ನೆಕ್ಸ್ಟ್ ಕ್ಯಾಬಿನೆಟ್‌‌ನಲ್ಲಿ ಅವಕಾಶ ಸಿಗುತ್ತೋ, ಇಲ್ವೋ ಎಂದು ಮಧು ಬಂಗಾರಪ್ಪಗೆ ಭಯ ಶುರುವಾಗಿದೆ; ವಿಜಯೇಂದ್ರ

ಶಿವಮೊಗ್ಗ: ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ಮುಂದುವರಿಯುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ನಮ್ಮ ಜಿಲ್ಲೆಯ ಸಚಿವರಿಗೆ ಭಯ ಶುರುವಾಗಿದೆ. ಅವರಿಗೆ ಹೊಸ ಸಂಪುಟದಲ್ಲಿ ಸಚಿವರಾಗಿ ಮುಂದುವರಿಯುವ ಬಗ್ಗೆ ಅನುಮಾನವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಿಕ್ಷಣ ಸಚಿವ ಮಧುಬಂಗಾರಪ್ಪ ಹೆಸರು ಹೇಳದೆ ಪರೋಕ್ಷವಾಗಿ ವ್ಯಂಗ್ಯವಾಡಿದರು.

ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರದ ಚರ್ಚೆ ನಡುವೆಯೂ ಸಂಘಟನಾತ್ಮಕ ಚಟುವಟಿಕೆ ಮುಂದುವರಿಸಿರುವ ವಿಜಯೇಂದ್ರ ತವರು ಜಿಲ್ಲೆಯಲ್ಲಿ ಶಿವಮೊಗ್ಗ, ಚಿಕ್ಕಮಗಳೂರು ಉತ್ತರ ಕನ್ನಡ ಜಿಲ್ಲೆಯ ಬಿಜೆಪಿ ಪ್ರಮುಖರ ಸಭೆ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ರಾಜ್ಯಾಧ್ಯಕ್ಷರಾಗಿ ಪುನರಾಯ್ಕೆಯಾಗುವ ವಿಶ್ವಾಸದ ನುಡಿಗಳನ್ನಾಡಿದರು. ಅಧಿಕಾರ ವಹಿಸಿಕೊಂಡಾಗಿನಿಂದ ಈವರೆಗೂ ರಾಜ್ಯಾಧ್ಯಕ್ಷರಾಗಿ ಸರ್ಕಾರದ ವಿರುದ್ದ ನಡೆಸಿದ ತಮ್ಮ ಹೋರಾಟವನ್ನು ಸಮರ್ಥಿಸಿಕೊಂಡರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮುಡಾ ಪ್ರಕರಣದಲ್ಲಿ 14 ನಿವೇಶನಗಳನ್ನು ಹಿಂತಿರುಗಿಸುವಂತಾಗಿದ್ದು, ವಾಲ್ಮೀಕಿ ನಿಗಮದ ಹಗರಣದಲ್ಲಿ ಸಚಿವರು ರಾಜೀನಾಮೆ ಕೊಡುವಂತಾಗಿದ್ದು ನನ್ನ ಅಧ್ಯಕ್ಷತೆಯಲ್ಲಿ ರಾಜ್ಯ ಬಿಜೆಪಿ ನಡೆಸಿದ ಹೋರಾಟದ ಫಲವೇ ಆಗಿದೆ ಎಂದು ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ ಎನ್ನುವ ಆತ್ಮವಿಶ್ವಾಸದ ನುಡಿಗಳನ್ನಾಡಿದರು.

ನಮ್ಮ ಪಕ್ಷದಲ್ಲಿ ಅನೇಕ ಹಿರಿಯರು, ಸಾವಿರಾರು ಕಾರ್ಯಕರ್ತರು ಬದ್ದತೆಯಿಂದ ಪಕ್ಷಕ್ಕಾಗಿ ದುಡಿದಿದ್ದರ ಫಲವಾಗಿ ದೇಶದಲ್ಲಿ ಮತ್ತು ಹಲವಾರು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ. ಆದರೆ, ಕಾಂಗ್ರೆಸ್ ಪಕ್ಷ ಅನುಕಂಪ ಮತ್ತು ಇತರ ಕಾರಣಗಳಿಂದ 67 ವರ್ಷ ದೇಶವನ್ನಾಳಿದೆ. ರಾಜ್ಯದಲ್ಲಿ ಅಭಿವೃದ್ದಿ ಕೆಲಸಗಳು ನಡೆಯುತ್ತಿಲ್ಲ. ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜರಾಯರೆಡ್ಡಿ ಅವರೇ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕೆಂಬ ಹೇಳಿಕೆ ನೀಡಿದ್ದೇ ಇದಕ್ಕೆ ಸಾಕ್ಷಿ. ಅಭಿವೃದ್ದಿ, ಅನುದಾನಗಳ ಕುರಿತು ಕಾಂಗ್ರೆಸ್‌‌ನ ಶಾಸಕರೇ ಬಹಿರಂಗವಾಗಿ ಹೇಳಿಕೆ ನೀಡುತ್ತಿರುವುದೇ ಸರ್ಕಾರ ದುಃಸ್ಥಿತಿಯನ್ನು ಸಾರುತ್ತಿದೆ ಎಂದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಜನರಿಗೆ ಇದನ್ನು ತಿಳಿಸುವ ಕೆಲಸವನ್ನು ನಾವು ಮಾಡಬೇಕು. ಇವರ ಬಂಡವಾಳ ಬಯಲು ಮಾಡಬೇಕು. ಇದರ ಜತೆ ಮೋದಿ ಅವರ ಯೋಜನೆಗಳನ್ನು ಮನೆ ಮನೆಗೆ ತಲುಪಿಸಬೇಕು. ಪ್ರತಿಯೊಬ್ಬ ಕಾರ್ಯಕರ್ತರೂ ಮೋದಿ ಅವರ ರಾಯಭಾರಿಯಂತೆ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಸದ್ಯದಲ್ಲೇ ಎದುರಾಗಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಸಂಘಟನೆಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕೆಂದು ಕರೆ ನೀಡಿದ ವಿಜಯೇಂದ್ರ, ಸದ್ಯ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಸಾಮಾನ್ಯರು ಆಕ್ರೋಶಿತರಾಗಿದ್ದು, ಜನವಿರೋಧಿ ಸರ್ಕಾರದ ವಿರುದ್ಧದ ಎಲ್ಲ ಹೋರಾಟಗಳನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ಮನವಿ ಮಾಡಿದರು.

Related Articles

Comments (0)

Leave a Comment