ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆಡಳಿತಾತ್ಮಕವಾಗಿ ಜಾರಿ; ವರ್ಷಾಂತ್ಯಕ್ಕೆ ಪಾಲಿಕೆ ಚುನಾವಣೆ
- by Suddi Team
- September 2, 2025
- 40 Views

ಬೆಂಗಳೂರು: ಐದು ಪಾಲಿಕೆಗಳನ್ನು ಒಳಗೊಂಡಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆಡಳಿತಾತ್ಮಕವಾಗಿ ಅಧಿಕೃತವಾಗಿ ಅನುಷ್ಠಾನಕ್ಕೆ ಬಂದಿದ್ದು,, ವರ್ಷಾಂತ್ಯಕ್ಕೆ ಜಿಬಿಎಗೆ ಮೊದಲ ಚುನಾವಣೆ ನಡೆಯಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,ನಾಳೆಯಿಂದಲೇ ಆಯಾ ಪಾಲಿಕೆ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ತೆರಿಗೆ ಹಣ ಆಯಾ ಪಾಲಿಕೆಗೆ ಸೇರಲಿದೆ. ಈ ತೆರಿಗೆ ಹಣ ಜಿಬಿಎಗಾಗಲಿ ಅಥವಾ ರಾಜ್ಯ ಸರ್ಕಾರಕ್ಕಾಗಲಿ ಬರುವುದಿಲ್ಲ. ನಾವು ಯಾವುದೇ ರೀತಿಯಲ್ಲಿ ಸಂವಿಧಾನದ 74ನೇ ತಿದ್ದುಪಡಿಗೆ ಧಕ್ಕೆಯಾಗುವುದಿಲ್ಲ. ಪಾಲಿಕೆಗಳಿಗೆ ಸ್ವಾಯತ್ತತೆ ನೀಡಲಾಗಿದೆ. ಮುಂದೆ ಜಿಬಿಎ ಮೂಲಕ ದೊಡ್ಡ ದೊಡ್ಡ ಯೋಜನೆಗಳ ಜಾರಿ, ಉತ್ತಮ ಆಡಳಿತ, ಸೇವೆಗೆ ಮೀಸಲಾಗಿರಲಿದೆ. ಸರ್ಕಾರದಿಂದ ಬಂದ ಹಣ ಜಿಬಿಎ ಹಾಗೂ ಪಾಲಿಕೆಗಳಿಗೆ ಹೋಗಲಿದೆ ಎಂದು ವಿವರಿಸಿದರು.
ನವೆಂಬರ್ 1ರಂದು ಹೊಸ ಕಚೇರಿ ಕಟ್ಟಡಕ್ಕೆ ಭೂಮಿ ಪೂಜೆ ನಡೆಯಲಿದೆ. ಇದಕ್ಕಾಗಿ ಜಾಗ ಗುರುತಿಸಲಾಗಿದೆ. ಈ ಐದೂ ಪಾಲಿಕೆ ಕಚೇರಿಗಳು ಒಂದೇ ರೀತಿ ನಿರ್ಮಾಣವಾಗಬೇಕು. ಇದಕ್ಕಾಗಿ ಅತ್ಯುತ್ತಮ ವಾಸ್ತುಶಿಲ್ಪವನ್ನ ಸಿದ್ಧತೆ ಮಾಡಲು ಸೂಚನೆ ನೀಡಲಾಗಿದ್ದು, ಸಾರ್ವಜನಿಕರು ತಮ್ಮ ಸಲಹೆಗಳನ್ನು ನೀಡಬಹುದು. ಅತ್ಯುತ್ತಮ ವಿನ್ಯಾಸಕ್ಕೆ 5 ಲಕ್ಷ ಬಹುಮಾನ ನೀಡಲು ಸೂಚಿಸಿದ್ದೇನೆ. ಇನ್ನು ಜಿಬಿಎ ಲೋಗೋಗಳಿಗೂ ಸಲಹೆ ನೀಡಲು ಅವಕಾಶ ನೀಡಲಾಗಿದೆ” ಎಂದು ವಿವರಿಸಿದರು.
ಪಾಲಿಕೆ ಚುನಾವಣೆ ಸಂಬಂಧ “ನಾವು ಸುಪ್ರೀಂ ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದ್ದು, ನಮಗೆ ಕಾಲಮಿತಿ ಇದೆ. ನ್ಯಾಯಾಲಯ ಕೂಡ ಅದನ್ನು ಒಪ್ಪಿದೆ. 1-11-2025 ವಾರ್ಡ್ ಪುನರ್ ವಿಂಗಡಣೆ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು. 30-11-2025ರಂದು ವಾರ್ಡ್ ಗಳ ಮೀಸಲಾತಿ ಅಧಿಸೂಚನೆ ಹೊರಡಿಸಲಾಗುವುದು. ಇದಾದ ಬಳಿಕ ಚುನಾವಣೆ ನಡೆಸಲಿದೆ. ಅವರು ಒಂದು ವಾರ, ಹದಿನೈದು ದಿನಗಳಲ್ಲಿ ಮಾಡಬಹುದು. ಈಗಾಗಲೇ ಚುನಾವಣೆ ನಡೆಸಲು ಪೂರ್ವಸಿದ್ಧತೆಗೆ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ. ಅವರೂ ಕೂಡ ಅತಿ ಶೀಘ್ರದಲ್ಲಿ ಮತದಾರರ ಪಟ್ಟಿ ಸಿದ್ಧಪಡಿಸಲಿದ್ದಾರೆ. ಸ್ವಾಯತ್ತ ಸಂಸ್ಥೆಯಾಗಿ ಚುನಾವಣಾ ಆಯೋಗ ಚುನಾವಣೆ ಮಾಡಲಿದೆ” ಎಂದು ತಿಳಿಸಿದರು.
ಖಾತಾ, ಆಸ್ತಿ ತೆರಿಗೆ ಎಲ್ಲವೂ ಬಿಬಿಎಂಪಿ ಮಾನದಂಡಗಳೇ ಮುಂದುವರಿಯಲಿದ್ದು, ಹೊಸ ಪಾಲಿಕೆಗಳ ಮೂಲಕ ಮುಂದುವರಿಯಲಿದೆ. ಇಂದು ಪಾಲಿಕೆಗಳು ಅಸ್ತಿತ್ವಕ್ಕೆ ಬಂದಿದ್ದು, ಅಧಿಕಾರಿಗಳು ಇಂದು ಅಧಿಕಾರ ಸ್ವೀಕಾರ ಮಾಡಿದ್ದಾರೆ. ನಾಳೆಯಿಂದ ಖಾತೆ ತೆರೆದು ತಮ್ಮ ಪಾಲಿಕೆಗಳ ನವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹಿಸಲಿದ್ದಾರೆ. ಒಂದೆರಡು ದಿನಗಳು ಹೆಚ್ಚು ಕಮ್ಮಿಯಾಗಬಹುದು” ಎಂದು ತಿಳಿಸಿದರು.
ಬೆಂಗಳೂರು ದಕ್ಷಿಣ ಜಿಲ್ಲೆ ಯಾವಾಗ ಸೇರ್ಪಡೆಯಾಗಲಿದೆ ಎಂದು ಕೇಳಿದಾಗ, “ಅದು ಸಧ್ಯಕ್ಕೆ ಸೇರುವುದಿಲ್ಲ. ಯಲಹಂಕ, ತುಮಕೂರು ರಸ್ತೆಯ ಕೆಲವು ಪ್ರದೇಶಗಳು ಇನ್ನೂ ಪಂಚಾಯ್ತಿ ವ್ಯಾಪ್ತಿಯಲ್ಲಿವೆ. ಅವೆಲ್ಲವೂ ಈಗ ನಗರವಾಗಿವೆ” ಎಂದು ತಿಳಿಸಿದರು.
Related Articles
Thank you for your comment. It is awaiting moderation.
Comments (0)