ಬೇರೆ ರಾಜ್ಯಗಳಲ್ಲಿ ಅಭಿವೃದ್ಧಿಯಾಗುವ ಸುರಂಗ, ಬೆಂಗಳೂರಿನಲ್ಲಿ ಮಾತ್ರ ಪರಿಸರ ವಿರೋಧಿಯಾಗುವುದೇ?: ರಾಮಲಿಂಗಾರೆಡ್ಡಿ
- by Suddi Team
- November 3, 2025
- 252 Views
ಬೆಂಗಳೂರು:ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಅಭಿವೃದ್ಧಿಯಾಗುವ ಸುರಂಗ, ಬೆಂಗಳೂರಿನಲ್ಲಿ ಮಾತ್ರ ಪರಿಸರ ವಿರೋಧಿಯಾಗುವುದೇ? ಬೆಂಗಳೂರಿನ ಜನತೆಗೆ ಬೇಕಿರುವುದು ಸಂಚಾರ ದಟ್ಟಣೆಯಿಂದ ಮುಕ್ತಿಯೇ ಹೊರತು ನಿಮ್ಮ ರಾಜಕೀಯ ಅಡ್ಡಿ ಆತಂಕಗಳಲ್ಲ ಎಂದು ಬೆಂಗಳೂರು ಟನಲ್ ರಸ್ತೆ ವಿರೋಧಿಸುತ್ತಿರುವ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಪ್ರತಿಭಟನೆ ಟೀಕಿಸಿ ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಪೋಸ್ಟ್ ಮಾಡಿರುವ ಸಚಿವ ರಾಮಲಿಂಗಾರೆಡ್ಡಿ, ಬಿಜೆಪಿ ನಾಯಕರು ‘ಲಾಲ್‌ಬಾಗ್ ಉಳಿಸಿ’ ಎಂದು ನಾಟಕವಾಡುತ್ತಿದ್ದಾರೆ.ಲಾಲ್‌ಬಾಗ್ ಬಗ್ಗೆ ನಿಮ್ಮದು ಕಾಳಜಿಯೋ? ರಾಜಕೀಯವೋ?ನಿಮಗೆ ಲಾಲ್‌ಬಾಗ್ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ, ಇಡೀ ಯೋಜನೆಯನ್ನು ರದ್ದುಪಡಿಸಲು ಹಠ ಹಿಡಿಯುವ ಬದಲು, ಸುರಂಗದ ಪ್ರವೇಶ ಮತ್ತು ನಿರ್ಗಮನಕ್ಕೆ ಪರ್ಯಾಯ ಜಾಗವನ್ನು ಸೂಚಿಸುವ ಧೈರ್ಯ ತೋರಿ. ಅದನ್ನು ಬಿಟ್ಟು, ಜನರ ದಾರಿ ತಪ್ಪಿಸುವ ರಾಜಕೀಯ ಗಿಮಿಕ್ ಏಕೆ? ಎಂದು ಪ್ರಶ್ನಿಸಿದ್ದಾರೆ
ನಿಮ್ಮ ದ್ವಂದ್ವ ನೀತಿಗೆ ಇದಕ್ಕಿಂತ ಸಾಕ್ಷಿ ಬೇಕೇ?
▪️ಡಾ. ಎಂ.ಎಚ್. ಮರಿಗೌಡರು ಲಾಲ್‌ಬಾಗ್ ಅನ್ನು 240 ಎಕರೆಗೆ ವಿಸ್ತರಿಸಿ, ತೋಟಗಾರಿಕಾ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದರು.
▪️ 2003ರಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್‌ಎಂ ಕೃಷ್ಣ ಅವರು ಲಾಲ್‌ಬಾಗ್‌ನ ಪುನರುಜ್ಜೀವನಕ್ಕಾಗಿ ₹17 ಕೋಟಿ ಮಂಜೂರು ಮಾಡಿದ್ದರು.
▪️ ಎರಡು ಬಾರಿ ಅಧಿಕಾರದಲ್ಲಿದ್ದ ಬಿಜೆಪಿ ಲಾಲ್‌ಬಾಗ್‌ಗೆ ಏನು ಕೊಡುಗೆ ನೀಡಿದೆ?
▪️ ಕರ್ನಾಟಕದಲ್ಲಿ ಪರಿಸರ ಪಾಠ ಹೇಳುವ ನೀವು, ನಿಮ್ಮದೇ ಸರ್ಕಾರಗಳು ಬೇರೆ ರಾಜ್ಯಗಳಲ್ಲಿ ಮಾಡಿದ್ದೇನು?
* ಅಟಲ್ ಸುರಂಗ (ಹಿಮಾಚಲ): ನಿಮ್ಮ ಹೆಮ್ಮೆಯ ಸಾಧನೆ ಎಂದು ಹೇಳಿಕೊಳ್ಳುತ್ತೀರಿ.
* ಸೇಲಾ ಸುರಂಗ (ಅರುಣಾಚಲ): ನಿಮ್ಮ ಪಕ್ಷದ ಪ್ರಧಾನಿಗಳೇ ಉದ್ಘಾಟಿಸಿದ್ದು.
* ಕಾಶ್ಮೀರದ ಸುರಂಗಗಳು: ‘ಅಭಿವೃದ್ಧಿಯ ಹರಿಕಾರರು’ ಎಂದು ನೀವೇ ಬೆನ್ನು ತಟ್ಟಿಕೊಳ್ಳುತ್ತೀರಿ.
* ನಿತಿನ್ ಗಡ್ಕರಿ ಮಾತು: ನಿಮ್ಮದೇ ಕೇಂದ್ರ ಸಚಿವರು ಬೆಂಗಳೂರಿಗೆ ಸುರಂಗವೇ ಮದ್ದು ಎಂದಿದ್ದರು. ಈಗೇಕೆ ಈ ಯೂ-ಟರ್ನ್?
ಬೇರೆ ರಾಜ್ಯಗಳಲ್ಲಿ ಅಭಿವೃದ್ಧಿಯಾಗುವ ಸುರಂಗ, ಬೆಂಗಳೂರಿನಲ್ಲಿ ಮಾತ್ರ ಪರಿಸರ ವಿರೋಧಿಯಾಗುವುದೇ? ಬೆಂಗಳೂರಿನ ಜನತೆಗೆ ಬೇಕಿರುವುದು ಸಂಚಾರ ದಟ್ಟಣೆಯಿಂದ ಮುಕ್ತಿ, ನಿಮ್ಮ ರಾಜಕೀಯ ಅಡ್ಡಿ ಆತಂಕಗಳಲ್ಲ.
ನಿಮ್ಮ ಪರಿಸರ ಪ್ರೇಮ ಎಂಬ ನಾಟಕ ಕೇವಲ ಲಾಲ್‌ಬಾಗ್‌ಗೆ ಸೀಮಿತವೇ? ಕಬ್ಬನ್ ಪಾರ್ಕ್ ಅಭಿವೃದ್ಧಿಗೆ ನಿಮ್ಮ ಅವಧಿಯಲ್ಲಿ ಎಷ್ಟು ಅನುದಾನ ನೀಡಿದ್ದೀರಿ? ಅಧಿಕಾರದಲ್ಲಿ ಇದ್ದಾಗ ನಿಮಗೆ ಪರಿಸರದ ಮೇಲೆ ಎಷ್ಟರ ಮಟ್ಟಿಗೆ ಕಾಳಜಿ ಇತ್ತು ಎಂದು ಇದರಲ್ಲೇ ತಿಳಿಯುತ್ತದೆ! ಬಿಜೆಪಿಯವರೇ, ಅಭಿವೃದ್ಧಿಗೆ ಕೈಜೋಡಿಸಿ, ಇಲ್ಲವೇ ಜನರ ಮುಂದೆ ನಿಮ್ಮ ದ್ವಂದ್ವ ನೀತಿಯನ್ನು ಒಪ್ಪಿಕೊಳ್ಳಿ ಎಂದಿದ್ದಾರೆ.
Related Articles
Thank you for your comment. It is awaiting moderation.


Comments (0)