ಬಿಬಿಎಂಪಿ ಕಾಮಗಾರಿ ಅಕ್ರಮ ಆರೋಪ; ಸರ್ಕಾರಕ್ಕೆ ವರದಿ ಸಲ್ಲಿಸಿದ ವಿಚಾರಣಾ ಆಯೋಗ

ಬೆಂಗಳೂರು: ಬಿಜೆಪಿ ಸರ್ಕಾರದ ಅವದಿಯಲ್ಲಿ ಬಿಬಿಎಂಪಿ ಕಾಮಗಾರಿಗಳ ಅನುಷ್ಠಾನದಲ್ಲಿ ಹಲವು ಲೋಪಗಳು ಕಂಡು ಬಂದಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನಿನಂತೆ ಕ್ರಮಕೈಗೊಳ್ಳಬೇಕು ಹಾಗು ಸುಧಾರಣಾ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ ದಾಸ್ ವಿಚಾರಣಾ ಆಯೋಗ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿದೆ.

ಸಿಎಂ ಅಧಿಕೃತ ನಿವಾಸ ಕಾವೇರಿಗೆ ಭೇಟಿ ನೀಡಿದ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ ದಾಸ್ ವಿಚಾರಣಾ ಆಯೋಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 2019-20 ರಿಂದ 2022-23 ರವರೆಗೆ ನಡೆದಿರುವ ಕಾಮಗಾರಿಗಳ ಅನುಷ್ಠಾನದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತಾದ ತನಿಖಾ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಲ್ಲಿಸಿದೆ. ಈ ತನಿಖಾ ವರದಿಯು ಅನುಬಂಧಗಳೊಂದಿಗೆ ಒಟ್ಟು 8900 ಪುಟಗಳನ್ನು ಹೊಂದಿದೆ.

ತನಿಖಾ ವರದಿಯಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನಿನಂತೆ ಕ್ರಮಕೈಗೊಳ್ಳಲು ಶಿಫಾರಸು ಮಾಡಿದೆ. ಜೊತೆಗೆ ಸುಧಾರಣಾ ಕ್ರಮಕೈಗೊಳ್ಳಲು ಸಹ ಶಿಫಾರಸು ಮಾಡಿದೆ.

ಪ್ರಕರಣದ ವಿವರ:

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ 2019-20 ರಿಂದ 2022-23 ರವರೆಗೆ ನಡೆದಿರುವ ಕಾಮಗಾರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವ ಬಗ್ಗೆ ಸಂಪೂರ್ಣವಾದ ತನಿಖೆ ನಡೆಸಲು ಉಪ ಮುಖ್ಯಮಂತ್ರಿಗಳು 2023 ರ ಜುಲೈ 13 ರಂದು ಟಿಪ್ಪಣಿ ಮೂಲಕ ಮುಖ್ಯಮಂತ್ರಿಗಳಿಗೆ ಕೋರಿದ್ದು, ಅದರಂತೆ ಆಗಸ್ಟ್ 5 ರ ಸರ್ಕಾರದ ಆದೇಶದಲ್ಲಿ ತಜ್ಞರಗಳನ್ನೊಳಗೊಂಡ ನಾಲ್ಕು ವಿಶೇಷ ತನಿಖಾ ಸಮಿತಿಗಳನ್ನು ರಚಿಸಿ ಪರಿಪೂರ್ಣ ತನಿಖಾ ವರದಿಯನ್ನು ಸಲ್ಲಿಸಲು ಸೂಚಿಸಲಾಗಿತ್ತು.

2023 ರ ಡಿಸೆಂಬರ್ 15 ರ ಸರ್ಕಾರದ ಆದೇಶದಲ್ಲಿ ನಾಲ್ಕು ವಿಶೇಷ ತನಿಖಾ ಸಮಿತಿಗಳನ್ನು ಹಿಂಪಡೆದು  ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ ದಾಸ್ ವಿಚಾರಣಾ ಆಯೋಗಕ್ಕೆ ತನಿಖೆಯನ್ನು ವರ್ಗಾಯಿಸಿತು.2024 ರ ಏಪ್ರಿಲ್ 20ರ  ಸರ್ಕಾರದ ಅಧಿಸೂಚನೆಯಲ್ಲಿ ಈ ತನಿಖೆಯನ್ನು ವಿಚಾರಣಾ ಆಯೋಗದ ಮತ್ತು ವಿಶೇಷ ತನಿಖಾ ಸಮಿತಿಗಳ ಪರಿಶೀಲನಾ ಅಂಶಗಳನ್ನು ಸಹ ಒಳಗೊಂಡಂತೆ ವಿಚಾರಣಾ ಆಯೋಗವು ತನಿಖೆಯನ್ನು ಮುಂದುವರೆಸುವುದು ಎಂದು ಸ್ಪಷ್ಟೀಕರಣ ನೀಡಿತ್ತು.

ಈ ಹಿನ್ನೆಲೆಯಲ್ಲಿ, ಆಯೋಗವು ತನಿಖೆ ನಡೆಸಲು ಮೂರು ಮಾದರಿಯ ಪರಿಶೀಲನಾ ಮಾರ್ಗವನ್ನು ಅನುಸರಿಸಿತು.

1. ಕಾಮಗಾರಿಗಳ ಕಡತ ಪರಿಶೀಲನೆ

2. ಕಾಮಗಾರಿಗಳ ಸ್ಥಳ ಪರಿಶೀಲನೆ

3. ಕಾಮಗಾರಿಗಳ ಲೆಕ್ಕ ಪರಿಶೀಲನೆ

ರ‍್ಯಾಂಡಮ್ ಆಯ್ಕೆ ಮೂಲಕ ಆಯ್ಕೆಯಾದ 528 ಮತ್ತು ಇತರೆ 233, ಒಟ್ಟು 761 ಪೂರ್ಣಗೊಂಡ ಕಾಮಗಾರಿಗಳ ತನಿಖೆ ನಡೆಸಿ ಹಲವು ನ್ಯೂನತೆಗಳನ್ನು ಪತ್ತೆ ಮಾಡಲಾಗಿದೆ. ಅಂತಿಮವಾಗಿ ವಿಚಾರಣಾ ಆಯೋಗವು ಇಂದು ಸರ್ಕಾರಕ್ಕೆವರದಿ ಸಲ್ಲಿಸಿದೆ.

Related Articles

Comments (0)

Leave a Comment