ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೆಲ ಸಭಿಕರ ವರ್ತನೆಗೆ ಸಿಎಂ ಗರಂ..!

ಮೈಸೂರು: ಒಂದು ಕಡೆ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಅದ್ದೂರಿ ದಸರಾಗೆ ಚಾಕನೆ ಸಿಕ್ಕರೆ ಮತ್ತೊಂದೆಡೆ ವೇದಿಕೆ ಕಾರ್ಯಕ್ರಮದಲ್ಲಿ ಸಭಿಕರ ವರ್ತನೆ ಸಿಎಂ ಸಿದ್ದರಾಮಯ್ಯಗೆ ಕಿರಿಕಿರಿಯಾಗಿವಂತೆ ಮಾಡಿತು. ಗರಂ ಆಗಿ ಗದರುತ್ತಲೇ ಮುಖ್ಯಮಂತ್ರಿಗಳು ಭಾಷಣ ಮಾಡುವಂತಾಯಿತು.

ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ, ನಾಡಹಬ್ಬ ಐತಿಹಾಸಿಕ ದಸರಾ ಉದ್ಘಾಟನೆ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣ ಆರಂಭಿಸುತ್ತಲೇ ಕೆಲವರು ವೇದಿಕೆಯಿಂದ ಹೊರ ಹೋಗಲು ಪ್ರಯತ್ನಿಸಿದರು. ಈ ವೇಳೆ ಇದನ್ನು ಗಮನಿಸಿದ ಸಿಎಂ ಸಿಟ್ಟಿನಿಂದ, ‘ಏಯ್ ಇನ್ನೊಂದು ಸ್ವಲ್ಪ ಹೊತ್ತು ಕೂತ್ಕೊಳ್ಳೊಕೆ ಆಗಲ್ವಾ ನಿಮಗೇ? ಕೂತ್ಕೊಳ್ರೊ.. ಅವ್ನ್ ಯಾರೋ ಅವ್ನು.. ಒಂದ್ ಸಾರಿ ಹೇಳಿದ್ರೆ ಗೊತ್ತಾಗಲ್ವಾ ನಿಮಗೆ? ಯಾಕ್ ಬರ್ತೀರಿ ನೀವು ಇಲ್ಲಿಗೆ, ನೀವೆಲ್ಲಾ ಮನೇಲಿ ಇರಬೇಕಾಗಿತ್ತು ಎಂದು ಗದರಿದರು. ಅಲ್ಲದೆ, ‘ಪೊಲೀಸ್ ನವರೇ ಅವರನ್ನು ಬಿಡಬೇಡಿ. ಎಲ್ರನ್ನೂ ವಾಪಸ್ ಕಳುಹಿಸಿ. ಅರ್ಧ ಗಂಟೆ, ಒಂದು ಗಂಟೆ ಕೂತ್ಕೊಳ್ಳೇಕೆ ಆಗದೇ ಇದ್ದ ಮೇಲೆ ಯಾಕೆ ಬರ್ತೀರ ಫಂಕ್ಷನ್ ಗೆ ನೀವು? ಎಂದು ಸಿಟ್ಟಾಗಿ ಹೇಳಿ ನಂತರ ಮಾತು ಮುಂದುವರೆಸಿದರು.

ದಸರಾ ಮತ್ತು ನಮ್ಮ ಸಾಂಸ್ಕೃತಿಕ ಹಿರಿಮೆಯ ಪರಿಚಯ ಇಲ್ಲದವರು ಬಾನು ಮುಷ್ತಾಕ್ ಅವರಿಗೆ ವಿರೋಧಿಸಿದ್ದರು.  ಇತಿಹಾಸ ತಿರುಚಿ, ಸ್ವಾರ್ಥ ರಾಜಕೀಯ ಮಾಡುವುದು ಅಕ್ಷಮ್ಯ ಅಪರಾಧ.  ರಾಜಕಾರಣ ಮಾಡುವುದಿದ್ದರೆ ಚುನಾವಣೆಯಲ್ಲಿ ಮಾಡೋಣ. ನಾಡ ಹಬ್ಬದ ವಿಚಾರದಲ್ಲಿ ಕೆಳ ಮಟ್ಟದ ರಾಜಕಾರಣ ಮಾಡುವುದು ಕ್ಷುಲ್ಲಕ ಎಂದು ಬಾನು ಮುಷ್ತಾಕ್ ಹೆಸರಿಗೆ ವಿರೋಧಿಸಿದ್ದವರಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.

ನಾಡಿನ ಬಹುಸಂಖ್ಯಾತ ಸಮುದಾಯ ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟಿಸಿರುವುದನ್ನು ಸ್ವಾಗತಿಸಿದೆ. ಇದು ಹೆಮ್ಮೆಯ ಸಂಗತಿ. ಅಂತಾರಾಷ್ಡ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಅವರು ದಸರಾ ಉದ್ಘಾಟಿಸಿರುವುದು  ಸೂಕ್ತವಾಗಿದೆ. ಬಾನು ಮುಷ್ತಾಕ್ ಮುಸ್ಲಿಂ ಮಹಿಳೆ ಎನ್ನುವುದಕ್ಕಿಂತ ಮಾನವೀಯ ಮೌಲ್ಯ ಪಾಲಿಸುವ ಮನುಷ್ಯರು. ನಾವು ಮನುಷ್ಯರು ಪರಸ್ಪರ ಪ್ರೀತಿಯಿಂದ ಬಾಳಬೇಕು. ದ್ವೇಷ ಮನುಷ್ಯತ್ವದ ವಿರೋಧಿ. ಆದ್ದರಿಂದ ದ್ವೇಷವನ್ನು ಆಚರಿಸುವವರು ಮನುಷ್ಯತ್ವದ ವಿರೋಧಿಗಳು ಎಂದು ಬಿಜೆಪಿ ಮತ್ತು ಜೆಡಿಎಸ್ ಹೆಸರೇಳದೆ ಹರಿಹಾಯ್ದರು.

ಗುಡಿ-ಚರ್ಚು-ಮಸೀದಿಗಳ ಬಿಟ್ಟು ಹೊರ ಬನ್ನಿ ಎಂದು ಕರೆ ನೀಡಿದ ಸಿಎಂ, ಕುವೆಂಪು ಅವರ ಆಶಯದ ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ರಾಜ್ಯವನ್ನು ಗಟ್ಟಿಗೊಳಿಸಬೇಕು ಎಂದು ಕುವೆಂಪು ಅವರ ಮಾತನ್ನು ಉಲ್ಲೇಖಿಸಿ ಜಾತ್ಯತೀತತೆಯ ವಿರೋಧಿಗಳಿಗೆ ಚಾಟಿ ಬೀಸಿದರು.

Related Articles

Comments (0)

Leave a Comment