ಬೆಂಗಳೂರಿಗರಿಗೆ ಸರ್ಕಾರದ ಶಾಕ್: ಇನ್ಮುಂದೆ ಬಸ್ ಟಿಕೆಟ್ ದರ ಪರಿಷ್ಕರಣೆ ಮಾದರಿಯಲ್ಲಿ ಕಾವೇರಿ ನೀರಿನ ದರವೂ ಪರಿಷ್ಕರಣೆಯಾಗುತ್ತೆ

ಬೆಂಗಳೂರು: ಬಿಡಬ್ಲ್ಯುಎಸ್ಎಸ್‌ಬಿ ಮೂಲಕ ಬೆಂಗಳೂರಿಗೆ‌ ಸರಬರಾಜು ಮಾಡುವ ಕುಡಿಯುವ ನೀರಿನ ದರ ಪರಿಷ್ಕರಣೆ ಮೂಲಕ 500 ಕೋಟಿ ನಷ್ಟ ಕಡಿಮೆ ಮಾಡುವ ಪ್ರಯತ್ನ ಮಾಡಿದ್ದು, ಮುಂದಿನ ದಿನಗಳಲ್ಲಿ ಸಾರಿಗೆ ಇಲಾಖೆ ಮಾದರಿಯಲ್ಲಿ ದರ ಪರಿಷ್ಕರಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಖಾಸಗಿ ಹೋಟೆಲ್‌ನಲ್ಲಿ ಮಾತನಾಡಿದ ಅವರು, ನಾನು ಬೆಂಗಳೂರು ಉಸ್ತುವಾರಿ ವಹಿಸಿಕೊಂಡ ಬಳಿಕ ನೀರಿನ ದರ ಏರಿಕೆಗೆ ಅನುಮತಿ ನೀಡಿದ್ದೇನೆ. ಟೀಕೆಗಳು ವ್ಯಕ್ತವಾಗುವುದು ಸಹಜ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ಟೀಕೆ ಮಾಡುವವರು ಮಾಡುತ್ತಿರಲಿ ಎಂದು ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಿ ದಿಟ್ಟ ತೀರ್ಮಾನ ಮಾಡಿದೆ. ಈ ದರ ಪರಿಷ್ಕರಣೆಯಿಂದ ವಾರ್ಷಿಕವಾಗಿ 500 ಕೋಟಿಯಷ್ಟು ನಷ್ಟ ಕಡಿಮೆ ಮಾಡುವ ಪ್ರಯತ್ನ ಮಾಡಲಾಗಿದೆ. ನಷ್ಟವನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಾಗದಿದ್ದರೂ ಅದನ್ನು ನಿಯಂತ್ರಿಸಲು ಪ್ರಯತ್ನಿಸಲಾಗಿದೆ. ಮುಂದಿನ ದಿನಗಳಲ್ಲಿ ಸಾರಿಗೆ ಇಲಾಖೆ ಮಾದರಿಯಲ್ಲಿ ದರ ಪರಿಷ್ಕರಣೆ ಮಾಡಲು ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.

ಜಲಮಂಡಳಿ ಸಿಬ್ಬಂದಿ ಬಹಳ ಪರಿಶ್ರಮದಿಂದ ಕೆಲಸ ಮಾಡುತ್ತಿದ್ದಾರೆ. ಕಾವೇರಿ 5ನೇ ಹಂತ ಕುಡಿಯುವ ನೀರಿನ ಯೋಜನೆ ಜಾರಿಗೆ ಸಾಕಷ್ಟು ಅಡಚಣೆಗಳು ಎದುರಾಗಿದ್ದವು. ಅವೆಲ್ಲವನ್ನೂ ನಿವಾರಿಸಿ ಜಾರಿ ಮಾಡಲಾಗಿದೆ. ಹೊಸ ಸಂಪರ್ಕ ನೀಡಲು ಇದ್ದ ಸಮಸ್ಯೆಗಳನ್ನು ನಿವಾರಣೆ ಮಾಡಲಾಗಿದೆ. ಸಂಚಾರಿ ಕಾವೇರಿ ಯೋಜನೆ ಮೂಲಕ ಜನರಿಗೆ ಕಡಿಮೆ ಬೆಲೆಗೆ ಪರಿಶುದ್ಧವಾದ ನೀರನ್ನು ನೀಡಲಾಗುತ್ತಿದೆ. ಇನ್ನು ಬೆಂಗಳೂರಿನಲ್ಲಿ ಒಳಚರಂಡಿ ವಿಚಾರವೂ ಒಂದು ಸವಾಲಾಗಿದೆ. ಕೊಳಚೆ ನೀರನ್ನು ಉತ್ತಮ ಕೆರೆಗಳಿಗೆ ಬಿಡಲಾಗುತ್ತಿದೆ. ಇದನ್ನು ಸಂಸ್ಕರಿಸಿ ಮರುಬಳಕೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.

Related Articles

Comments (0)

Leave a Comment