ಆರ್‌ಸಿಬಿ ‘ಬಾಸ್’ ಬದಲಾದ್ರೂ ಬದಲಾಗದ ಕ್ರೇಜ್: ಚಿನ್ನಸ್ವಾಮಿಯಲ್ಲಿ ಅನನ್ಯ ಬಿರ್ಲಾ ಮಿಂಚು!

ಬೆಂಗಳೂರು: ಅದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣ. ಕೆಂಪು ಸಮುದ್ರದಂತೆ ಅಲೆಯಾಡುತ್ತಿದ್ದ ಅಭಿಮಾನಿಗಳ ಸಾಗರ. ಆರ್‌ಸಿಬಿ ಹಳೇ ತಂಡವೇ ಆದರೂ ಈ ಬಾರಿ ಏನೋ ಹೊಸ ಕಳೆ. ಅದಕ್ಕೆ ಕಾರಣ ಮೈದಾನದ ವಿಐಪಿ ಗ್ಯಾಲರಿಯಲ್ಲಿ ಆರ್‌ಸಿಬಿ ಧ್ವಜ ಹಿಡಿದು ಸಂಭ್ರಮಿಸುತ್ತಿದ್ದ ಆ ಯುವತಿ!

ಹೌದು, ಆದಿತ್ಯ ಬಿರ್ಲಾ ಗ್ರೂಪ್‌ನ ವಾರಸುದಾರೆ ಅನನ್ಯ ಬಿರ್ಲಾ ಈಗ ಆರ್‌ಸಿಬಿ ತಂಡದ ಹೊಸ ಶಕ್ತಿ. ತಂಡದ ಮಾಲೀಕತ್ವ ಬದಲಾದ ನಂತರ ನಡೆದ ಮೊದಲ ಪಂದ್ಯದಲ್ಲೇ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಬೆಂಗಳೂರು ಹುಡುಗರು ತೋರಿದ ಅಬ್ಬರದ ಆಟಕ್ಕೆ ಅನನ್ಯ ಫಿದಾ ಆಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ‘ಅನನ್ಯ’ ಹವಾ:

ಪಂದ್ಯ ಮುಗಿದ ಬೆನ್ನಲ್ಲೇ ಇನ್‌ಸ್ಟಾಗ್ರಾಮ್‌ನಲ್ಲಿ ಆರ್‌ಸಿಬಿಯನ್ನು ಅಭಿನಂದಿಸಿದ ಅವರು, “ಮೊದಲ ಗೆಲುವನ್ನು ಅಚ್ಚೊತ್ತಿದ್ದಾರೆ… ಆರ್‌ಸಿಬಿ ನೀವು ಅಕ್ಷರಶಃ ಧೂಳೆಬ್ಬಿಸಿದ್ದೀರಿ (Smashed it)!” ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಕೇವಲ ಒಂದು ಗಂಟೆಯಲ್ಲಿ ಲಕ್ಷಾಂತರ ಲೈಕ್ಸ್ ಪಡೆದಿದೆ. ವಿಶೇಷವೆಂದರೆ, ಆರ್‌ಸಿಬಿ ಒಕ್ಕೂಟದ ಭಾಗವಾದ ಕೇವಲ 48 ಗಂಟೆಗಳಲ್ಲಿ ಅನನ್ಯ ಬಿರ್ಲಾ ಅವರ ಫಾಲೋವರ್ಸ್ ಸಂಖ್ಯೆ 4 ಲಕ್ಷದಿಂದ 20 ಲಕ್ಷ ದಾಟಿರುವುದು ‘ಆರ್‌ಸಿಬಿ ಬ್ರ್ಯಾಂಡ್’ ಪವರ್ ಎಂಥದ್ದು ಎಂಬುದಕ್ಕೆ ಸಾಕ್ಷಿ.

ಮೈದಾನದಲ್ಲಿ ಸಾಮಾನ್ಯ ಅಭಿಮಾನಿಯಂತೆ…

ಕೇವಲ ಮಾಲೀಕಿಯಾಗಿ ಗತ್ತಿನಿಂದ ಕುಳಿತುಕೊಳ್ಳದೆ, ಪ್ರತಿಯೊಂದು ಬೌಂಡರಿ ಮತ್ತು ವಿಕೆಟ್‌ಗೆ ಎದ್ದು ನಿಂತು ಶಿಳ್ಳೆ ಹೊಡೆಯುತ್ತಾ, ಧ್ವಜ ಬೀಸುತ್ತಿದ್ದ ಅನನ್ಯ ಅವರನ್ನು ನೋಡಿ ಬೆಂಗಳೂರು ಫ್ಯಾನ್ಸ್ ಕೂಡ ಫುಲ್ ಖುಷ್ ಆಗಿದ್ದಾರೆ. ವಿರಾಟ್ ಕೊಹ್ಲಿ ಅವರ ಕ್ಲಾಸಿಕ್ ಕವರ್ ಡ್ರೈವ್‌ಗಳಿಗೆ ಅವರು ನೀಡುತ್ತಿದ್ದ ಪ್ರತಿಕ್ರಿಯೆಗಳು ಈಗ ಇಂಟರ್ನೆಟ್‌ನಲ್ಲಿ ವೈರಲ್ ಆಗಿವೆ.

ಹೊಸ ಯುಗದ ಆರಂಭ:

₹16,705 ಕೋಟಿಗಳ ಬೃಹತ್ ಮೊತ್ತಕ್ಕೆ ಆರ್‌ಸಿಬಿ ಖರೀದಿಸಿದ ಬಿರ್ಲಾ ಕುಟುಂಬಕ್ಕೆ ಮೊದಲ ಪಂದ್ಯವೇ ಶುಭಾರಂಭ ತಂದಿದೆ. 26 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್‌ಗಳ ಗೆಲುವು ಸಾಧಿಸಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ವಿಜಯದ ನಗೆ ಬೀರಿದ ಕೊಹ್ಲಿ ಪಡೆಗೆ ಈಗ ಅನನ್ಯ ಬಿರ್ಲಾ ಅವರ ರೂಪದಲ್ಲಿ ಹೊಸ ‘ಲಕ್ಕಿ ಚಾರ್ಮ್’ ಸಿಕ್ಕಂತಾಗಿದೆ.

 

Related Articles

Comments (0)

Leave a Comment