ನರೇಗಾ ಅಕ್ರಮ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿ: ಸಿಎಂ ಸೂಚನೆ

ಬೆಂಗಳೂರು: ರಾಜ್ಯದಲ್ಲಿ ನರೇಗಾ ಯೋಜನೆ ಮಾಡಿ ಅಕ್ರಮ ಎಸಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.

ವಿಧಾನಸೌಧದ ಸಮ್ಮೇಳನಾ ಕೊಠಡಿಯಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಮಟ್ಟದ ದಿಶಾ ಸಮಿತಿ ಸಭೆಯಲ್ಲಿ ಕೇಂದ್ರದಿಂದ ಇನ್ನೂ ನರೇಗಾ ಹಣ ಬಾರದ ಅಂಕಿ ಅಂಶಗಳನ್ನು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು. ಇದಕ್ಕೆ ಅಸಮಧಾನಗೊಂಡ ಸಿಎಂ ಮೂರು ತಿಂಗಳ ಒಳಗೆ ನರೇಗಾ ಕ್ರಿಯಾ ಯೋಜನೆ ಕಡ್ಡಾಯವಾಗಿ ಸಿದ್ದಪಡಿಸಬೇಕು. ಏನೇ ಕಾರಣದಿಂದ ಹಿಂದಿನ ಕ್ರಿಯಾ ಯೋಜನೆ ಆಗಿದ್ದರೆ ಅದನ್ನು ಮುಂದಿನ ಕ್ರಿಯಾ ಯೋಜನೆಯಲ್ಲಿ ಸೇರ್ಪಡೆಗೊಳಿಸಬೇಕು ಎಂದು ಸೂಚಿಸಿದರು.

ಇದೇ ವೇಳೆ, ರಾಜ್ಯದಲ್ಲಿ ನರೇಗಾ ಯೋಜನೆ ಮಾಡಿ ಅಕ್ರಮ ಎಸಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ, ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಎಂದು ಸಿಎಂ ತಾಕೀತು ಮಾಡಿದರು.

ಸಭೆಯಲ್ಲಿ ಕೇಂದ್ರ ಪಿಂಚಣಿ ಹಣ ಬಾಕಿ ಉಳಿಸಿಕೊಂಡಿರುವ ಬಗ್ಗೆಯೂ ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಗರಂ ಆದ ಸಿಎಂ, ಸಾಮಾಜಿಕ ಭದ್ರತಾ ಯೋಜನೆಯಡಿ ವಿಧವಾ ಪಿಂಚಣಿ, ವೃದ್ದಾಪ್ಯ ಪಿಂಚಣಿ, ಅಂಗವಿಕಲರ ಪಿಂಚಣಿ ಯೋಜನೆಗಳಿಗೆ ರಾಜ್ಯದ ಅನುದಾನ 5,665.95 ಕೋಟಿ, ಕೇಂದ್ರದ ಅನುದಾನ 559.61ಕೋಟಿ. ಆದರೆ, ಕೇಂದ್ರದಿಂದ ಬಿಡುಗಡೆ ಆಗಿರುವುದು 113.92 ಕೋಟಿ ರೂ. ಮಾತ್ರ .ಈ ಸಣ್ಣ ಮೊತ್ತವನ್ನೂ ಕೇಂದ್ರ ಸರ್ಕಾರಕ್ಕೆ ಕೊಡಲು ಸಾಧ್ಯವಾಗುತ್ತಿಲ್ಲ. ಇದನ್ನೂ ಎರಡು ವರ್ಷಗಳಿಂದ ಬಾಕಿ ಉಳಿಸಿಕೊಂಡಿದೆ ಕೇಂದ್ರ. ಇದು ಏಕೆ? ಸಾಮಾಜಿಕ ಯೋಜನೆಗಳಲ್ಲೂ ಕಡಿತ ಮಾಡಿದರೆ ಹೇಗೆ? ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸಕಾಲದಲ್ಲಿ  ಹಣ ಬಿಡುಗಡೆ ಆಗದಿದ್ದರೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು ಹೇಗೆ? ಎಂದು ಸಮಿತಿ ಸದಸ್ಯರನ್ನು ಪ್ರಶ್ನಿಸಿದರು.

ರಾಜ್ಯ ಸರ್ಕಾರವೇ ಬಹುತೇಕ ಹಣ ಕೊಡುವ ಯೋಜನೆಗಳಿಗೆ ಪ್ರಧಾನಿ ಮತ್ತು ಕೇಂದ್ರದ ಹೆಸರಿದೆ. ಆದರೂ ಚೂರು, ಪಾರು ಕೇಂದ್ರದ ಹಣವೂ ಬರುತ್ತಿಲ್ಲ. ಈ ನಿರಂತರ ಅನ್ಯಾಯ ಪ್ರಶ್ನಿಸಬೇಕಲ್ಲವಾ ನೀವು? 2024-25ರ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳಡಿ ರಾಜ್ಯದ ಅನುದಾನ 24,960 ಕೋಟಿ ರೂಪಾಯಿಗಳು, ಕೇಂದ್ರದ ಅನುದಾನ  22,758 ಕೋಟಿ ರೂಪಾಯಿಗಳಿದ್ದು ಕೇಂದ್ರದಿಂದ 18,561ಕೋಟಿ ಮಾತ್ರ ಬಿಡುಗಡೆ ಆಗಿದ್ದು, 4,195 ಕೋಟಿ ರೂಪಾಯಿಗಳು ಬಿಡುಗಡೆ ಆಗಿಲ್ಲ. ರಾಜ್ಯಕ್ಕೆ ಬರಬೇಕಾಗಿರುವ ಹಣವನ್ನು ಸರಿಯಾಗಿ ಬಿಡುಗಡೆ ಮಾಡದಿದ್ದರೆ ಹೇಗೆ ಎಂದು ಸಿಎಂ ಅಸಮಾಧಾನ ವ್ಯಕ್ತಪಡಿಸಿದರು .

15ನೇ ಹಣಕಾಸು ಆಯೋಗದಲ್ಲಿ 5,495 ಕೋಟಿ ರೂಪಾಯಿ ವಿಶೇಷ ಅನುದಾನ ಕೊಡಬೇಕು, ಕೆರೆ ಮತ್ತು ಫೆರಿಫೆರಲ್ ರಿಂಗ್ ರಸ್ತೆಗೆ ಕೊಡಬೇಕಾದ ಹಣ ಸೇರಿ ಒಟ್ಟು 11,495 ಕೋಟಿ ರೂಪಾಯಿ ಕೇಂದ್ರದಿಂದ ಬರಬೇಕಿತ್ತು. ಏನನ್ನೂ ಕೊಡ್ತಾ ಇಲ್ಲ. ನಾವು ರಾಜ್ಯದಿಂದ 4.5 ಲಕ್ಷ ಕೋಟಿ ತೆರಿಗೆ ಕೊಟ್ಟರೂ ರಾಜ್ಯಕ್ಕೆ ಸಣ್ಣ ನೆರವೂ ಕೇಂದ್ರದಿಂದ ಬರುವುದಿಲ್ಲ, ಕೇಂದ್ರ ಪುರಸ್ಕೃತ ಯೋಜನೆಗಳಿಗೂ ಹಣ ಕೊಡುವುದಿಲ್ಲ, ಆದರೆ, ಅಭಿವೃದ್ಧಿಗೆ ರಾಜ್ಯ ಸರ್ಕಾರದ ಬಳಿ ಹಣ ಇಲ್ಲ ಅಂತ ನೀವೇ ಹೊರಗೆ ಆರೋಪ ಮಾತಾಡ್ತೀರಿ ಎಂದು ಸಿಎಂ ಟೀಕಿಸಿದರು.

ನಾನೇ ಎರಡು ಬಾರಿ ನಿರ್ಮಲಾ ಸೀತರಾಮನ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದರೂ ಕೊಡಲಿಲ್ಲ. ರಾಜ್ಯದ ಸಂಸದರು ಒಟ್ಟಾಗಿ ಇದನ್ನು ಕೊಡಿಸಲು ಯತ್ನಿಸಬೇಕು. ಇಷ್ಟು ದಿನಗಳೊಳಗೆ ನೀವು ಕೊಡಿಸಬೇಕಿತ್ತು. ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಬೇಡಿ ಎಂದು ಸಿಎಂ ತಿಳಿಸಿದರು.

ಭದ್ರಾ ಮೇಲ್ದಂಡೆ ಯೋಜನೆಗೆ 2023-24ರ ಕೇಂದ್ರ ಬಜೆಟ್ನಲ್ಲಿ 5,360 ಕೋಟಿ ಅನುದಾನ ಘೋಷಣೆ ಆಗಿದ್ದರೂ ಒಂದು ರೂಪಾಯಿ ಕೂಡಾ ಈವರೆಗೂ ಬಿಡುಗಡೆ ಆಗಿಲ್ಲ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಎರಡು ಬಾರಿ ನಿಯೋಗದೊಂದಿಗೆ ಭೇಟಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Related Articles

Comments (0)

Leave a Comment