ಲೇಬರ್ ಕೋಡ್ಗಳ ವಿರುದ್ಧ, ಪಿಂಚಣಿ ಹೆಚ್ಚಳಕ್ಕೆ ಆಗ್ರಹ: ರಾಜ್ಯಾದ್ಯಂತ ಕಟ್ಟಡ ಕಾರ್ಮಿಕರ ಪ್ರತಿಭಟನೆ
- by Suddi Loka
- November 17, 2026
- 9 Views
ಬೆಂಗಳೂರು: ನಾಲ್ಕು ಲೇಬರ್ ಕೋಡ್ಗಳ ಜಾರಿ ವಿರೋಧಿಸಿ, ಶೈಕ್ಷಣಿಕ ಧನಸಹಾಯ ಹಾಗೂ ಪಿಂಚಣಿ ಹೆಚ್ಚಳ ಮತ್ತು ಕಲ್ಯಾಣ ಮಂಡಳಿ ನಿಧಿ ದುರ್ಬಳಕೆ ತಡೆಗೆ ಆಗ್ರಹಿಸಿ ರಾಜ್ಯಾದ್ಯಂತ ಸಾವಿರಾರು ಕಟ್ಟಡ ನಿರ್ಮಾಣ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಕನ್ಸ್ಟ್ರಕ್ಷನ್ ವರ್ಕರ್ಸ್ ಫೆಡರೇಶನ್ ಆಫ್ ಇಂಡಿಯಾ (CWFI) ನೇತೃತ್ವದಲ್ಲಿ ಕೊಡಗಿನಿಂದ ಬೀದರ್ವರೆಗೆ, ಕೋಲಾರದಿಂದ ದಕ್ಷಿಣ ಕನ್ನಡದವರೆಗೆ ವಿವಿಧ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಪ್ರತಿಭಟಿಸಿದರು. ಬೆಂಗಳೂರಿನಲ್ಲಿ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಕಚೇರಿ ಎದುರು ನೂರಾರು ಕಾರ್ಮಿಕರು ಧರಣಿ ನಡೆಸಿ ಮಂಡಳಿ ಸಿಇಒ ಅವರಿಗೆ ಮನವಿ ಸಲ್ಲಿಸಿದರು.

1996ರ ಕಟ್ಟಡ ಕಾರ್ಮಿಕರ ಕಾನೂನು ಮತ್ತು ಸೆಸ್ ಕಾನೂನುಗಳನ್ನು ಪುನರ್ ಸ್ಥಾಪಿಸಬೇಕು ಹಾಗೂ ಕಲ್ಯಾಣ ಮಂಡಳಿಗಳಲ್ಲಿ ಸಂಗ್ರಹವಾಗಿರುವ ಸಾವಿರಾರು ಕೋಟಿ ರೂ. ನಿಧಿಯನ್ನು ಸಂರಕ್ಷಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಗೆ ಸ್ಪಂದಿಸಿದ ಮಂಡಳಿ ಕಾರ್ಯದರ್ಶಿಗಳು ನವೆಂಬರ್ 20ರಂದು ಕಾರ್ಮಿಕ ಸಂಘಟನೆಗಳೊಂದಿಗೆ ಸಭೆ ನಡೆಸುವುದಾಗಿ ತಿಳಿಸಿದ್ದಾರೆ.
ಲೇಬರ್ ಕೋಡ್ಗಳ ರದ್ದತಿ ಮತ್ತು 1996ರ ಕಾನೂನುಗಳ ಪುನರ್ ಸ್ಥಾಪನೆಗಾಗಿ ಡಿಸೆಂಬರ್ 1ರಿಂದ ಸಿಐಟಿಯು ನೇತೃತ್ವದಲ್ಲಿ ದೆಹಲಿಯ ಸಂಸತ್ ಮಾರ್ಗದಲ್ಲಿ ನಡೆಯಲಿರುವ ಮುತ್ತಿಗೆ ಹೋರಾಟದಲ್ಲಿ ಕರ್ನಾಟಕದಿಂದ 500ಕ್ಕೂ ಅಧಿಕ ಕಟ್ಟಡ ಕಾರ್ಮಿಕರು ಹಾಗೂ ಸಿಐಟಿಯು ವತಿಯಿಂದ 5,000ಕ್ಕೂ ಹೆಚ್ಚು ವಿವಿಧ ವಿಭಾಗಗಳ ಕಾರ್ಮಿಕರು ಭಾಗವಹಿಸಲಿದ್ದಾರೆ.


Comments (0)