ಕಾವೇರಿ ಆರತಿ ಕಾರ್ಯಕ್ರಮಕ್ಕೆ ಸಾಹಸ ಕ್ರೀಡೆ,ಜಲಕ್ರೀಡೆ ಸೇರ್ಪಡೆ; ಕೈಬೀಸಿ ಕರೆಯುತ್ತಿದೆ ಕನ್ನಂಬಾಡಿ ಕಟ್ಟೆ
- by Suddi Team
- September 26, 2025
- 353 Views

ಮಂಡ್ಯ: ಈ ಬಾರಿಯ ಮೈಸೂರು ದಸರಾದ ಹೈಲೈಟ್ಸ್ ಎಂದರೆ ಕಾವೇರಿ ಆರತಿ, ಅದರಲ್ಲೂ ಸಾಹಸ ಕ್ರೀಡೆ ಹಾಗೂ ಜಲ ಕ್ರೀಡೆಗಳನ್ನು ಕಾವೇರಿ ಆರತಿ ಕಾರ್ಯಕ್ರಮದಲ್ಲಿ ಆಯೋಜನೆ ಮಾಡಿದ್ದು ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ.
ಹೌದು, ಈ ಬಾರಿಯ ದಸರಾದಲ್ಲಿ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗುತ್ತಿರುವ ಕಾವೇರಿ ಆರತಿ ಕಾರ್ಯಕ್ರಮ ಈಗ ಸಾಹಸ ಕ್ರೀಡೆ ಹಾಗೂ ಜಲ ಕ್ರೀಡೆಗಳನ್ನು ಒಳಗೊಳ್ಳುವ ಮೂಲಕ ಪ್ರವಾಸಿಗರಿಗೆ ರಸದೌತಣ ಉಣಬಡಿಸಲು ಸಿದ್ಧವಾಗಿದೆ. ಗಂಗಾರತಿ ಮಾದರಿಯಲ್ಲಿ ತಾಯಿ ಕಾವೇರಿಗೆ ಪೂಜೆ ಸಲ್ಲಿಸುವ ವರ್ಣರಂಜಿತ ಧಾರ್ಮಿಕ ಕಾರ್ಯಕ್ರಮದ ಜೊತೆಗೆ ಕರ್ನಾಟಕ ಸರ್ಕಾರವು ಪ್ರವಾಸಿಗರಿಗಾಗಿ ಕೆಆರ್ ಎಸ್ ಅಣೆಕಟ್ಟಿನಲ್ಲಿ ಕ್ರೀಡಾ ಉತ್ಸವಗಳನ್ನು ಆಯೋಜಿಸುತ್ತಿದೆ.
ರಾಜ್ಯ ಸರ್ಕಾರ ಈ ವರ್ಷ ಪ್ರಾಯೋಗಿಕವಾಗಿ ಕಾವೇರಿ ಆರತಿ ಕಾರ್ಯಕ್ರಮವನ್ನು ಮಾಡುತ್ತಿದೆಯಾದರೂ ಪ್ರವಾಸಿಗರ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ವರ್ಣರಂಜಿತವಾಗಿ ಕಾರ್ಯಕ್ರಮ ಆಯೋಜಿಸಿದೆ.ವಿಶೇಷವಾಗಿ ಮಕ್ಕಳನ್ನು ಆಕರ್ಷಿಸಲು ಸುಮಾರು 80 ಆಟಗಳನ್ನು ಪರಿಚಯಿಸಲಾಗಿದ್ದು, ವಾರಾಂತ್ಯದಲ್ಲಿ ಕುಟುಂಬ ಸಮೇತರಾಗಿ ಬಂದು ಅಮೂಲ್ಯ ಕ್ಷಣಗಳನ್ನು ಆನಂದಿಸುವ ವಾತಾವರಣ ಕಲ್ಪಿಸಲಾಗಿದೆ.
ಹೀಗಾಗಿ ಪ್ರವಾಸಿಗರು ಹಾಗೂ ರಾಜ್ಯದ ಜನ ಈ ವಾರಾಂತ್ಯದಲ್ಲಿ ಕೆಆರ್ ಎಸ್ ಗೆ ಆಗಮಿಸಿ ಈ ಆಕರ್ಷಕ ಕಣ್ತುಂಬಿಕೊಳ್ಳಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕರೆ ನೀಡಿದ್ದಾರೆ.
ಗೋಧೂಳಿ ಸಮಯದಲ್ಲಿ ಕಾವೇರಿ ಆರತಿ:
ಕೆಆರ್ ಎಸ್ (ಮಂಡ್ಯ): ಕನ್ನಡ ನಾಡಿನ ಜೀವನದಿ, ಧಾರ್ಮಿಕ, ಸಾಂಸ್ಕೃತಿಯ ಪ್ರತೀಕವಾಗಿರುವ ಕಾವೇರಿ ನದಿಗೆ ಪ್ರಪ್ರಥಮ ಬಾರಿಗೆ “ಕಾವೇರಿ ಆರತಿ” ಮಾಡುವ ಮೂಲಕ ರಾಜ್ಯದಲ್ಲಿ ಹೊಸ ಸಂಪ್ರದಾಯಕ್ಕೆ ಉಪಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್ ಅವರು ಮುನ್ನುಡಿ ಬರೆದರು.
ಕಾವೇರಮ್ಮನ ಒಡಲು ಸದಾ ತುಂಬಿರಬೇಕು. ಕೆಆರ್ ಎಸ್ ವರ್ಷ ಪೂರ್ತಿ ಭರ್ತಿಯಾಗಿರಬೇಕು. ನಾಡು ಸುಖ, ಶಾಂತಿ ಸಮೃದ್ಧಿಯಿಂದ ಕೂಡಿರಲೆಂದು ಡಿ.ಕೆ.ಶಿವಕುಮಾರ್ ಅವರು ಕಾವೇರಿ ಮಾತೆಗೆ ಆರತಿಯ ಜ್ಯೋತಿ ಬೆಳಗಿಸಿ ಹೊಸ ಇತಿಹಾಸ ಸೃಷ್ಟಿಸಿದರು. ಇದಕ್ಕೆ ಕೃಷ್ಣರಾಜಸಾಗರ ಸಾಕ್ಷಿಯಾಯಿತು.
ಮಧುವಣಗಿತ್ತಿಯಂತೆ ಸಿಂಗಾರಗೊಂಡಿದ್ದ ಕೃಷ್ಣರಾಜ ಸಾಗರದ ಬೃಂದಾವನದಲ್ಲಿ ಗೋಧೂಳಿ ಮುಹೂರ್ತದಲ್ಲಿ ಕಾವೇರಿ ನದಿಗೆ ಪುಷ್ಪಾರ್ಚನೆ ಮಾಡಿ, ತಾಯಿ ಕಾವೇರಿಗೆ ಆರತಿ ಬೆಳಗಿ ನಾಡಿನ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸಿದರು.
ದಕ್ಷಿಣ ಭಾರತದ ಇತಿಹಾಸದಲ್ಲೇ ಪ್ರಪ್ರಥಮವಾಗಿ ಕಾವೇರಿ ಆರತಿಯನ್ನು ಸಾಂಕೇತಿಕವಾಗಿ ನೆರವೇರಿಸಲಾಯಿತು. ಶಂಖನಾದ, ಡೋಳು, ನಗಾರಿ ಸದ್ದಿನೊಂದಿಗೆ, ವೇದ ಮಂತ್ರಗಳ ಪಠಣದೊಂದಿಗೆ ಸುಮಾರು ಒಂದು ಗಂಟೆಗಳ ಕಾಲ ನೆರವೇರಿದ ಕಾವೇರಿ ಆರತಿ ನೆರದಿದ್ದವರನ್ನು ಮೂಕವಿಸ್ಮತರನ್ನಾಗಿಸಿತು. ಒಂದು ಕ್ಷಣ ಪ್ರವಾಸಿಗರಿಗೆ ಕಾಶಿಯೇ ಕಣ್ಣ ಮುಂದೆ ಹಾದುಹೋದಂತಹ ಅನುಭವ.
ಕರ್ನಾಟಕದಿಂದ ಮಾತ್ರವಲ್ಲದೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಹೊರರಾಜ್ಯಗಳಿಂದ ಆಗಮಿಸಿದ ಸಹಸ್ರಾರು ಪ್ರವಾಸಿಗರು ಕಾವೇರಿ ಆರತಿಯನ್ನು ಕಣ್ತುಂಬಿಕೊಂಡರು. ಸೆ.26ರಿಂದ ಅಕ್ಟೋಬರ್ 2ರವರೆಗೆ ಪ್ರತಿ ಸಂಜೆ ನೆರವೇರಲಿರುವ ಕಾವೇರಿ ಆರತಿ ಮೈಸೂರು ದಸರಾಗೆ ಹೊಸ ಮೆರುಗನ್ನು ತಂದುಕೊಟ್ಟಿತು.
ಕಾವೇರಿ ಪ್ರಾರ್ಥನೆ, ತೀರ್ಥ ಪೂಜೆ, ಚಾಮರ ಸೇವೆ:
ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ ಸಂಪ್ರದಾಯ ಬದ್ಧವಾಗಿ ನೆರವೇರಿತು. 13 ಜನರನ್ನೊಳಗೊಂಡ ವೈದಿಕರ ತಂಡ ಹಾಗೂ ಅವರಿಗೆ ತಲಾ ಇಬ್ಬರು ಸಹಾಯಕರು ಸೇರಿ ಒಟ್ಟು 40 ಜನರ ತಂಡ ಪೂಜೆಯಲ್ಲಿ ಭಾಗಿದ್ದರು.
ಮೊದಲು “ವಾತಾಪಿ ಗಣಪತಿಂ ಭಜೆ” ಮಂಗಳವಾದ್ಯದಿಂದ ಪೂಜೆ ಪ್ರಾರಂಭವಾಯಿತು. ಕಾವೇರಿ ಪ್ರಾರ್ಥನೆ, ಗಣಪತಿ ಪ್ರಾರ್ಥನೆ, ಗುರು ಪ್ರಾರ್ಥನೆ, ಸಂಕಲ್ಪ ಮಾಡಲಾಯಿತು. ಕಾವೇರಿ ಸ್ತೊತ್ರದ ಮೂಲಕ ತೀರ್ಥ ಪೂಜೆ ಮಾಡಿ ಬಾಗಿನ ಅರ್ಪಣೆ ಮಾಡಲಾಯಿತು.
ಬ್ರಹ್ಮ, ವಿಷ್ಣು, ಮಹೇಶ್ವರರ ಪ್ರಾರ್ಥನೆ, ಚಾಮರ ಸೇವೆ. ಮೂರು ದಿಕ್ಕಿಗೂ ಶಂಖನಾದ, ದೂಪದ ಆರತಿ ಹಾಗೂ ಮಂತ್ರ ಪುಷ್ಪ ಪಠಣ ಮಾಡಲಾಯಿತು. ಕೊನೆಯಲ್ಲಿ ಕುಂಭಾರತಿ, ನಾಗಾರತಿ, ಕಾವೇರಿ ಆರತಿಯೊಂದಿಗೆ ಪೂಜಾ ಕೈಂಕರ್ಯ ಸಂಪನ್ನಗೊಂಡಿತು.
ಲಾಡು ವಿತರಣೆ:
ಕಾವೇರಿ ಆರತಿ ಕಾರ್ಯಕ್ರಮದ ವೀಕ್ಷಣೆಗೆ ಆಗಮಿಸಿದ್ದ ಪ್ರವಾಸಿಗರಿಗೆ ಉಚಿತವಾಗಿ ಲಾಡು ವಿತರಣೆ ಮಾಡಲಾಯಿತು. “ಕಾವೇರಿ ಆರತಿ” ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ ಕಾವೇರಿ ತಾಯಿ ಪ್ರಸಾದವಾಗಿ ಲಾಡನ್ನು ಉಚಿತವಾಗಿ ಹಂಚಲು ಜಲಸಂಪನ್ಮೂಲ ಸಚಿವರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಲಾಡು ಮಾಡಿಸಿದ್ದರು. ಪ್ರತಿನಿತ್ಯ ಪ್ರವಾಸಿಗರಿಗೆ ಲಾಡು ವಿತರಣೆ ಮಾಡಲಾಗುತ್ತದೆ.
Related Articles
Thank you for your comment. It is awaiting moderation.
Comments (0)