ಭರ್ತಿಯಾದ ಭದ್ರೆಗೆ ಬಾಗಿನ ಅರ್ಪಿಸಿದ ಡಿಸಿಎಂ ಡಿಕೆ ಶಿವಕುಮಾರ್..!

ಶಿವಮೊಗ್ಗ: ಬಯಲು ಸೀಮೆಯ ಜೀವನಾಡಿಯಾಗಿರುವ ಭದ್ರಾಜಲಾಶಯ ಪೂರ್ಣಮಟ್ಟ ತಲುಪಿದ್ದು ಭರ್ತಿಯಾದ ಭದ್ರೆಗೆ ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಂಪ್ರದಾಯಬದ್ದವಾಗಿ ಬಾಗಿನ ಅರ್ಪಿಸಿದರು.ನಾಡಿನ ರೈತಾಪಿ ಸಮುದಾಯಕ್ಕೆ ಶುಭ ಕೋರಿ ಹಸನಾದ ಫಸುಲಿನೊಂದಿಗೆ ಉತ್ತಮ ಬೆಳೆಯಾಗಲಿ ಎಂದು ಹಾರೈಸಿದರು.

ಲಕ್ಕವಳ್ಳಿಯಲ್ಲಿರುವ ಭದ್ರಾ ಜಲಾಶಯಕ್ಕೆ ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ನೀಡಿರು., ಸಚಿವರಾದ ಎಸ್‌.ಎಸ್‌. ಮಲ್ಲಿಕಾರ್ಜುನ್‌, ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರು ಸೇರಿದಂತೆ ಇನ್ನಿತರ ಮುಖಂಡರೊಂದಿಗೆ ಭದ್ರಾ ನದಿಗೆ ಗಂಗಾಪೂಜೆ ಸಲ್ಲಿಸಿ ವಾಡಿಕೆಯಂತೆ ಬಾಗಿನ ಅರ್ಪಿಸಿದರು. ನಂತರ ಅಣೆಕಟ್ಟಿನ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಿಸಿರುವ ಪರಿವೀಕ್ಷಣಾ ಮಂದಿರವನ್ನು ಉದ್ಘಾ‌ಟಿಸಿದರು.

ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ, ದೊಡ್ಡ ಇತಿಹಾಸ ಹೊಂದಿರುವ ಅಣೆಕಟ್ಟು ಇದಾಗಿದ್ದು, 1947 ರಲ್ಲಿ ಕಟ್ಟಲು ಪ್ರಾರಂಭ ಮಾಡಲಾಯಿತು. 1965 ರಲ್ಲಿ ಕಾರ್ಯಚಾರಣೆ ಪ್ರಾರಂಭ ಮಾಡಿತು. ಇದರ ನಿರ್ಮಾಣಕ್ಕೆ ವಿಶ್ವೇಶ್ವರಯ್ಯ ಅವರ ಕೊಡುಗೆಯೂ ಇದೆ. ಇಷ್ಟು ವರ್ಷದ ಇತಿಹಾಸದಲ್ಲಿ ಜುಲೈ ತಿಂಗಳಲ್ಲಿ ತುಂಬಿರುವುದು ಮೂರು ಬಾರಿ ಮಾತ್ರ. ಈ ವರ್ಷ ಗರಿಷ್ಠ ಮಟ್ಟ ತಲುಪಿ ಇತಿಹಾಸ ನಿರ್ಮಾಣ ಮಾಡಿದೆ” ಎಂದರು.

“ಬಯಲು ಸೀಮೆಯ ಜನರ ಬದುಕಿಗೂ ಭದ್ರಾ ಅಣೆಕಟ್ಟು ಜೀವನಾಡಿಯಾಗಿದೆ. ರೈತರ ಜೀವನ ಹಸನು ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಏಕೆಂದರೆ ಸಂಬಳವಿಲ್ಲದೆ, ನಿವೃತ್ತಿ ಹೊಂದದೆ, ಪಿಂಚಣಿ ಪಡೆಯದೇ ಸದಾ ದುಡಿಯುವ ಕಾಯಕಯೋಗಿ ರೈತ” ಎಂದರು.

“ಐದು ಜಿಲ್ಲೆಗಳಿಗೆ ಜೀವನಾಡಿಯಾಗಿರುವ ಭದ್ರಾ ಅಣೆಕಟ್ಟು ತುಂಬಿದರೆ ರೈತರ ಜೀವನ ಸುಭದ್ರ. ನಾವು ನಮ್ಮಲ್ಲಿಯೇ ನೀರಿಗಾಗಿ ಜಗಳ ಮಾಡಿಕೊಳ್ಳಬಾರದು. ಆ ಜಿಲ್ಲೆ, ಈ ಜಿಲ್ಲೆ, ನೀರು ಈ ತಾಲ್ಲೂಕಿಗೆ ಸೇರಬೇಕು ಎಂದು ಜಗಳ ಮಾಡಿಕೊಂಡರೆ ಪ್ರಯೋಜನವಿಲ್ಲ. ನಾವು ಎಲ್ಲರಿಗೂ ನ್ಯಾಯ ಸಲ್ಲಿಸುವ ಕೆಲಸ ಮಾಡುತ್ತೇವೆ ಎಂದರು.

“ಚನ್ನಗಿರಿ ತಾಲ್ಲೂಕಿನಲ್ಲಿ 45 ಕೆರೆಗಳನ್ನು ತುಂಬಿಸಲು ರೂ.365 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ.‌ ಭದ್ರಾ ಅಚ್ಚುಕಟ್ಟಿನ ಶಾಸಕರ ಕ್ಷೇತ್ರದ ಅನೇಕ‌ ಕೆಲಸಗಳಿಗೆ ನಾನು ಮಂಜೂರಾತಿ ನೀಡಿದ್ದೇನೆ. ಏಕೆಂದರೆ ಚುನಾವಣೆ ಹೊತ್ತಿಗೆ ಜನರು ಏನು ಕೆಲಸ ಮಾಡಿದ್ದಾರೆ ಎಂದು ನೋಡುತ್ತಾರೆ ಹೊರತು ಇನ್ನೇನನ್ನೂ ನೋಡುವುದಿಲ್ಲ” ಎಂದರು.

“ಸಂಸದೆ ಪ್ರಭಾ ಮಲ್ಲಿಕಾರ್ಜುನ ಅವರು ಭದ್ರಾ ಅಣೆಕಟ್ಟುವಿನ ನಾಲೆಗಳು ದುರಸ್ತಿಯಾಗಬೇಕು ಎಂದು ಸುಮಾರು ರೂ.100 ಕೋಟಿ ಮೊತ್ತದ ಪ್ರಸ್ತಾವನೆ ಸಲ್ಲಿಸಿದ್ದಾರೆ. ಸಂಗಮೇಶ್ ಅವರು ಸುಮಾರು ರೂ.150 ಕೋಟಿ ವಿಶೇಷ ಅನುದಾನವನ್ನು ನನ್ನನ್ನು ಪುಸಲಾಯಿಸಿ ಜನರ ಕಲ್ಯಾಣಕ್ಕೆ ಪಡೆದುಕೊಂಡು ಬಿಟ್ಟಿದ್ದಾರೆ. ಮಧು ಬಂಗಾರಪ್ಪ ಅವರಿಗೆ, ಸಾಗರದ ಬೇಳೂರು ಗೋಪಾಲಕೃಷ್ಣ ಅವರಿಗೂ ವಿಶೇಷ ಅನುದಾನಗಳನ್ನು ನೀಡಿದ್ದೇನೆ. ಪರಿಷತ್ ಸದಸ್ಯರಾದ ಬಲ್ಕಿಸ್ ಬಾನು ಅವರು ಭದ್ರಾವತಿ ಹಾಗೂ ಶಿವಮೊಗ್ಗದ ಬಗ್ಗೆ ಅಪಾರ ಕಾಳಜಿಯಿಟ್ಟುಕೊಂಡು ಅನುದಾನಗಳನ್ನು ಪಡೆಯುತ್ತಿದ್ದಾರೆ. ಎಸ್.ಎಸ್. ಮಲ್ಲಿಕಾರ್ಜುನ ಅವರು ಸಹ ವಿಶೇಷ ಕಾಳಜಿವಹಿಸಿ ಭದ್ರಾ ಅಚ್ಚುಕಟ್ಟು ಪ್ರದೇಶಗಳ ಜನರ ಪರವಾಗಿ ಕೆಲಸ ಮಾಡುತ್ತಿದ್ದಾರೆ” ಎಂದು ಹೇಳಿದರು.

Related Articles

Comments (0)

Leave a Comment