ಬೆಂಗಳೂರಿಗೆ ಕುಡಿಯಲು, ಬಳಸಲು ಪ್ರತ್ಯೇಕ ನೀರು ಪೂರೈಕೆ: ಸರ್ಕಾರದ ಚಿಂತನೆ..!
- by Suddi Team
- June 19, 2025
- 164 Views

ಬೆಂಗಳೂರು: ದೇಶದ ಇತರ ರಾಜ್ಯಗಳ ಮಹಾನಗರಗಳಲ್ಲಿ ಕುಡಿಯುವ ನೀರಿನ ಸಂಪರ್ಕವೇ ಬೇರೆ, ದಿನ ಬಳಕೆ ನೀರಿನ ಸಂಪರ್ಕವೇ ಬೇರೆ ಇದೆ. ಆದರೆ, ನಮ್ಮಲ್ಲಿ ಕುಡಿಯಲು, ವಾಹನ ತೊಳೆಯಲು, ಗಿಡಗಳಿಗೆ ಹಾಕಲು ಎಲ್ಲದಕ್ಕೂ ಕುಡಿಯುವ ನೀರನ್ನೇ ಬಳಸಲಾಗುತ್ತಿದೆ. ಸಮರ್ಪಕ ಕುಡಿಯವ ನೀರು ಪೂರೈಕೆ ಸಲುವಾಗಿ ನಮ್ಮಲ್ಲೂ ಅಂತಹ ವ್ಯವಸ್ಥೆ ಅಳವಡಿಸಿಕೊಳ್ಳುವ ಚಿಂತನೆ ನಡೆಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್ಎಸ್‌ಬಿ) ವತಿಯಿಂದ ಕಳೆದ ಮಾರ್ಚ್ 21ರಿಂದ 28ರವರೆಗೆ ಆಯೋಜಿಸಲಾಗಿದ್ದ ಜಲ ಸಂರಕ್ಷಣೆ ಅಭಿಯಾನ ಸಪ್ತಾಹದಲ್ಲಿ 5,33,642 ಪ್ರತಿಜ್ಞೆ ಸ್ವೀಕರಿಸಿ, ಜಲ ಸಂರಕ್ಷಣೆಯಲ್ಲಿ ಗಿನ್ನಿಸ್ ವಿಶ್ವದಾಖಲೆ ಬರೆದ ಹಿನ್ನೆಲೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿ.ಕೆ. ಶಿವಕುಮಾರ್ ಅವರು ಬುಧವಾರ ಅಧಿಕೃತ ಪ್ರಮಾಣಪತ್ರ ಸ್ವೀಕರಿಸಿದರು.
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮದಲ್ಲಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ತೀರ್ಪುಗಾರ ಸ್ವಪ್ನಿಲ್ ದಂಗರಿಕರ್ ಅವರು ಬೆಂಗಳೂರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಪ್ರಮಾಣಪತ್ರ ವಿತರಿಸಿದರು.
ಈ ವೇಳೆ ಮಾತನಾಡಿದ ಡಿಸಿಎಂ, ನಾವು ನೀರನ್ನು ಉಳಿಸಲೇಬೇಕು. ಈ ನೀರನ್ನು ಉಳಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಬಿಡಬ್ಲ್ಯುಎಸ್ಎಸ್‌ಬಿ ವತಿಯಿಂದ ಒಂದು ವಾರಗಳ ಕಾಲ ಪ್ರತಿಜ್ಞಾ ಸ್ವೀಕಾರ ಅಭಿಯಾನ ಮಾಡಿದ್ದೆವು. ಈ ಅಭಿಯಾನದಲ್ಲಿ 5,33,642 ಮಂದಿ ಪ್ರತಿಜ್ಞೆ ಸ್ವೀಕರಿಸಿದ್ದರು. ಆ ಮೂಲಕ ಇದು ಗಿನ್ನಿಸ್ ದಾಖಲೆ ಬರೆದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ದೆಹಲಿ ಸೇರಿ ದೇಶದ ಬೇರೆ ನಗರಗಳಲ್ಲಿ ಕುಡಿಯುವ ನೀರಿನ ಸಂಪರ್ಕವೇ ಬೇರೆ, ದೈನಂದಿನ ಚಟುವಟಿಕೆಗೆ ಬಳಸುವ ನೀರಿನ ಸಂಪರ್ಕವೇ ಬೇರೆ ಇದೆ. ಆದರೆ, ನಮ್ಮಲ್ಲಿ ಎಲ್ಲದಕ್ಕೂ ಕುಡಿಯುವ ನೀರನ್ನೇ ಬಳಸಲಾಗುತ್ತಿದೆ. ಶೇ. 35 ಮಂದಿ ಕುಡಿಯುವ ನೀರಿನ ಬಿಲ್ ಕಟ್ಟುತ್ತಿಲ್ಲ. ಆದರೂ ಮಂಡಳಿ ಕೆಲಸ ಮಾಡುತ್ತಿದೆ. ಬೆಂಗಳೂರಿನ 2 ಕೋಟಿ ನಾಗರಿಕರಿಗೆ ಕುಡಿಯುವ ನೀರು ಪೂರೈಸಲು ಯೋಜನೆ ರೂಪಿಸುತ್ತಿದ್ದೇವೆ. ರಾಮ್ ಪ್ರಸಾದ್ ಮನೋಹರ್ ಅವರ ನೇತೃತ್ವದಲ್ಲಿ ಮಂಡಳಿಯು ಹೊಸ ಆವಿಷ್ಕಾರಿ ಯೋಜನೆಗಳನ್ನು ರೂಪಿಸುತ್ತಿದೆ ಎಂದು ಮಾಹಿತಿ ನೀಡಿದರು.
ಬದುಕಿನಲ್ಲಿ ನಾವೇನಾದರೂ ಸಾಧನೆ ಮಾಡಬೇಕು. ಬೆಂಗಳೂರು ಯೋಜಿತ ನಗರವಲ್ಲ. ಇಲ್ಲಿನ ಜನಸಂಖ್ಯೆ ಬಹಳ ದೊಡ್ಡದಾಗಿ ಬೆಳೆದಿದೆ. ಹೀಗಾಗಿ, ಇಲ್ಲಿ ಗ್ರೇಟರ್ ಬೆಂಗಳೂರನ್ನು ಘೋಷಣೆ ಮಾಡಿ, ಮತ್ತಷ್ಟು ಪ್ರದೇಶವನ್ನು ಮುಂದಿನ ದಿನಗಳಲ್ಲಿ ಬೆಂಗಳೂರಿನ ವ್ಯಾಪ್ತಿಗೆ ಸೇರಿಸಿಕೊಳ್ಳಲಾಗುತ್ತಿದೆ. ಇದರ ವ್ಯಾಪ್ತಿಯಲ್ಲಿ ಎಷ್ಟು ಪಾಲಿಕೆ ರಚಿಸಬೇಕು ಎಂದು ಚರ್ಚೆ ಮಾಡುತ್ತಿದ್ದೇವೆ ಎಂದರು.
ಬೆಂಗಳೂರಿನ ಒಳಗೆ 1.40 ಕೋಟಿ ಜನಸಂಖ್ಯೆ ಇದ್ದು, ನಗರದ ಹೊರಭಾಗದಲ್ಲಿ ಆನೇಕಲ್ ಹಾಗೂ ಇತರ ಭಾಗದಲ್ಲಿ 50 ಲಕ್ಷ ಜನಸಂಖ್ಯೆ ಇದೆ. ಬೆಂಗಳೂರಿಗೆ ಹೊಸದಾಗಿ ಸೇರಿದ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುತ್ತಿದ್ದೇವೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾದಂತೆ ಬಸ್, ರೈಲು ಸೇರಿ ಇತರ ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಕಳೆದ 10 ವರ್ಷಗಳಿಂದ ನೀರಿನ ದರ ಏರಿಕೆ ಮಾಡಿರಲಿಲ್ಲ. ಇದರಿಂದ, ಮಂಡಳಿ ವಾರ್ಷಿಕ 400-500 ಕೋಟಿ ರೂ. ನಷ್ಟ ಅನುಭವಿಸುವಂತಾಗಿದೆ. ದಾಖಲೆ ಪ್ರಕಾರ ಒಂದು ಸಾವಿರ ಕೋಟಿವರೆಗೂ ನಷ್ಟವಾಗಿರುವ ಬಗ್ಗೆ ಮಾಹಿತಿ ಇದೆ ಎಂದು ಹೇಳಿದರು.
Related Articles
Thank you for your comment. It is awaiting moderation.
Comments (0)