ರಾಷ್ಟ್ರೀಯ ಕ್ರೀಡಾ ನೀತಿ 2025ಕ್ಕೆ ಕೇಂದ್ರ ಸಂಪುಟದ ಅನುಮೋದನೆ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ರಾಷ್ಟ್ರೀಯ ಕ್ರೀಡಾ ನೀತಿ (ಎನ್ಎಸ್‌ಪಿ) 2025ಕ್ಕೆ ಅನುಮೋದನೆ ನೀಡಲಾಗಿದೆ. ಇದು ದೇಶದ ಕ್ರೀಡಾ ಕ್ಷೇತ್ರವನ್ನು ಮರುರೂಪಿಸುವ ಮತ್ತು ಕ್ರೀಡೆಗಳ ಮೂಲಕ ನಾಗರಿಕರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿರುವ ಒಂದು ಮಹತ್ವದ ಉಪಕ್ರಮವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಹೊಸ ನೀತಿಯು ಅಸ್ತಿತ್ವದಲ್ಲಿರುವ ರಾಷ್ಟ್ರೀಯ ಕ್ರೀಡಾ ನೀತಿ- 2001 ಅನ್ನು ರದ್ದುಗೊಳಿಸಲಿದ್ದು, ಭಾರತವನ್ನು ಜಾಗತಿಕ ಕ್ರೀಡಾ ಶಕ್ತಿ ಕೇಂದ್ರವಾಗಿ ಹಾಗೂ 2036ರ ಒಲಿಂಪಿಕ್ ಕ್ರೀಡಾಕೂಟ ಸೇರಿ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಶ್ರೇಷ್ಠತೆಗಾಗಿ ಪ್ರಬಲ ಸ್ಪರ್ಧಿಯಾಗಿ ಸ್ಥಾಪಿಸಲು ದೂರದೃಷ್ಟಿಯ ಮತ್ತು ಕಾರ್ಯತಂತ್ರದ ಮಾರ್ಗಸೂಚಿಯನ್ನು ರೂಪಿಸುತ್ತದೆ ಎಂದು ಹೇಳಿಕೊಂಡಿದೆ.

1. ಜಾಗತಿಕ ವೇದಿಕೆಯಲ್ಲಿ ಶ್ರೇಷ್ಠತೆ:

ಪ್ರತಿಭೆಯನ್ನು ಮೊದಲೇ ಗುರುತಿಸುವುದು ಮತ್ತು ಪೋಷಿಸುವ ಕಾರ್ಯವಿಧಾನಗಳು ಸೇರಿ, ತಳಮಟ್ಟದಿಂದ ಉನ್ನತ ಮಟ್ಟದವರೆಗೆ ಕ್ರೀಡಾ ಕಾರ್ಯಕ್ರಮಗಳನ್ನು ಬಲಪಡಿಸುವುದು. ಸ್ಪರ್ಧಾತ್ಮಕ ಲೀಗ್‌ಗಳು ಮತ್ತು ಸ್ಪರ್ಧೆಗಳ ಸ್ಥಾಪನೆಯನ್ನು ಉತ್ತೇಜಿಸುವುದು ಮತ್ತು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಪಡಿಸುವುದು. ತರಬೇತಿ ಮತ್ತು ಸಮಗ್ರ ಕ್ರೀಡಾಪಟು ಬೆಂಬಲಕ್ಕಾಗಿ ವಿಶ್ವ ದರ್ಜೆಯ ಸೌಲಭ್ಯಗಳನ್ನು ನಿರ್ಮಿಸುವುದು.

ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳ ಸಾಮರ್ಥ್ಯ ಮತ್ತು ಆಡಳಿತವನ್ನು ಸುಧಾರಿಸುವುದು. ಅಥ್ಲೆಟಿಕ್ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಕ್ರೀಡಾ ವಿಜ್ಞಾನ, ಔಷಧ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದನ್ನು ಪ್ರೋತ್ಸಾಹಿಸುವುದು. ತರಬೇತುದಾರರು, ತಾಂತ್ರಿಕ ಅಧಿಕಾರಿಗಳು ಮತ್ತು ಬೆಂಬಲ ಸಿಬ್ಬಂದಿ ಸೇರಿ ಕ್ರೀಡಾ ಸಿಬ್ಬಂದಿಗೆ ತರಬೇತಿ ನೀಡುವುದು ಮತ್ತು ಅಭಿವೃದ್ಧಿಪಡಿಸುವುದಾಗಿದೆ.

2. ಆರ್ಥಿಕ ಅಭಿವೃದ್ಧಿಗಾಗಿ ಕ್ರೀಡೆ:

ಕ್ರೀಡಾ ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಮತ್ತು ಭಾರತಕ್ಕೆ ಪ್ರಮುಖ ಅಂತಾರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಕರ್ಷಿಸುವುದು. ಕ್ರೀಡಾ ಸಾಮಗಗ್ರಿಗಳ ತಯಾರಿಕಾ ಪರಿಸರ ವ್ಯವಸ್ಥೆ ಬಲಪಡಿಸುವುದು ಮತ್ತು ಈ ವಲಯದಲ್ಲಿ ನವೋದ್ಯಮಗಳು ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವುದು. ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ), ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿ‌ಎಸ್‌ಆರ್) ಮತ್ತು ನವೀನ ಹಣಕಾಸು ಉಪಕ್ರಮಗಳ ಮೂಲಕ ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವುದಾಗಿದೆ.

3. ಸಾಮಾಜಿಕ ಅಭಿವೃದ್ಧಿಗಾಗಿ ಕ್ರೀಡೆ:

ಕೇಂದ್ರೀಕೃತ ಕಾರ್ಯಕ್ರಮಗಳ ಮೂಲಕ ಮಹಿಳೆಯರು, ಆರ್ಥಿಕವಾಗಿ ದುರ್ಬಲ ವರ್ಗಗಳು, ಬುಡಕಟ್ಟು ಸಮುದಾಯಗಳು ಮತ್ತು ವಿಕಲಚೇತನ ವ್ಯಕ್ತಿಗಳಲ್ಲಿ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು. ದೇಶೀಯ ಮತ್ತು ಸಾಂಪ್ರದಾಯಿಕ ಕ್ರೀಡೆಗಳನ್ನು ಪುನರುಜ್ಜೀವನಗೊಳಿಸುವುದು ಮತ್ತು ಉತ್ತೇಜಿಸುವುದು. ಶಿಕ್ಷಣದಲ್ಲಿ ಸಂಯೋಜಿಸುವ ಮೂಲಕ, ಸ್ವಯಂಸೇವೆಯನ್ನು ಪ್ರೋತ್ಸಾಹಿಸುವ ಮೂಲಕ ಮತ್ತು ದ್ವಿ-ವೃತ್ತಿ ಮಾರ್ಗಗಳನ್ನು ಸುಗಮಗೊಳಿಸುವ ಮೂಲಕ ಕ್ರೀಡೆಗಳನ್ನು ಕಾರ್ಯಸಾಧ್ಯವಾದ ವೃತ್ತಿ ಆಯ್ಕೆಯಾಗಿ ಸ್ಥಾಪಿಸುವುದು. ಕ್ರೀಡೆಗಳ ಮೂಲಕ ಭಾರತೀಯ ವಲಸೆಗಾರರನ್ನು ತೊಡಗಿಸಿಕೊಳ್ಳುವುದಾಗಿದೆ.

4. ಜನಾಂದೋಲನವಾಗಿ ಕ್ರೀಡೆ:

ರಾಷ್ಟ್ರವ್ಯಾಪಿ ಅಭಿಯಾನಗಳು ಮತ್ತು ಸಮುದಾಯ ಆಧಾರಿತ ಕಾರ್ಯಕ್ರಮಗಳ ಮೂಲಕ ಸಾಮೂಹಿಕ ಭಾಗವಹಿಸುವಿಕೆ ಮತ್ತು ಫಿಟ್ನೆಸ್ ಸಂಸ್ಕೃತಿಯನ್ನು ಹೆಚ್ಚಿಸುವುದು.ಶಾಲೆಗಳು, ಕಾಲೇಜುಗಳು ಮತ್ತು ಕೆಲಸದ ಸ್ಥಳಗಳಿಗೆ ಫಿಟ್ನೆಸ್ ಸೂಚ್ಯಂಕಗಳನ್ನು ಪರಿಚಯಿಸುವುದು. ಕ್ರೀಡಾ ಸೌಲಭ್ಯಗಳಿಗೆ ಸಾರ್ವತ್ರಿಕ ಪ್ರವೇಶವನ್ನು ಹೆಚ್ಚಿಸುವುದಾಗಿದೆ.

5. ಶಿಕ್ಷಣದೊಂದಿಗೆ ಏಕೀಕರಣ (ಎನ್‌ಇ‌ಪಿ 2020):

ಶಾಲಾ ಪಠ್ಯಕ್ರಮದಲ್ಲಿ ಕ್ರೀಡೆಗಳನ್ನು ಸಂಯೋಜಿಸುವುದು. ಕ್ರೀಡಾ ಶಿಕ್ಷಣ ಮತ್ತು ಜಾಗೃತಿಯನ್ನು ಉತ್ತೇಜಿಸಲು ಶಿಕ್ಷಕರು ಮತ್ತು ದೈಹಿಕ ಶಿಕ್ಷಣ ಶಿಕ್ಷಕರಿಗೆ ವಿಶೇಷ ತರಬೇತಿಯನ್ನು ನೀಡುವುದಾಗಿದೆ.

ತನ್ನ ರಚನಾತ್ಮಕ ದೃಷ್ಟಿಕೋನ ಮತ್ತು ದೂರದೃಷ್ಟಿಯ ಕಾರ್ಯತಂತ್ರದೊಂದಿಗೆ, ರಾಷ್ಟ್ರೀಯ ಕ್ರೀಡಾ ನೀತಿ 2025 ಭಾರತವನ್ನು ಜಾಗತಿಕವಾಗಿ ಪ್ರಮುಖ ಕ್ರೀಡಾ ರಾಷ್ಟ್ರವಾಗಲು ಪರಿವರ್ತನಾ ಹಾದಿಯಲ್ಲಿ ಇರಿಸುವ ಜತೆಗೆ ಆರೋಗ್ಯವಂತ, ಹೆಚ್ಚು ತೊಡಗಿಸಿಕೊಂಡ ಮತ್ತು ಸಬಲೀಕೃತ ನಾಗರಿಕರನ್ನು ಸೃಷ್ಟಿಸುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

Related Articles

Comments (0)

Leave a Comment