ಹೆಚ್ಚುವರಿ ಅಡ್ವೊಕೇಟ್ ಜನರಲ್‌ಗಳಿಗೆ ಸಿಎಂ ವಾರ್ನಿಂಗ್

ಬೆಂಗಳೂರು:ನಿಮ್ಮ ತಪ್ಪುಗಳಿಂದ ನಮಗೆ ಮುಜುಗರವುಂಟಾಗುವ ಪರಿಸ್ಥಿತಿ ಬರಬಾರದು. ನೀವೆಲ್ಲರೂ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕು. ಇದಕ್ಕೆ ತಪ್ಪಿದಲ್ಲಿ ನಿಮ್ಮನ್ನು ಬದಲಾಯಿಸುವುದು ಅನಿವಾರ್ಯವಾಗುತ್ತದೆ ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್‌ಗಳಿಗೆ ಸಿಎಂ ಸಿದ್ದರಾಮಯ್ಯ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆಸಿದ ಪ್ರಗತಿ ಹೆಚ್ಚುವರಿ ಅಡ್ವೊಕೇಟ್  ಜನರಲ್‌ಗಳ ಕಾರ್ಯನಿರ್ವಹಣಾ ಸಭೆಯಲ್ಲಿ ಮಾತನಾಡಿದ ಸಿಎಂ,ನ್ಯಾಯಾಲಯಗಳಲ್ಲಿ ಸರ್ಕಾರದ ಪರ ವಕೀಲರು ಪರಿಣಾಮಕಾರಿಯಾಗಿ ವಾದ ಮಂಡಿಸದ ಕಾರಣಕ್ಕೆ ಹಲವು ಪ್ರಕರಣಗಳಲ್ಲಿ ನಾವು ಹಿನ್ನಡೆ ಅನುಭವಿಸುವಂತಾಗಿದೆ. ಸರ್ಕಾರಕ್ಕೆ ಅನುಕೂಲಕರವಾದ ಕೇಸ್‌ಗಳಲ್ಲಿ ಸಹ ಆದೇಶಗಳು ನಮ್ಮ ವಿರುದ್ಧವಾಗಿ ಬರುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಕೋಮುವಾದ, ದ್ವೇಷ ಭಾಷಣ ಮುಂತಾದ ಪ್ರಕರಣಗಳಲ್ಲಿ ಪೊಲೀಸ್ ಎಫ್.ಐ.ಆರ್ ದಾಖಲಾದ ನಂತರ ಕೂಡ ಸುಲಭವಾಗಿ ತಡೆಯಾಜ್ಞೆ ದೊರೆಯುತ್ತದೆ. ತಡೆಯಾಜ್ಞೆಯನ್ನು ವರ್ಷಗಟ್ಟಲೆ ತೆರವುಗೊಳಿಸದೆ ಇಡುವ ಪ್ರಕರಣಗಳು ಕೂಡ ಹೆಚ್ಚಾಗುತ್ತಿವೆ.ಕೆಲವು ಸಂದರ್ಭಗಳಲ್ಲಿ ಸಣ್ಣಪುಟ್ಟ ಪ್ರಕರಣಗಳಲ್ಲಿ ಸಹ ಸರ್ಕಾರಕ್ಕೆ ಮುಜುಗುರವಾಗುವಂತಹ ಬೆಳವಣಿಗೆಗಳು ಆಗಿವೆ.ಸಂಪೂರ್ಣ ಸಿದ್ಧತೆಯೊಂದಿಗೆ ನ್ಯಾಯಾಲಯದ ಕಲಾಪಗಳಲ್ಲಿ ಭಾಗವಹಿಸಬೇಕು. ಮೆರಿಟ್‌ ಇರುವ ಪ್ರಕರಣಗಳಲ್ಲಿ ಸರ್ಕಾರಕ್ಕೆ ಹಿನ್ನಡೆಯಾಗಲು ಅವಕಾಶ ನೀಡಬಾರದು ಎಂದರು.

ಪ್ರತಿಯೊಂದು ಪ್ರಕರಣಗಳನ್ನು ಸವಾಲಿನಿಂದ ಸ್ವೀಕರಿಸಿ, ಕಾರ್ಯ ನಿರ್ವಹಿಸಿದರೆ ಸರ್ಕಾರಕ್ಕೆ ಉತ್ತಮ ಹೆಸರು ಬರಲು ಸಾಧ್ಯವಿದೆ. ನಿಮ್ಮಿಂದ ಹೆಚ್ಚಿನ ಕ್ರಿಯಾಶೀಲ ಕಾರ್ಯನಿರ್ವಹಣೆಯನ್ನು ಸರ್ಕಾರ ಅಪೇಕ್ಷಿಸುತ್ತದೆ. ಇಲಾಖೆಗಳಿಂದ ಅಥವಾ ಅಧಿಕಾರಿಗಳಿಂದ ಸರಿಯಾಗಿ ಸ್ಪಂದನೆ ದೊರೆಯದಿದ್ದರೆ, ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಗಮನಕ್ಕೆ ತರಬೇಕು ಎಂದರು.

ಎಲ್ಲಾ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ಗಳಿಗೆ ಇಲಾಖಾವಾರು ಕಾರ್ಯಕ್ಷೇತ್ರವನ್ನು ನಿಗದಿಪಡಿಸಬೇಕು.ನ್ಯಾಯಾಂಗದಲ್ಲಿನ ಎಲ್ಲಾ ಅಡ್ಡಿಗಳನ್ನು ನಿವಾರಿಸುವ ನಿಟ್ಟಿನಲ್ಲಿ ಇನ್ನಷ್ಟು ಕ್ರಿಯಾ ಶೀಲರಾಗಿ ಕಾರ್ಯನಿರ್ವಹಿಸಿ.ರಾಜ್ಯ ಸರ್ಕಾರದ ಪರವಾದ ನ್ಯಾಯಾಂಗ ಹೋರಾಟಗಳನ್ನು ಇನ್ನಷ್ಟು ವೃತ್ತಿಪರಗೊಳಿಸುವ ಅಗತ್ಯವಿದೆ. ರಾಜ್ಯ ಸರ್ಕಾರದ 21799  ಪ್ರಕರಣಗಳು ಹೈಕೋರ್ಟ್ನಲ್ಲಿ ಬಾಕಿಯಿವೆ. ಇದರಲ್ಲಿ 5016 ಪ್ರಕರಣಗಳಲ್ಲಿ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಇದನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಬೇಕು.  ಮುಖ್ಯ ಕಾರ್ಯದರ್ಶಿಯವರು ಎಲ್ಲಾ ಹೆಚ್ಚುವರಿ ಅಡ್ವೊಕೇಟ್ ಜನರಲ್‌ ಅವರ ಸಭೆಯನ್ನು ಕರೆದು ಸಮನ್ವಯತೆಯಿಂದ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುವುದು ತಪ್ಪಿದಲ್ಲಿ  ನಿಮ್ಮನ್ನು ಬದಲಾಯಿಸುವುದು ಅನಿವಾರ್ಯವಾಗುತ್ತದೆ ಎಂದಿದ್ದಾರೆ.

Related Articles

Comments (0)

Leave a Comment