ನೀತಿ ಆಯೋಗದ ಸಭೆಗೆ ಗೈರಾಗಲು ಕಾರಣ ತಿಳಿಸಿ: ವಿಜಯೇಂದ್ರ ಒತ್ತಾಯ
- by Suddi Team
- May 25, 2025
- 43 Views

ಮೈಸೂರು: ಮುಖ್ಯಮಂತ್ರಿಗಳೇ, ನೀತಿ ಆಯೋಗದ ಸಭೆಗೆ ಗೈರಾಗಲು ಕಾರಣವನ್ನು ನೀವು ರಾಜ್ಯದ ಜನರಿಗೆ ತಿಳಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಒತ್ತಾಯಿಸಿದ್ದಾರೆ.
ಇಂದು ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಜೀ ಅವರು ನಿನ್ನೆ ದೆಹಲಿಯಲ್ಲಿ ಮಹತ್ವದ ನೀತಿ ಆಯೋಗದ ಸಭೆ ಕರೆದಿದ್ದರು. ಆ ಸಭೆಯಲ್ಲಿ ಪ್ರಮುಖವಾಗಿ ಭಾರತವು 20247ನೇ ಇಸವಿಗೆ ಒಂದು ಅಭಿವೃದ್ಧಿ ಹೊಂದಿದ ದೇಶವಾಗಿ ಪರಿವರ್ತನೆ ಆಗಬೇಕೆಂಬ ನಿಟ್ಟಿನಲ್ಲಿ ವಿವಿಧ ರಾಜ್ಯಗಳ ಅಭಿಪ್ರಾಯಗಳು, ಆ ರಾಜ್ಯಗಳ ದೂರದೃಷ್ಟಿತ್ವ- ಇವೆಲ್ಲವನ್ನೂ ಸಮಗ್ರವಾಗಿ ಚರ್ಚಿಸಲು ಉದ್ದೇಶಿಸಲಾಗಿತ್ತು ಎಂದು ವಿವರಿಸಿದರು.
ನೀತಿ ಆಯೋಗದ ಆ ಸಭೆಯಲ್ಲಿ ಕಾಂಗ್ರೆಸ್ ಆಡಳಿತವಿರುವ ತೆಲಂಗಾಣ, ಹಿಮಾಚಲ ಪ್ರದೇಶ ರಾಜ್ಯಗಳ ಮುಖ್ಯಮಂತ್ರಿಗಳು, ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರೂ ಭಾಗವಹಿಸಿದ್ದರು. ಆದರೆ, ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆ ಸಭೆಯಲ್ಲಿ ಪಾಲ್ಗೊಳ್ಳದೆ ಇರುವುದು ದುರದೃಷ್ಟದ ವಿಚಾರ ಎಂದು ನುಡಿದರು. ಸಿದ್ದರಾಮಯ್ಯನವರು ಆ ಸಭೆಗೆ ಯಾಕೆ, ಯಾವ ಕಾರಣಕ್ಕಾಗಿ ಹೋಗಿಲ್ಲ? ಬಹಿಷ್ಕಾರ ಹಾಕಿದರೇ? ಯಾವ ಕಾರಣಕ್ಕೆ ಸಭೆಯಲ್ಲಿ ಭಾಗವಹಿಸಬೇಕೆಂದು ಮುಖ್ಯಮಂತ್ರಿಗಳಿಗೆ ಅನಿಸಿಲ್ಲ ಎಂದು ಕೇಳಿದರು.
ಕಾಂಗ್ರೆಸ್ ಸರಕಾರದ ಶಾಸಕರನ್ನು ದೆಹಲಿಗೆ ಕರೆದುಕೊಂಡು ಹೋಗಿ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದರು. ಆದರೆ, ಇಂಥ ಮಹತ್ವದ ಸಭೆಯಲ್ಲಿ ಪಾಲ್ಗೊಂಡಿಲ್ಲವೆಂದಾದರೆ ಎಲ್ಲೋ ಒಂದು ಕಡೆ ರಾಜ್ಯದ ಮುಖ್ಯಮಂತ್ರಿಗಳು ರಾಜ್ಯದ ಅಭಿವೃದ್ಧಿ ಬದಿಗಿಟ್ಟು, ರಾಜಕಾರಣ ಮಾಡುವುದೇ ಇವರಿಗೆ ಆದ್ಯತೆ ಆಗಿದೆ ಎಂದು ಆಕ್ಷೇಪಿಸಿದರು. ಇದು ರಾಜ್ಯಕ್ಕೆ ಮಾಡುವ ಅನ್ಯಾಯ ಎಂದು ಟೀಕಿಸಿದರು.
ಸಂಘರ್ಷದ ಹಾದಿಯಿಂದ ರಾಜ್ಯಕ್ಕೆ ಒಳಿತಾಗದು..ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದಾಗಿನಿಂದ ಕೇಂದ್ರ ಸರಕಾರದ ವಿರುದ್ಧ ಸಂಘರ್ಷದ ಹಾದಿಯನ್ನು ತಳೆದಿದ್ದಾರೆ; ತುಳಿಯುತ್ತಿದ್ದಾರೆ. ಈ ಸಂಘರ್ಷದ ಹಾದಿ ರಾಜ್ಯಕ್ಕೆ ಒಳಿತು ನೀಡದು ಎಂದು ವಿಜಯೇಂದ್ರ ಅವರು ಎಚ್ಚರಿಸಿದರು.
ಈ ವಿಷಯವನ್ನು ಹಲವು ಬಾರಿ ಪ್ರಸ್ತಾಪ ಮಾಡಿದ್ದೇವೆ. ಮುಖ್ಯಮಂತ್ರಿಗಳ ಈ ನಿಲುವಿನಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಯಾವ ಕಾರಣಕ್ಕೆ ಸಭೆಗೆ ಹೋಗಿಲ್ಲವೆಂದು ಸಿದ್ದರಾಮಯ್ಯನವರು ರಾಜ್ಯದ ಜನರಿಗೆ ತಿಳಿಸಬೇಕು ಎಂದು ಆಗ್ರಹಿಸಿದರು.
Related Articles
Thank you for your comment. It is awaiting moderation.
Comments (0)