ನ. 16ರಂದು ಪರಮ್ ಕಲಾ ಸಂವಾದದಲ್ಲಿ ‘ರಾವಣ’ ನೃತ್ಯರೂಪಕ: 11ನೇ ತಲೆಯ ಗುಟ್ಟು ಇಲ್ಲಿ ರಟ್ಟು!
- by Suddi Team
- November 15, 2025
- 17 Views
ಬೆಂಗಳೂರು: ಪರಮ್ ಫೌಂಡೇಶನ್ನ ವಿಶಿಷ್ಟ ಕಾರ್ಯಕ್ರಮವಾದ ‘ಪರಮ್ ಕಲಾ ಸಂವಾದ’ದ ಮೂರನೇ ಆವೃತ್ತಿಯು ಪ್ರೇಕ್ಷಕರಿಗೆ ಹೊಸ ಚಿತ್ರಣವನ್ನೇ ನೀಡಲು ಮುಂದಾಗಿದೆ. ಔಟ್ ಆಫ್ ದಿ ಬಾಕ್ಸ್ (ಪರಿದಿಯಿಂದಾಚೆಗೆ) ಎನ್ನುವಂತಹ ಚಿಂತನೆಯನ್ನು ಹುಟ್ಟುಹಾಕಲು ನವೆಂಬರ್ 16ಕ್ಕೆ ವೇದಿಕೆ ಸಿದ್ಧವಾಗಿದ್ದು, ಲಂಕಾಧಿಪತಿ ರಾವಣನ ಅಂತರಂಗದ ಹಾಗೂ ಹೇಳದೇ ಇರುವ ಕಥೆ ನೃತ್ಯರೂಪಕದ ಮೂಲಕ ಅನಾವರಣಗೊಳ್ಳಲಿದೆ. ಇಲ್ಲಿ ‘ರಾವಣ: 11ನೇ ತಲೆಯ ಹೇಳದಿರುವ ಕಥೆ’ ಎಂಬ ಏಕವ್ಯಕ್ತಿ ನೃತ್ಯರೂಪಕವು ಪ್ರದರ್ಶನಗೊಳ್ಳಲಿದ್ದು, ಮನಸೂರೆಗೊಳ್ಳಲು ಸಜ್ಜಾಗಿದೆ.
ಕಲೆ, ಸಂಸ್ಕೃತಿ ಮತ್ತು ಸೃಜನಾತ್ಮಕ ಪ್ರಕ್ರಿಯೆಗಳ ಕುರಿತು ಕಲಾವಿದರು, ವಿದ್ವಾಂಸರು ಮತ್ತು ಪ್ರೇಕ್ಷಕರು ಇಲ್ಲಿ ಒಂದೇ ವೇದಿಕೆಯಡಿ ಇರಲಿದ್ದು, ನೃತ್ಯರೂಪಕದ ರೆಕಾರ್ಡೆಡ್ ವಿಡಿಯೋವನ್ನು ಇಲ್ಲಿ ಮೊದಲಿಗೆ ಪ್ರದರ್ಶಿಸಲಾಗುವುದು. ಬಳಿಕ ಸಂವಾದ ಆರಂಭವಾಗಲಿದೆ.
ರಾವಣನ 11ನೇ ತಲೆಯ ಗುಟ್ಟು:
‘ರಾವಣ’… 11ನೇ ಶಿರದ ಅನಾಮಧೇಯ, ಯಾರೂ ಕೇಳಿರದ ಕಥೆ ಇಲ್ಲಿ ಪ್ರೇಕ್ಷಕರ ಮುಂದೆ ಬಿಚ್ಚಿಕೊಳ್ಳಲಿದೆ. ಇದರಲ್ಲಿ ರಾವಣನ ತನ್ನ ಸಹೋದರಿ ಶೂರ್ಪನಖಿಗೆ ಆದ ಘಟನೆಯ ವಿರುದ್ಧ ಸೇಡು ತೀರಿಸಿಕೊಳ್ಳಲು ಹೊರಟ ಸಂದರ್ಭದಲ್ಲಿ ಹತ್ತು ಶಿರಗಳು ಪರಸ್ಪರ ಭಿನ್ನ ಅಭಿಪ್ರಾಯಗಳಿಂದ ತುಂಬಿ ಗೊಂದಲ ಸೃಷ್ಟಿಸಿದಾಗ , ಅವನು 11ನೇ ತಲೆಯ ಧ್ವನಿಯನ್ನು ಆಲಿಸುತ್ತಾನೆ. ಈ 11ನೇ ಶಿರವು ರಾವಣನ ಆಂತರ್ಯದ ಮನಸ್ಸಾಕ್ಷಿಯಾಗಿದ್ದು, ಅದು ಅವನ ನಿರ್ಧಾರಗಳನ್ನು ಸಮರ್ಥಿಸುವುದಲ್ಲದೆ, ರಾಮನೊಂದಿಗೆ ಹೋರಾಡುವ ಅವನ ನಿರ್ಧಾರಕ್ಕೆ ಸಮರ್ಥನೆಯನ್ನೂ ನೀಡುತ್ತದೆ. ಈ ಹೊಯ್ದಾಟಗಳು, 11ನೇ ತಲೆಯ ಗುಟ್ಟು ಇನ್ನಿತರ ವಿಷಯಗಳ ಬಗ್ಗೆ ಇಲ್ಲಿ ಚರ್ಚೆ ನಡೆಯಲಿದೆ.
ಈ ನೃತ್ಯ ನಾಟಕದಲ್ಲಿ ರಾವಣನು ತನ್ನ ಹಿಂದಿನ ನಿರ್ಣಾಯಕ ಘಟನೆಗಳನ್ನು ನೆನಪಿಸಿಕೊಳ್ಳುತ್ತಾನೆ. ರಾಮನ ವಿಜಯಕ್ಕಾಗಿ ಯುದ್ಧಕ್ಕೂ ಮುನ್ನ ತಾನೇ ಯಜ್ಞ ವಿಧಿಗಳನ್ನು ನೆರವೇರಿಸುವುದು, ಶಿವನನ್ನು ಒಲಿಸಿಕೊಳ್ಳಲು ತನ್ನ ಕರುಳನ್ನು ವೀಣೆಯ ತಂತಿಯನ್ನಾಗಿಸಿ ‘ರಾವಣೇಶ್ವರ’ ಎಂಬ ಬಿರುದು ಪಡೆಯುವುದು ಹಾಗೂ ಸೀತೆಯನ್ನು ಅಪಹರಿಸುವಾಗ ತನ್ನ ಸದುದ್ದೇಶವನ್ನು ಸಾಬೀತುಪಡಿಸಲು ಒಂದು ಹಿಡಿ ಮಣ್ಣಿನೊಂದಿಗೆ ಅಪಹರಿಸುವುದು. ಅವನ ಹತ್ತು ತಲೆಗಳು ಪರಸ್ಪರ ಭಿನ್ನ ಅಭಿಪ್ರಾಯಗಳಿಂದ ತುಂಬಿರುತ್ತವೆ. ಒಂದು ಶರಣಾಗತಿಗೆ ಒತ್ತಾಯಿಸಿದರೆ, ಮತ್ತೊಂದು ತನ್ನಿಂದಾದ ಹತ್ಯೆಗಳಿಗಾಗಿ ನಿಂದಿಸುತ್ತದೆ. ಇನ್ನೊಂದು ಹುಲು ಮಾನವನಿಂದ ಸೋಲಿಸಲ್ಪಟ್ಟ ಸ್ಥಿತಿಗಾಗಿ ನಾಚಿಕೆಪಡುತ್ತದೆ. ಈ ಗೊಂದಲಗಳ ನಡುವೆ ರಾವಣನು ಹನ್ನೊಂದನೇ ತಲೆಯಾಗಿ ಚಿತ್ರಿಸಲಾದ ತನ್ನ ಅಂತರಾತ್ಮದ ಮಾತನ್ನು ಕೇಳುತ್ತಾನೆ. ಹಾಗೇ ರಾಮನೊಂದಿಗೆ ಹೋರಾಡುವ ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಾನೆ.
ಪ್ರಕಾಶ್ ಬೆಳವಾಡಿ ನೇತೃತ್ವದಲ್ಲಿ ಸಂವಾದ:
ರೆಕಾರ್ಡೆಡ್ ನೃತ್ಯರೂಪಕ ಪ್ರದರ್ಶನದ ನಂತರ ಪ್ರೇಕ್ಷಕರೊಂದಿಗೆ ಸಂವಾದಾತ್ಮಕ ಚರ್ಚೆ ನಡೆಯಲಿದೆ. ಈ ಸಂವಾದದಲ್ಲಿ ಖ್ಯಾತ ಕಲಾವಿದರೂ ಮತ್ತು ನಿರ್ದೇಶಕರೂ ಆದ ಪ್ರಕಾಶ್ ಬೆಳವಾಡಿ ಅವರು ಸಂವಾದವನ್ನು (Moderator) ನಡೆಸಿಕೊಡಲಿದ್ದಾರೆ . ಈ ಚರ್ಚೆಯಲ್ಲಿ ರಾವಣನ ಪಾತ್ರದ ಒಳನೋಟ, ಕಥೆಯ ವೈವಿಧ್ಯಮಯ ವ್ಯಾಖ್ಯಾನ ಮತ್ತು ಈ ಬಹುಭಾಷಾ ನೃತ್ಯ ನಾಟಕದ (ಸಂಸ್ಕೃತ, ಇಂಗ್ಲಿಷ್, ಕನ್ನಡ, ತಮಿಳು, ತೆಲುಗು, ಇತರೆ ಭಾಷೆಗಳ ಬಳಕೆಯೊಂದಿಗೆ) ನಿರ್ಮಾಣ ಪ್ರಕ್ರಿಯೆಗಳ ಕುರಿತು ಗಹನ ಚರ್ಚೆ ನಡೆಯಲಿದೆ.
ಸಂವಾದದಲ್ಲಿ ನೃತ್ಯರೂಪಕದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ಕಲಾವಿದರಾದ ವಿ.ಸೂರ್ಯ ಎನ್. ರಾವ್ (ಸೃಷ್ಟಿಕರ್ತ, ಪ್ರದರ್ಶನಕಾರರು), ವಿ.ವೀಣಾ ಮೂರ್ತಿ ವಿಜಯ್ (ಗುರು ಮತ್ತು ಕುಚಿಪುಡಿ ಪರಿಣತರು), ಪಂ. ಪ್ರವೀಣ್ ಡಿ. ರಾವ್ (ಸಂಗೀತ ನಿರ್ದೇಶಕರು), ವಿ.ಕೀರ್ತಿ ಕುಮಾರ್ (ನರ್ತಕ, ನೃತ್ಯ ಸಂಯೋಜಕ, ಸ್ಕ್ರಿಪ್ಟ್ ಬರಹಗಾರರು) ಅವರೂ ಭಾಗಿಯಾಗಲಿದ್ದಾರೆ.
ಯಾವಾಗ ಮತ್ತು ಎಲ್ಲಿ?:
‘ಕಲಾ ಸಂವಾದ’ದ ಮೂರನೇ ಆವೃತ್ತಿಯ ಈ ಕಾರ್ಯಕ್ರಮವು ನವೆಂಬರ್ 16ರಂದು ಬೆಂಗಳೂರಿನ ಬನಶಂಕರಿಯ ಸುಚಿತ್ರಾ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯಲ್ಲಿ ನಡೆಯಲಿದೆ. ಕಲೆ ಮತ್ತು ಸಂಸ್ಕೃತಿಯ ಕುರಿತಾದ ಈ ಅರ್ಥಪೂರ್ಣ ಚರ್ಚೆ ಹಾಗೂ ಪ್ರದರ್ಶನದಲ್ಲಿ ಭಾಗವಹಿಸಲು ಬಯಸುವವರು ಬುಕ್ ಮೈ ಶೋ ಅಥವಾ ನೇರವಾಗಿಯೇ ಟಿಕೆಟ್ಗಳನ್ನು ಕಾಯ್ದಿರಿಸಬಹುದು.
ಕಲಾ ಪ್ರದರ್ಶನ : ಸಂಜೆ 5:30 ಗಂಟೆಯಿಂದ
ಕಲಾ ಸಂವಾದ (ರಾವಣ ಪ್ರದರ್ಶನ ಬಗ್ಗೆ ಚರ್ಚೆ): ಸಂಜೆ 6:00 ಗಂಟೆಯಿಂದ.
ಮುಖ್ಯ ಕಾರ್ಯಕ್ರಮಕ್ಕೂ ಮುನ್ನ ‘Red Box Stories – ಹೆಸರಿನಲ್ಲಿ ಪ್ರದರ್ಶನವು ಇರಲಿದೆ. ಪತ್ರ ಬರೆಯುವ ಕಲೆಯನ್ನು ನೆನಪಿಸುವ ಸಲುವಾಗಿ, ಇಂಡಿಯಾ ಪೋಸ್ಟ್ನ ಸಹಯೋಗದೊಂದಿಗೆ ಪರಮ್ನಲ್ಲಿರುವ ಕಲಾವಿದರೆ ರಚಿಸಿದ ಚಿತ್ರಗಳನ್ನೊಳಗೊಂಡ ಪೋಸ್ಟ್ ಕಾರ್ಡ್ಗಳ ಪ್ರದರ್ಶನ ಹಾಗೂ ಮಾರಾಟ ಇರುತ್ತದೆ. ಇದರಲ್ಲಿ ತಮ್ಮ ಆತ್ಮೀಯರಿಗೆ ಸಂದೇಶವನ್ನು ಬರೆದು ಕಳುಹಿಸುವ ವ್ಯವಸ್ಥೆಯೂ ಇರುತ್ತದೆ.
ಪ್ರೇಕ್ಷಕರಿಗೆ ಕಲೆಯೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಕಲೆ ಮತ್ತು ಅದರ ಸೃಷ್ಟಿ ಪ್ರಕ್ರಿಯೆಯ ಕುರಿತಾದ ಅರ್ಥಪೂರ್ಣ ಚರ್ಚೆ ಹಾಗೂ ಪ್ರದರ್ಶನದಲ್ಲಿ ಭಾಗವಹಿಸಲು ಬಯಸುವವರು, BookMyShow ನಲ್ಲಿ ಟಿಕೆಟ್ಗಳನ್ನು ಕಾಯ್ದಿರಿಸಬಹುದು.
ಪರಮ್ ಕಲಾ ಸಂವಾದದ ಉದ್ದೇಶ:
ಸಾಂಪ್ರದಾಯಿಕ ಮತ್ತು ಸಮಕಾಲೀನ ಕಲಾವಿದರ ನಡುವೆ ವಿಚಾರ ವಿನಿಮಯವನ್ನು ಪ್ರೋತ್ಸಾಹಿಸುವುದು, ಕಲಾತ್ಮಕ ಚಿಂತನೆಯ ವಿಕಸನಕ್ಕೆ ಒಳನೋಟ ನೀಡುವುದು ಮತ್ತು ಯುವ ಕಲಾವಿದರನ್ನು ಪ್ರೇರೇಪಿಸುವುದು ಇದರ ಪ್ರಮುಖ ಉದ್ದೇಶಗಳಾಗಿವೆ.
Related Articles
Thank you for your comment. It is awaiting moderation.


Comments (0)