ಜಲಮೂಲಗಳ ನಿರ್ವಹಣೆಗೆ ಎಐ ತಂತ್ರಜ್ಞಾನದ ಮೊರೆ; ಡಿಜಿಟಲ್ ವಾಟರ್ ಸ್ಟಾಕ್ ಅಳವಡಿಕೆಗೆ ಚಿಂತನೆ
- by Suddi Team
- August 29, 2025
- 111 Views

ಬೆಂಗಳೂರು: ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಮುಂಚೂಣಿಯಲ್ಲಿರುವ ರಾಜ್ಯ ಇದೀಗ ರಾಜ್ಯದ ಜಲಮೂಲಗಳ ಸಮಗ್ರ ನಿರ್ವಹಣೆಗೆ ಉಪಗ್ರಹ ಹಾಗೂ ಎಐ ತಂತ್ರಜ್ಞಾನದ ಮೊರೆ ಹೋಗುತ್ತಿದ್ದು,ಡಿಜಿಟಲ್ ವಾಟರ್ ಸ್ಟಾಕ್ ಅಳವಡಿಕೆಗೆ ಚಿಂತನೆ ನಡೆಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಎನ್ ಎಸ್ ಭೋಸರಾಜು, ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಅಂತರ್ಜಲದ ಮಟ್ಟ ಕುಸಿತಗೊಂಡಿರುವ ಹಾಗೆಯೇ, ನೀರಿನ ಲಭ್ಯತೆ ಅಸಮರ್ಪಕವಾಗಿರುವ ಸಂಧರ್ಭದಲ್ಲಿ ದೇಶದಲ್ಲೆ ಮೊದಲ ಬಾರಿಗೆ, ಕರ್ನಾಟಕ ಸರ್ಕಾರ ‘ಡಿಜಿಟಲ್ ವಾಟರ್ ಸ್ಟಾಕ್’ (DWS) ಎಂಬ ನೂತನ ತಂತ್ರಜ್ಞಾನ ಆಧಾರಿತ ನೀರಿನ ನಿರ್ವಹಣಾ ವೇದಿಕೆಯನ್ನು ಅನುಷ್ಠಾನಗೊಳಿಸುತ್ತಿದೆ ಎಂದಿದ್ದಾರೆ.
ಉಪಗ್ರಹ ಸೆನ್ಸಾರ್ ಹಾಗೂ ಇಮೇಜಿಂಗ್ ಮತ್ತು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನಗಳ ಮೂಲಕ ರಾಜ್ಯದ ಸರೋವರಗಳು, ಕೆರೆಗಳು ಮತ್ತು ಭೂಗರ್ಭದ ಜಲಧಾರೆಗಳ (aquifer) ಗಳ ಸಮಗ್ರ ನಿರ್ವಹಣೆಯ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇದಾಗಿದೆ. ವಿವಿಧ ಇಲಾಖೆಗಳಲ್ಲಿ ಹಂಚಿಹೋಗಿರುವ ಜಲಮೂಲಗಳ ದತ್ತಾಂಶಗಳನ್ನು ಒಗ್ಗೂಡಿಸುವ ಮೂಲಕ ಒಂದೇ ವೇದಿಕೆಯಡಿಯಲ್ಲಿ ನಿರ್ವಹಿಸುವುದು ಇದರ ಮುಖ್ಯ ಉದ್ದೇಶವಾಗಿವೆ.
ರಾಜ್ಯದಲ್ಲಿ 41,000ಕ್ಕೂ ಹೆಚ್ಚು ನೀರಿನ ಮೂಲಗಳಿದ್ದು, 34,000ಕ್ಕೂ ಹೆಚ್ಚು ಕೆರೆಗಳನ್ನು ಈಗಾಗಲೇ ಸಮೀಕ್ಷೆ ಮಾಡಲಾಗಿದೆ ಮತ್ತು 31,000ಕ್ಕೂ ಹೆಚ್ಚು ಜಿಯೋಟ್ಯಾಗ್ ಮಾಡಲಾಗಿದೆ. 42,678 ಎಕರೆ ಅಕ್ರಮ ಅತಿಕ್ರಮಣ ಗುರುತಿಸಲಾಗಿದ್ದು, 29,000 ಎಕರೆ ಪ್ರದೇಶದಲ್ಲಿ ಅತಿಕ್ರಮಣ ತೆರವುಗೊಳಿಸಲಾಗಿದೆ. ಮೊದಲ ಹಂತದಲ್ಲಿ ಅಂತರ್ಜಲದ ನೀರಿನ ಅತಿಯಾದ ಬಳಕೆ ಮಾಡುತ್ತಿರುವ 41 ತಾಲ್ಲೂಕುಗಳಲ್ಲಿ ಡಿಜಿಟಲ್ ವಾಟರ್ ಸ್ಟಾಕ್ ಯೋಜನೆಯನ್ನು ಜಾರಿಗೆ ತರಲಾಗುವುದು. ರಾಜ್ಯದ ಜಲಮೂಲಗಳನ್ನು ನೈಸರ್ಗಿಕವಾದ ಉಳಿತಾಯ ಖಾತೆಗಳಂತೆ ಪರಿವರ್ತಿಸಲು ಹಾಗೆಯೇ, ಲಭ್ಯವಿರುವಂತಹ ಜಲಮೂಲಗಳ ಸಮರ್ಪಕ ನಿರ್ವಹಣೆ ಮಾಡುವುದಕ್ಕೆ ನಮ್ಮ ಸರಕಾರ ಬದ್ದವಾಗಿದೆ. ಈ ನಿಟ್ಟಿನಲ್ಲಿ ಈ ಯೋಜನೆ ಬಹಳಷ್ಟು ಸಹಕಾರಿಯಾಗಿರಲಿದೆ *ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು ತಿಳಿಸಿದ್ದಾರೆ.
ಏನಿದು ಡಿಜಿಟಲ್ ವಾಟರ್ ಸ್ಟಾಕ್:
ಉಪಗ್ರಹಗಳ ಸೆನ್ಸರ್‌ಗಳಿಂದ ಪಡೆದ ದತ್ತಾಂಶಗಳು, ಎಐ ಹಾಗೂ ಮಷಿನ್ ಲರ್ನಿಂಗ್‌ನಿಂದ ಇಮೇಜಿಂಗ್‌ನ ವಿಶ್ಲೇಷಣೆ ಮಾಡುವ ತಂತ್ರಜ್ಞಾನ ಇದಾಗಿದೆ. ಇದರಿಂದ ಜಲಮೂಲಗಳ ಐದು ವರ್ಷಗಳ ಹಿಂದಿನ ದತ್ತಾಂಶವನ್ನು ಪಡೆದುಕೊಂಡು, ಪ್ರಸ್ತುತ ಇರುವ ಸ್ಥಿತಿಗತಿಗಳ ಹೋಲಿಕೆ ಮಾಡಬಹುದಾಗಿದೆ. ಅಲ್ಲದೇ, ಯಾವುದೇ ಜಲಮೂಲದ ಸ್ವರೂಪ, ನೀರಿನ ಶೇಖರಣೆಯಲ್ಲಿ ಆಗುತ್ತಿರುವ ವ್ಯತ್ಯಾಸವನ್ನು ಗುರುತಿಸುವ ಮೂಲಕ ಅದನ್ನು ಸರಿಪಡಿಸುವ ಕಾರ್ಯ ಮಾಡಲು ಇದು ಅನುವು ಮಾಡಿಕೊಡಲಿದೆ.
ಮಾಸ್ಟರ್ ವಾಟರ್ ಅಟ್ಲಸ್ ಮತ್ತು ಡ್ಯಾಶ್‌ಬೋರ್ಡ್:
ಡಿಜಿಟಲ್ ವಾಟರ್ ಸ್ಟಾಕ್ ಮೂಲಕ ರಾಜ್ಯಮಟ್ಟದ ನೀರಿನ ನಿರ್ವಹಣೆಯ ಡ್ಯಾಶ್‌ಬೋರ್ಡ್ ಮತ್ತು “ಮಾಸ್ಟರ್ ವಾಟರ್ ಅಟ್ಲಸ್” ರಚಿಸಲಾಗುವುದು. ಇದು ಅಂತರ್ಜಲದ ಮಟ್ಟ, ಮಳೆಯ ಪ್ರಮಾಣ, ಮೇಲ್ಮೈ ಹರಿವು, ಬಳಕೆ ಮತ್ತು ನೀರಿನ ಗುಣಮಟ್ಟದ ಡೇಟಾವನ್ನು ಸಂಗ್ರಹಿಸಿ, ನಿಖರ ದತ್ತಾಂಶಗಳ ಮೂಲಕ ನೀರಿನ ಮೂಲಗಳ ಸ್ಥಿತಿಯನ್ನು ನಿರ್ವಹಿಸಲು ಅನುವು ಮಾಡಿಕೊಡಲಿದೆ.
Related Articles
Thank you for your comment. It is awaiting moderation.
Comments (0)