ಪ್ರೀಮಿಯಂ ಬ್ರ‍್ಯಾಂಡ್‌ ಮದ್ಯದ ದರ ಕಡಿತಕ್ಕೆ ಅಬಕಾರಿ ಇಲಾಖೆ ಚಿಂತನೆ..!

ಬೆಂಗಳೂರು: ಮೊದಲೆರಡು ತ್ರೈಮಾಸಿಕದಲ್ಲಿ ನಿರೀಕ್ಷಿತ ಪ್ರಮಾಣಕ್ಕಿಂತ ಹೆಚ್ಚು ಆದಾಯ ಸಂಗ್ರಹ ಮಾಡಿರುವ ಅಬಕಾರಿ ಇಲಾಖೆ ಇದೀಗ ಪ್ರೀಮಿಯಂ ಬ್ರ‍್ಯಾಂಡ್‌ಗಳ ಮದ್ಯದ ದರ ಕಡಿಮೆ ಮಾಡುವ ಬಗ್ಗೆ ಚಿಂತನೆ ನಡೆಸಿದೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಅಬಕಾರಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ,ಪ್ರೀಮಿಯಂ ಬ್ರ‍್ಯಾಂಡ್‌ಗಳ ಮದ್ಯದ ದರ ಕಡಿಮೆ ಮಾಡುವ ಬಗ್ಗೆ ಚಿಂತನೆ ನಮ್ಮ ಸರ್ಕಾರಕ್ಕೆ ಇದೆ.ಆದರೆ ಸದ್ಯಕ್ಕೆ ಈಗಲೇ ದರ ಪರಿಷ್ಕರಣೆ ಆಗುವುದಿಲ್ಲ. ಅಕ್ಕ ಪಕ್ಕದ ರಾಜ್ಯಗಳಲ್ಲಿರುವ ದರದ ವಿವರ ನೋಡಿ, ಮುಂದಿನ ದಿನಗಳಲ್ಲಿ ನಾವು ಈ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದರು.

ಮೊದಲೆರಡು ತ್ರೈಮಾಸಿಕದಲ್ಲಿ ನಿರೀಕ್ಷಿತ ಪ್ರಮಾಣಕ್ಕಿಂತ ಹೆಚ್ಚಿನ ಆದಾಯ ಬಂದಿದೆ. ರೂ 16,290 ಕೋಟಿ ಆದಾಯದ ನಿರೀಕ್ಷೆ ಹೊಂದಲಾಗಿತ್ತು. ಆದರೆ, ರೂ 16,358 ಕೋಟಿ ಆದಾಯ ಬಂದಿದ್ದು, ನಿರೀಕ್ಷೆಗಿಂತ ರೂ 68.78 ಕೋಟಿ ಹೆಚ್ಚಾಗಿದೆ.ನಮ್ಮ ಅಧಿಕಾರಿಗಳ ದಕ್ಷತೆಗೆ ಇದು ನಿದರ್ಶನ ಎಂದು ಸಂತಸ ವ್ಯಕ್ತಪಡಿಸಿದರು.

ಅಬಕಾರಿ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ತೆರಿಗೆ ಸಂಗ್ರಹಣೆ ಇಲಾಖೆಯಲ್ಲಿ ಮೊದಲ ಬಾರಿಗೆ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲಾಗಿದೆ. ಇದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ. ಇಲಾಖೆಯಲ್ಲಿ ಡಿಜಿಟಲ್ ವ್ಯವಸ್ಥೆ ಜಾರಿ ಮಾಡಲಾಗುತ್ತಿದ್ದು, ಆನ್‌ಲೈನ್ ಮುಖಾಂತರ  ಪರವಾನಿಗೆ ನವೀಕರಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಲೈಸೆನ್ಸ್‌ನ್ನು ಪ್ರತಿ ವರ್ಷ ನವೀಕರಣ ಮಾಡಬೇಕಿತ್ತು. ಆದರೆ ಈಗ ಇದನ್ನ 5 ವರ್ಷಕ್ಕೆ ಮಾಡಿದ್ದೇವೆ. CL-7 ಪರ್ಮಿಷನ್‌ಗೆ ಕಾಲಾವಕಾಶ ಬೇಕಿತ್ತು. ಆದರೆ ಈಗ ಇದರಲ್ಲಿ ಕೆಲವು ಬದಲಾವಣೆ ಮಾಡಿ ಆದಷ್ಟು ಬೇಗ ಅನುಮತಿ ಕೊಡುವ ಕೆಲಸ ಮಾಡುತ್ತಿದ್ದೇವೆ.CL2/CL9 ಅನುಮತಿ ಕೊಡಲು ನಿಯಮ ಬದಲಾವಣೆ ಮಾಡಿ, ಹರಾಜು ಮೂಲಕ ಕೊಡುವ ನಿರ್ಧಾರ ಮಾಡಲಾಗಿದೆ ಎಂದು ವಿವರ ನೀಡಿದರು.

ಮಹಾರಾಷ್ಟ್ರ, ಗೋವಾ ರಾಜ್ಯಗಳಿಂದ ಅಕ್ರಮ ಮದ್ಯ ಸಾಗಾಣೆ ಮೇಲೆ ಹದ್ದಿನಗಣ್ಣಿಡಲು ಸೂಚಿಸಲಾಗಿದ್ದು,  ಬಾರ್ಡರ್ ಚೆಕ್ ಪೋಸ್ಟ್‌ನಲ್ಲಿರುವ ಸಿಬ್ಬಂದಿಯನ್ನು 15 ದಿನಗಳಿಗೊಮ್ಮೆ ಬದಲಿಸುತ್ತಿರುವಂತೆ ಆಯುಕ್ತರಿಗೆ ಸಚಿವರು ಸೂಚಿಸಿದರು.

ಸಿಹೆಚ್ ಪೌಡರ್, ಡ್ರಗ್ಸ್ ನಿಯಂತ್ರಣ ಮಾಡುವ ಬಗ್ಗೆ ಅಬಕಾರಿ ಇಲಾಖೆ ಅಧಿಕಾರಿಗಳು ಸಾಕಷ್ಟು ಕ್ರಮವಹಿಸಬೇಕು. ಸಣ್ಣ ಪ್ಯಾಕೇಟ್‌ನಲ್ಲಿ ಸಿಹೆಚ್ ಪೌಡರ್ ತಂದು, ನೂರಾರು ಲೀಟರ್ ಮದ್ಯ ತಯಾರಿಸುವವರನ್ನು ಪತ್ತೆ ಹಚ್ಚಿ, ಕಠಿಣ ಕ್ರಮ ಕೈಗೊಳ್ಳಬೇಕು. ಯುವಕರ ಆರೋಗ್ಯ, ಭವಿಷ್ಯದ ದೃಷ್ಟಿಯಿಂದ ಡ್ರಗ್ಸ್‌ಗೆ ಕಡಿವಾಣ ಹಾಕ್ಬೇಕು. ಎನ್‌ಡಿಪಿಎಸ್ ಕಾಯ್ದೆ ಸಮರ್ಪಕವಾಗಿ, ಮತ್ತಷ್ಟು ಪರಿಣಾಮವಾಗಿ ಜಾರಿಗೊಳಿಸಬೇಕು ಎಂದು ಸಚಿವರು ಸೂಚಿಸಿದರು.

Related Articles

Comments (0)

Leave a Comment