ಜಾತಿ,ಉಪಜಾತಿ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ವಿಸ್ತರಣೆಗೆ ಬಿಜೆಪಿ ಮನವಿ
- by Suddi Team
- August 27, 2025
- 132 Views

ಬೆಂಗಳೂರು: ಸಾಲು ಸಾಲು ಸರ್ಕಾರಿ ರಜೆಗಳು ಬಂದಿರುವ ಕಾರಣದಿಂದಾಗಿ ಜಾತಿ ಮತ್ತು ಉಪಜಾತಿಗಳ ಪಟ್ಟಿಗೆ ಸಂಬಂಧಿಸಿ ಆಕ್ಷೇಪಣೆ ಸಲ್ಲಿಸಲು ನೀಡಿರುವ ಕಾಲಾವಕಾಶವನ್ನು ವಿಸ್ತರಣೆ ಮಾಡುವಂತೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನೀಲ್ ಕುಮಾರ್ ಒತ್ತಾಯಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು,ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಜಾತಿ ಮತ್ತು ಉಪಜಾತಿಗಳ ಪಟ್ಟಿಗೆ ಸಂಬಂಧಿಸಿ 7 ದಿನಗಳ ಒಳಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿದೆ. ಹಬ್ಬ, ಹರಿದಿನಗಳು ಇರುವ ಕಾರಣ, ಸರಕಾರಿ ರಜೆಗಳು ನಿರಂತರವಾಗಿ ಇರುವ ಕಾರಣಕ್ಕೆ ಆಕ್ಷೇಪಣೆ ಸಲ್ಲಿಸಲು ಇನ್ನೂ ಹೆಚ್ಚುವರಿಯಾಗಿ 10 ದಿನಗಳ ಕಾಲಾವಕಾಶ ಕೊಡಲು ಬಿಜೆಪಿ ಕಡೆಯಿಂದ ಆಯೋಗದ ಅಧ್ಯಕ್ಷರಿಗೆ ಪತ್ರ ಬರೆದಿದ್ದೇವೆ ಎಂದು ಹೇಳಿದರು.
ಇಂದು ಪ್ರಮುಖರ ಸಭೆ ನಡೆಸಲಾಗಿದೆ. 1,400 ಜಾತಿ ಪಟ್ಟಿ ಅವಲೋಕಿಸಿದಾಗ ಯಥಾಪ್ರಕಾರ ಮುಸ್ಲಿಮರು ಮತ್ತು ಮುಸ್ಲಿಂ ಉಪ ಜಾತಿಗಳನ್ನು ಪಟ್ಟಿಯಲ್ಲಿ ಕೈಬಿಟ್ಟಿದ್ದಾರೆ. ಹಿಂದೆ ಜಯಪ್ರಕಾಶ್ ಹೆಗ್ಡೆಯವರು 90 ಜಾತಿಗಳು ಮುಸಲ್ಮಾನರಲ್ಲಿ ಇವೆ ಎಂದು ಪ್ರಕಟಿಸಿದ್ದರು. ಆಯೋಗವು 1,400 ಜಾತಿಗಳ ಪಟ್ಟಿ ಮಾಡುವಾಗ ಇದನ್ನು ಯಾಕೆ ಬಿಟ್ಟಿದೆ ಎಂಬುದು ಸ್ಪಷ್ಟವಾಗಿಲ್ಲ.ಜಾತಿಯ ಪಟ್ಟಿ, ಮಾನದಂಡ ಬಳಕೆ ಮೊದಲಾದ ಹಲವು ರೀತಿಯ ಗೊಂದಲಗಳಿವೆ. ಅವು ಅಧ್ಯಕ್ಷರ ಪತ್ರಿಕಾ ಹೇಳಿಕೆ ಮೂಲಕ ಗೊತ್ತಾಗಿದೆ. ಮುಂದಿನ ವಾರ ಬಿಜೆಪಿ ನಿಯೋಗವು ಆಯೋಗಕ್ಕೆ ಭೇಟಿ ಕೊಡಲಿದೆ. ನಮಗಿರುವ ಅನುಮಾನಗಳು, ಸಮೀಕ್ಷೆ ಯಾವ ರೀತಿ ನಡೆಯಬೇಕೆಂಬ ಕುರಿತು ವಿವರಗಳನ್ನು ತಿಳಿಸಲು ಇಂದಿನ ಸಭೆಯು ತೀರ್ಮಾನ ಮಾಡಿದೆ ಎಂದು ತಿಳಿಸಿದರು.
ಮನವಿಯಲ್ಲಿ ಏನಿದೆ?: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ದಿನಾಂಕ 22.08.2025 ರಂದು ಹಿಂದುಳಿದ ಆಯೋಗದ ಜಾತಿ ಮತ್ತು ಉಪಜಾತಿಗಳ ಪಟ್ಟಿಗಳನ್ನು ಪತ್ರಿಕೆಗಳಲ್ಲಿ ಪ್ರಕಟಣೆ ಮಾಡಿ, ಈ ಪಟ್ಟಿಯಲ್ಲಿ ಯಾವುದೇ ಜಾತಿಗಳು, ಉಪಜಾತಿಗಳು ಬಿಟ್ಟು ಹೋಗಿದ್ದರೆ ಅಥವಾ ತಪ್ಪಾಗಿ ನಮೂದಿಸಿದ್ದರೆ, ಈ ಇತ್ಯಾದಿ ಅಂಶಗಳ ಬಗ್ಗೆ ಸಲಹೆ ಸೂಚನೆ ಇದ್ದಲ್ಲಿ, ಸಾರ್ವಜನಿಕರು, ಸಂಘ ಸಂಸ್ಥೆಗಳು ಈ ಪ್ರಕಟಣೆಯಾದ ಏಳು ದಿನಗಳ ಒಳಗೆ ತಮ್ಮ ಅಹವಾಲುಗಳನ್ನು ಆಯೋಗಕ್ಕೆ ತಲುಪಿಸಲು ತಿಳಿಸಿರುತ್ತೀರಿ. ಈ ಸಂದರ್ಭದಲ್ಲಿ ಸಾಲುಸಾಲು ಹಬ್ಬಗಳು ಬಂದಿರುವ ಕಾರಣ ಹಾಗೂ ರಜೆಗಳು ಇರುವ ಕಾರಣ ಅಭಿಪ್ರಾಯಗಳನ್ನು ತಿಳಿಸಲು ಕಷ್ಟವಾಗಿರುತ್ತದೆ ಎಂದು ಪತ್ರವು ತಿಳಿಸಿದೆ.
ಆದ್ದರಿಂದ ಹೆಚ್ಚುವರಿಯಾಗಿ 10 ದಿನಗಳ ಕಾಲಾವಕಾಶವನ್ನು ವಿಸ್ತರಿಸಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ ಎಂದು ಮನವಿ ತಿಳಿಸಿದೆ.
Related Articles
Thank you for your comment. It is awaiting moderation.
Comments (0)