ಹಿರೇಗುಂಜಳದ ಸಾವಯವ ಕೃಷಿಕ ಮಲ್ಲೇಶಪ್ಪ ಬಿಸಿರೊಟ್ಟಿ ಅವರಿಗೆ ಬಸವ ಕೃಷಿ ಪ್ರಶಸ್ತಿ ಪ್ರದಾನ
- by Suddi Team
- December 4, 2025
- 9 Views
ಧಾರವಾಡ : ಹೆಚ್ಚು ವಿದ್ಯಾಭ್ಯಾಸ ಪಡೆಯದಿದ್ದರೂ ಸಹ ಕೃಷಿಯಲ್ಲಿ ಅಪಾರವಾದ ಅನುಭವ ಹಾಗೂ ಪ್ರಗತಿಪರ ಕಾರ್ಯಕ್ಷಮತೆ ಹೊಂದಿ ಓರ್ವ ಶಿಶ್ತುಬದ್ಧ ಶ್ರೇಷ್ಠ ಕೃಷಿಕರಾಗಿ ಅಮ್ಮಿನಬಾವಿ ಗ್ರಾಮದ ದಿ.ಬಸಪ್ಪ ಮುಂದಿನಮನಿ ಎಲ್ಲರ ಗಮನಸೆಳೆದಿದ್ದರು ಎಂದು ಹಿರಿಯ ಕಾನೂನು ತಜ್ಞ, ಕವಿವ ಸಂಘದ ಗೌರವ ಉಪಾಧ್ಯಕ್ಷ ಕೆ. ಬಿ. ನಾವಲಗಿಮಠ ಹೇಳಿದರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ಧಾರವಾಡ ತಾಲೂಕು ಅಮ್ಮಿನಬಾವಿ ಗ್ರಾಮದ ಶ್ರೇಷ್ಠ ಕೃಷಿಕ ದಿ.ಬಸಪ್ಪ ಶಂಕ್ರೆಪ್ಪ ಮುಂದಿನಮನಿ ದತ್ತಿ ಸಂಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೃಷಿ ಉಪನ್ಯಾಸ ಮತ್ತು ಬಸವ ಕೃಷಿ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು. ಯಾವುದೇ ಕ್ಷೇತ್ರದಲ್ಲಿ ಮಾಡಿದ ಸಾಧನೆಯ ಮೂಲಕ ವ್ಯಕ್ತಿಯು ಸಾವಿನ ನಂತರವೂ ಎಲ್ಲರ ಮನದಲ್ಲಿ ಜೀವಂತವಾಗಿರುತ್ತಾನೆ. ಅವರ ಜನಪರ ಕಾರ್ಯ-ಚಿಂತನೆಗಳು ಸ್ಮರಣೆಗೆ ಪರಿಗಣಿತವಾಗುತ್ತವೆ ಎಂದೂ ಅವರು ಹೇಳಿದರು.
‘ಬಸವ ಕೃಷಿ ಪ್ರಶಸ್ತಿ’ ಸ್ವೀಕರಿಸಿ ಉಪನ್ಯಾಸ ನೀಡಿದ ಹಿರೇಗುಂಜಳದ ಶ್ರೇಷ್ಠ ಸಾವಯವ ಕೃಷಿಕ ಮಲ್ಲೇಶಪ್ಪ ಬಿಸಿರೊಟ್ಟಿ ಅವರು, ರೈತರು ಕೇವಲ ಸೆಗಣಿ ಗೊಬ್ಬರವನ್ನು ಮಾತ್ರ ಬಳಕೆ ಮಾಡಿ ಕೃಷಿ ಮಾಡಬೇಕು. ಸಗಣಿಗೊಬ್ಬರದಲ್ಲಿ ಅಗಾಧವಾದ ಬಹುದೊಡ್ಡ ಶಕ್ತಿ ಸಂಚಯವಿದ್ದು, ಇದು ಭೂಮಿಯ ಮಣ್ಣಿನ ಕಣಗಳಲ್ಲಿ ನಿರಂತರ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿದೆ. ಸೆಗಣಿಯು ಸಸ್ಯಗಳ ಬೆಳವಣಿಗೆಗೆ ಎಲ್ಲಾ ರೀತಿಯ ಪೋಷಕಾಂಶಗಳನ್ನು ಒದಗಿಸುತ್ತದೆ. ಸೆಗಣಿಯು ರೈತನ ಕೃಷಿ ಬದುಕಿನಲ್ಲಿ ಮಹತ್ತರ ಪಾತ್ರವಹಿಸುತ್ತದೆ. ಕಳೆದ 20 ವರ್ಷಗಳಿಂದ ಕೇವಲ ಸೆಗಣಿಯನ್ನಷ್ಟೇ ಬಳಕೆ ಮಾಡಿ ಅಧಿಕ ಇಳುವರಿಯನ್ನು ಪಡೆದಿದ್ದು, ನಾಡಿನ ಸಮಸ್ತ ರೈತ ಬಾಂಧವರು ಸೆಗಣಿಯನ್ನೇ ತಮ್ಮ ಸರ್ವಸ್ವವೆಂದು ಭಾವಿಸಿ ಅದನ್ನು ಯಥೇಚ್ಛವಾಗಿ ಬಳಕೆ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಕೇಂದ್ರ ಲೋಕಸೇವಾ ಆಯೋಗ ನಡೆಸುವ ನ್ಯಾಶನಲ್ ಡಿಫೆನ್ಸ್ ಅಕಾಡೆಮಿ (ಎನ್.ಡಿ.ಎ) 2025ರ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ಅಪ್ಪಟ ಗ್ರಾಮೀಣ ಪ್ರತಿಭೆ ರಿಷಿ ಕೃಷ್ಣ ಬೊಂಗಾಳೆ ಅವರನ್ನು ಗೌರವಿಸಲಾಯಿತು. ದತ್ತಿ ದಾನಿ ವಕೀಲ ಸದಾನಂದ ಮುಂದಿನಮನಿ ಹಾಗೂ ಕವಿವ ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಮಾತನಾಡಿದರು.
ವಕೀಲ ಶಿವಾನಂದ ಭಾವಿಕಟ್ಟಿ, ಗುರು ಹಿರೇಮಠ, ಡಾ.ಧನವಂತ ಹಾಜವಗೋಳ, ಬಸವಣ್ಣೆಪ್ಪ ನವಲಗುಂದ, ಗುರುಮೂರ್ತಿ ಯರಗಂಬಳಿಮಠ, ಮಾಳಪ್ಪ ಅಮರಶೆಟ್ಟಿ, ಪ್ರಮೀಳಾ ಜಕ್ಕಣ್ಣವರ, ಪಿ.ಎಸ್. ಪತ್ರಾವಳಿ, ಗಂಗಾಧರ ಹುರಳಿ, ಕೆ.ಎನ್.ಜಾಕೋಜಿ, ದಯಾನಂದ ಮುಂದಿನಮನಿ, ಕೃಷ್ಣ ಬೊಂಗಾಳೆ, ಎನ್.ಆರ್.ಬಾಳೀಕಾಯಿ, ಮಹಾಂತಯ್ಯ ಹಿರೇಮಠ, ಸತೀಶ ಕೋಯಪ್ಪನವರ, ರಾಜೇಶ ನಾವಲಗಿಮಠ, ನಾಗರಾಜ ಕೊಲ್ಲೂರಿ, ವಿಜಯಾ ಹರವಿ, ಮಹಾದೇವ ಬೆಟಗೇರಿ ಸೇರಿದಂತೆ ಅಮ್ಮಿನಬಾವಿ ಗ್ರಾಮದ ಹಲವಾರು ರೈತ ಮುಖಂಡರು ಹಾಗೂ ರೈತ ಮಹಿಳೆಯರು ಇದ್ದರು.
ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಸ್ವಾಗತಿಸಿದರು. ಡಾ. ಶೈಲಜಾ ಅಮರಶೆಟ್ಟಿ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.
Related Articles
Thank you for your comment. It is awaiting moderation.


Comments (0)