ವಾಂಖೆಡೆಯಲ್ಲಿ ಮುಂಬೈ ‘ಇಂಡಿಯನ್ಸ್’ ಆರ್ಭಟ: ಕೆಕೆಆರ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ

ಮುಂಬೈ: ಹದಿನಾಲ್ಕು ವರ್ಷಗಳ ಸುದೀರ್ಘ ಕಾಯುವಿಕೆಗೆ ತೆರೆಬಿದ್ದಿದೆ! ಐಪಿಎಲ್ ಇತಿಹಾಸದಲ್ಲಿ ಸದಾ ಮೊದಲ ಪಂದ್ಯದಲ್ಲಿ ಎಡವುತ್ತಿದ್ದ ಮುಂಬೈ ಇಂಡಿಯನ್ಸ್ (MI), ಈ ಬಾರಿ ಕೆಕೆಆರ್ ವಿರುದ್ಧ ಸಿಡಿದೆದ್ದು 6 ವಿಕೆಟ್‌ಗಳ ಅಧಿಕಾರಯುತ ಗೆಲುವು ಸಾಧಿಸಿದೆ. ರವಿವಾರ ನಡೆದ ಹೈ-ವೋಲ್ಟೇಜ್ ಪಂದ್ಯದಲ್ಲಿ 221 ರನ್‌ಗಳ ಬೃಹತ್ ಗುರಿಯನ್ನು ಮುಂಬೈ ಬ್ಯಾಟರ್‌ಗಳು ಧೂಳೀಪಟ ಮಾಡಿದರು.

ರಹಾನೆ-ರಘುವಂಶಿ ಅಬ್ಬರ ವ್ಯರ್ಥ

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡಕ್ಕೆ ಆರಂಭಿಕ ಆಟಗಾರ ಅಜಿಂಕ್ಯ ರಹಾನೆ (67 ರನ್, 40 ಎಸೆತ) ಮತ್ತು ಯುವ ಪ್ರತಿಭೆ ಅಂಗ್ಕ್ರಿಶ್ ರಘುವಂಶಿ (51 ರನ್, 29 ಎಸೆತ) ಸ್ಫೋಟಕ ಅಡಿಪಾಯ ಹಾಕಿಕೊಟ್ಟರು. ಇವರಿಬ್ಬರ ಮಿಂಚಿನ ಅರ್ಧಶತಕಗಳ ನೆರವಿನಿಂದ ಕೆಕೆಆರ್ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 220 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಮುಂಬೈ ಪರ ಶಾರ್ದೂಲ್ ಠಾಕೂರ್ 3 ವಿಕೆಟ್ ಪಡೆದು ಗಮನ ಸೆಳೆದರು.

ರೋಹಿತ್-ರಿಕೆಲ್ಟನ್ ಅಶ್ವಮೇಧ ಯಾಗ

ಬೃಹತ್ ಗುರಿ ಬೆನ್ನಟ್ಟಿದ ಮುಂಬೈಗೆ ‘ಹಿಟ್‌ಮ್ಯಾನ್’ ರೋಹಿತ್ ಶರ್ಮಾ (78 ರನ್) ಮತ್ತು ರಿಯಾನ್ ರಿಕೆಲ್ಟನ್ (81 ರನ್) ಸಿಡಿಲಬ್ಬರದ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ ಕೇವಲ 75 ಎಸೆತಗಳಲ್ಲಿ 148 ರನ್ ಚಚ್ಚುವ ಮೂಲಕ ಪಂದ್ಯವನ್ನು ಸಂಪೂರ್ಣವಾಗಿ ಮುಂಬೈ ಕಡೆಗೆ ತಿರುಗಿಸಿತು. ಕೆಕೆಆರ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಈ ಜೋಡಿ ವಾಂಖೆಡೆ ಪ್ರೇಕ್ಷಕರನ್ನು ರಂಜಿಸಿತು.

ಹಾರ್ದಿಕ್‌ ಫಿನಿಶಿಂಗ್ ಟಚ್

ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ನಮನ್ ಧೀರ್ ಬೇಗನೆ ನಿರ್ಗಮಿಸಿದರೂ, ನಾಯಕ ಹಾರ್ದಿಕ್ ಪಾಂಡ್ಯ (18*) ಅಂತಿಮವಾಗಿ 19.1 ಓವರ್‌ಗಳಲ್ಲಿ ತಂಡವನ್ನು ಗುರಿ ಮುಟ್ಟಿಸಿದರು. ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದು, ಅಭಿಮಾನಿಗಳಲ್ಲಿ ಹೊಸ ಆಸೆ ಚಿಗುರಿಸಿದೆ. 3 ವಿಕೆಟ್ ಪಡೆದ ಶಾರ್ದೂಲ್ ಠಾಕೂರ್ ‘ಪಂದ್ಯ ಪುರುಷ’ ಪ್ರಶಸ್ತಿಗೆ ಭಾಜನರಾದರು.

ಸಂಕ್ಷಿಪ್ತ ಸ್ಕೋರ್:

ಕೆಕೆಆರ್: 220/4 (20 ಓವರ್) – ರಹಾನೆ 67, ರಘುವಂಶಿ 51; ಶಾರ್ದೂಲ್ ಠಾಕೂರ್ 39/3.

ಎಂಐ: 221/4 (19.1 ಓವರ್) – ರಿಕೆಲ್ಟನ್ 81, ರೋಹಿತ್ ಶರ್ಮಾ 78; ಸುನಿಲ್ ನರೈನ್ 32/1.

ಫಲಿತಾಂಶ: ಮುಂಬೈ ಇಂಡಿಯನ್ಸ್‌ಗೆ 6 ವಿಕೆಟ್ ಜಯ.

 

Related Articles

Comments (0)

Leave a Comment