ಜಮೀರ್ ರಾಜೀನಾಮೆ ಪಡೆಯುವ ಧೈರ್ಯ ಇದೆಯಾ; ಸಿಎಂಗೆ ಎಚ್ಡಿಕೆ ಸವಾಲು
- by Suddi Team
- June 23, 2025
- 94 Views

ನವದೆಹಲಿ: ವಸತಿ ಇಲಾಖೆಯಲ್ಲಿ ಸಾಲು ಸಾಲು ಹರಗಣಗಳು ನಡೆಯುತ್ತಿದ್ದು, ವಸತಿ ಸಚಿವರ ರಾಜೀನಾಮೆ ಪಡೆಯುವ ಧೈರ್ಯ ಮುಖ್ಯಮಂತ್ರಿಗಳಿಗೆ ಇದೆಯಾ? ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸವಾಲೆಸೆದಿದ್ದಾರೆ.
ನವದೆಹಲಿಯ ಅಧಿಕೃತ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವರು, ಮುಖ್ಯಮಂತ್ರಿ, ಮಂತ್ರಿಗಳು ಕಮಿಷನ್ ಉಡಾಯಿಸಿ ಮೋಜು ಮಾಡುತ್ತಿದ್ದರೆ, ಶಾಸಕರು ತಮ್ಮ ಕ್ಷೇತ್ರಗಳಿಗೆ ಮುಖ ಹಾಕಲಾರದ ದುಸ್ಥಿತಿಯಲ್ಲಿ ಇದ್ದಾರೆ. ಇದಕ್ಕಿಂತ ನಾಚಿಕೆಗೇಡಿನ ವಿಷಯ ಬೇರೆನಿದೆ? ಇದನ್ನು ಪ್ರತಿಪಕ್ಷ ನಾಯಕರು ಹೇಳುತ್ತಿಲ್ಲ. ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರು, ಅದರಲ್ಲಿಯೂ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್, ರಾಜು ಕಾಗೆ, ಬೇಳೂರು ಗೋಪಾಲಕೃಷ್ಣ ಅಂಥವರೇ ಹೇಳುತ್ತಿದ್ದಾರೆ. ಅವರೇ ಈ ಸರ್ಕಾರಕ್ಕೆ ಸರ್ಟಿಫಿಕೇಟ್ ನೀಡಿದ್ದಾರೆ. ರಾಜ್ಯದಲ್ಲಿ ಕಳೆದ ಮೂರು ದಿನಗಳಿಂದ ವಸತಿ ಇಲಾಖೆಯದ್ದೇ ಪುರಾಣ. ಜನತೆ ಕಣ್ಣಿಗೆ ಮಂಕುಬೂದಿ ಎರಚುವ ಕೆಲಸ ಮಾಡಲಾಗುತ್ತಿದೆ ಎಂದರು.
ಬಿ.ಆರ್. ಪಾಟೀಲ್ ಅವರು ಶಾಸಕರಷ್ಟೇ ಅಲ್ಲ, ಅವರು ಶಾಸಕರಾದಾಗ ನಾವು ಯಾರೂ ಇನ್ನೂ ರಾಜಕರಣಕ್ಕೇ ಬಂದಿರಲಿಲ್ಲ. ಹಿರಿಯ ವ್ಯಕ್ತಿ. ಅವರ ಹಿನ್ನೆಲೆಯನ್ನು ನೋಡಿದ್ದೇವೆ. ದೊಡ್ಡ ಅನುಭವುಳ್ಳ ನಾಯಕರು. ಅಂಥವರ ಕ್ಷೇತ್ರದಲ್ಲಿ 950 ಮನೆಗಳನ್ನು ಶಾಸಕರ ಗಮನಕ್ಕೆ ಬಾರದಂತೆ ವಸತಿ ಇಲಾಖೆಯಿಂದ ನೀಡಿದ್ದಾರೆ! ಪಾಟೀಲ್ ಅವರು ಸಚಿವರ ಆಪ್ತ ಕಾರ್ಯದರ್ಶಿಗೆ ಮೊಬೈಲ್ ಕರೆ ಮೂಲಕ ಪ್ರಶ್ನೆ ಮಾಡಿದರೆ, ಅವರು ಏನು ಉತ್ತರ ನೀಡಿದ್ದಾರೆ ಎಂಬುದು ಆಡಿಯೋ ಮೂಲಕ ವೈರಲ್ ಆಗಿದೆ. ನಿಖರವಾದ ಪ್ರಕರಣ ಇದ್ದರೆ ದೂರು ಕೊಡಿ, ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಶಾಸಕರಿಗೆ ಉತ್ತರ ಕೊಡುತ್ತಾರೆ. ಆ ವ್ಯಕ್ತಿಗೆ ಕ್ರಮ ತೆಗೆದುಕೊಳ್ಳುವ ಅಧಿಕಾರ ಕೊಟ್ಟಿದ್ದಾರಾ ಸಚಿವರು? ವಸೂಲಿ ಮಾಡುವ ಪವರ್ ಕೊಟ್ಟಿದ್ದಾರಷ್ಟೇ ಎಂದರು.
ಒಂದು ಇಲಾಖೆಯಲ್ಲಿ ಈ ಮಟ್ಟಕ್ಕೆ ಅವ್ಯವಹಾರ ಆಗಿದೆ ಎಂದರೆ ರಾಜ್ಯದಲ್ಲಿ ಸಿಎಂ ಎನ್ನುವವರು ಇದ್ದಾರೆಯೇ ಎನ್ನುವ ಅನುಮಾನ ಬರುತ್ತಿದೆ. ಡಿಸಿಎಂ ಅವರು ಬಿ.ಆರ್. ಪಾಟೀಲ್ ಹೇಳಿದ್ದು ಸುಳ್ಳು ಎನ್ನುತ್ತಿದ್ದಾರೆ. ನಾವು ಮಾತ್ರ ಹರಿಶ್ಚಂದ್ರರು ಎಂದು ತಮಗೆ ತಾವೇ ಸರ್ಪಿಫಿಕೇಟ್ ಕೊಟ್ಟುಕೊಳ್ಳುತ್ತಿದ್ದಾರೆ. ಕಾಗವಾಡ ಶಾಸಕ ರಾಜುಕಾಗೆ ಕೂಡ ಇದೇ ಆರೋಪ ಮಾಡಿದ್ದಾರೆ. ವಿಶೇಷ ಅನುದಾನ ನೀಡಿ ಕೇಳಿ ಎರಡು ವರ್ಷವಾಯಿತು. ಟೆಂಡರ್ ಮಾಡಲು ಬಿಟ್ಟಿಲ್ಲ, ಹಣವೂ ಬಂದಿಲ್ಲ ಎನ್ನುತ್ತಿದ್ದಾರೆ. ಮುಖ್ಯಮಂತ್ರಿ ಉದ್ದೇಶ ಏನು? ಶಾಸಕಾಂಗ ಪಕ್ಷದಲ್ಲಿ ಅನುದಾನ ಕೊಡುತ್ತೇವೆ, ಅಭಿವೃದ್ಧಿ ಮಾಡುತ್ತೇವೆ ಎಂದವರು ಈಗ ಶಾಸಕರಿಗೆ ಕಮಿಷನ್ ಕಿರುಕುಳ ಕೊಡುತ್ತಿದ್ದಾರೆ. ಶಾಸಕರು ಕ್ಷೇತ್ರಗಳಿಗೆ ಹೋಗದ ರೀತಿಯಲ್ಲಿ ಒತ್ತಡಕ್ಕೆ ಸಿಲುಕಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.
ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಸಚಿವರು ರಾಜಿನಾಮೆ ನೀಡಲಿ, ಅಕ್ರಮಗಳ ತನಿಖೆ ಆಗಲಿ ಎಂದು ಒತ್ತಾಯಿಸಿದ್ದಾರೆ. ನಿಮ್ಮ ಪಕ್ಷದ ಶಾಸಕರೇ ನಿಮ್ಮ ಮುಖಕ್ಕೆ ಮಂಗಳಾರತಿ ಎತ್ತುತ್ತಿದ್ದಾರೆ. ನಿಮ್ಮ ಶಾಸಕರ ಪರಿಸ್ಥಿತಿಯೇ ಹೀಗಾದರೆ ಜೆಡಿಎಸ್, ಬಿಜೆಪಿ ಶಾಸಕರ ಪರಿಸ್ಥಿತಿ ಏನು? ಅನುದಾನಕ್ಕಾಗಿ ಶಾಸಕರು ಅಲೆಯುತ್ತಿದ್ದಾರೆ. ಯಾರೋ ಮಧ್ಯದಲ್ಲಿ ನಿಂತಿದ್ದಾರೋ ಅವರು ಕಲೆಕ್ಷನ್ ಮಾಡುತ್ತಿದ್ದಾರೆ. ಶಾಸಕರು ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಸಚಿವರು ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಕಚೇರಿಯಿಂದ ನಿವೃತ್ತ ಐಎಎಸ್ ಅಧಿಕಾರಿ ಅತೀಕ್ ಅವರನ್ನು ಯಾಕೆ ತೆಗೆದರು? ಮುಂದಿನ ಮೂರು ವರ್ಷಕ್ಕೆ ₹1,000 ಕೋಟಿ ಅನುದಾನದ ಕ್ರಿಯಾ ಯೋಜನೆ ಮಂಜೂರಾತಿ ನೀಡಿದ್ದರು. ಈ ಹಣದಲ್ಲಿ ಅಲ್ಪಸಂಖ್ಯಾತರ ಹೆಸರು ಹೇಳಿಕೊಂಡು ಎಷ್ಟು ಹಣ ತಿಂದಿದ್ದೀರಿ? ಈ ಅತೀಕ್ ಎನ್ನುವ ವ್ಯಕ್ತಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಏನೆಲ್ಲ ಮಾಡಿದ್ದರು ಎನ್ನುವುದು ನನಗೆ ಗೊತ್ತಿದೆ. ಅವರಿಂದ ಏನೇನು ಮಾಡಿಸಿದರು ಎನ್ನುವುದೂ ಗೊತ್ತಿದೆ. ಈ ಸರ್ಕಾರದಲ್ಲಿ ಸರ್ಕಾರಕ್ಕಿಂತಲೂ ದೊಡ್ಡವರು ಇದ್ದಾರೆ ಸಿಎಂ ಅವರ ಬಳಿ. ಸರ್ಕಾರದ ಒಪ್ಪಿಗೆಯೇ ಇಲ್ಲದೆ ಹಾಗೂ ಹಣಕಾಸು ಇಲಾಖೆಯ ಒಪ್ಪಿಗೆಯನ್ನೂ ಪಡೆಯದೇ 625ಕ್ಕೂ ಹೆಚ್ಚು ಕೋಟಿ ಹಣ ಬಿಡುಗಡೆ ಆಗಿದೆ ಎಂದು ಕೇಂದ್ರ ಸಚಿವರು ನೇರ ಆರೋಪ ಮಾಡಿದರು.
ಸಂಪುಟದ ಒಪ್ಪಿಗೆ ಪಡೆಯದೇ ಹಣ ವೆಚ್ಚ ಮಾಡಲಾಗಿದೆ. ಅಲ್ಪಸಂಖ್ಯಾತರಿಗೆ ಸೇರಿದ ಕೋಟಿ ಕೋಟಿ ಹಣ ಲೂಟಿ ಆಗಿದೆ. ಈ ಮುಖ್ಯಮಂತ್ರಿಗೆ ಅಧಿಕಾರದಲ್ಲಿ ಮುಂದುವರೆಯಲು ಯೋಗ್ಯತೆ ಇದೆಯಾ? ಎಂದು ಕಿಡಿಕಾರಿದ ಸಚಿವರು, ಕಾನೂನಾತ್ಮಕವಾಗಿ ಅಲ್ಪಸಂಖ್ಯಾತರಿಗೆ ಎಷ್ಟು ಬೇಕಾದರೂ ನೆರವು ಕೊಡಿ. ಆದರೆ, ಕೊಳ್ಳೆ ಹೊಡೆಯಲು ಹಣಕಾಸು ಇಲಾಖೆ ಒಪ್ಪಿಗೆಯೇ ಇಲ್ಲದೆ ಹಣ ಬಿಡುಗಡೆ ಹೇಗಾಯಿತು? ಇದಕ್ಕೆ ಹೊಣೆ ಯಾರು? ಎಲ್ಲರೂ ಕಾನೂನಿನ ಕಟಕಟೆಯಲ್ಲಿ ನಿಲ್ಲಲೇಬೇಕು ಎಂದು ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದರು.
ವಸತಿ ಇಲಾಖೆಯಲ್ಲಿ ಸಾಲು ಸಾಲು ಹರಗಣಗಳು ನಡೆಯುತ್ತಿವೆ. ಈ ಮುಖ್ಯಮಂತ್ರಿ ವಸತಿ ಸಚಿವರ ರಾಜೀನಾಮೆ ಪಡೆಯುತ್ತಾರಾ? ಈ ಸಿಎಂಗೆ ಅಷ್ಟು ನೈತಿಕತೆ, ಯೋಗ್ಯತೆ, ಧೈರ್ಯ ಇದೆಯಾ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
Related Articles
Thank you for your comment. It is awaiting moderation.
Comments (0)