೂಪ ಪಡೆದಾಗ ಸಚಿವರು ಬಂದು ನಮ್ಮ ಮನವಿ ಸ್ವೀಕರಿಸಿದ್ದಾರೆ ಎಂದು ವಿವರಿಸಿದರು.

ಈ ಸರಕಾರಕ್ಕೆ ಒಂದು ವಾರದ ಒಳಗೆ ಈ ಸಮುದಾಯಗಳಿಗೆ ನ್ಯಾಯ ದೊರಕಿಸಿ ಕೊಡಲು ಗಡುವು ಹಾಕಿದ್ದೇವೆ. ಒಂದು ವೇಳೆ ಒಂದು ವಾರದ ಒಳಗೆ ಇವರು ತೀರ್ಮಾನ ತೆಗೆದುಕೊಳ್ಳದೇ ಇದ್ದರೆ ಇನ್ನಷ್ಟು ತೀವ್ರ ರೀತಿಯ ಹೋರಾಟ ಮಾಡಲಿದ್ದೇವೆ.ಒಂದು ವಾರ ಕಾಯೋಣ. ಈ ಸರಕಾರ ನಮ್ಮ ಪರವಾಗಿ ತೀರ್ಮಾನ ತೆಗೆದುಕೊಳ್ಳದೇ ಇದ್ದರೆ, ಎಲ್ಲ ಸ್ವಾಮೀಜಿಗಳು, ರಾಜಕೀಯ ಮುಖಂಡರು ಸೇರಿ ಮುಂದಿನ ಹೋರಾಟದ ಸ್ವರೂಪವನ್ನು ತೀರ್ಮಾನ ಮಾಡುತ್ತೇವೆ. ಎಂದರು.

Related Articles

Comments (0)

Leave a Comment