ಹೆತ್ತ ಮಡಿಲು, ಹೊತ್ತ ಹೆಗಲು ಎಂದೂ ಮರೆಯಬಾರದು; ಶ್ರೀ ರಂಭಾಪುರಿ ಜಗದ್ಗುರುಗಳು

ಹರಿಹರ: ಮನುಷ್ಯ ಜೀವನ ಬಹು ಜನ್ಮದ ಪುಣ್ಯದ ಫಲ. ಅರಿವುಳ್ಳ ಜನ್ಮದಲ್ಲಿ ಬಂದ ಮನುಷ್ಯ ಆದರ್ಶಗಳನ್ನು ಇಟ್ಟುಕೊಂಡು ಬಾಳಬೇಕು. ಹೆತ್ತ ತಾಯಿ ಬೆಳೆಸಿದ ತಂದೆ ದೇವರಿಗೆ ಸಮಾನ. ಹೆತ್ತ ಮಡಿಲು, ಹೊತ್ತ ಹೆಗಲನ್ನು ಎಂದಿಗೂ ಮರೆಯಬಾರದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಸೋಮವಾರ ನಗರದ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರ ಹಳೇಪೇಟೆ ಶ್ರೀ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಜಗತ್ತು ದೇವರು ಸೃಷ್ಟಿಸಿದ ಆಟದ ಮೈದಾನ. ನಾವಿಲ್ಲಿ ಆಟಗಾರರಷ್ಟೇ, ನಿಯಮದಿಂದ ಆಟ ಆಡಿದರೆ ಗೆಲುವು ನಿಶ್ಚಿತ. ನಿಯಮ ಮೀರಿ ಆಟ ಆಡಿದರೆ ಸೋಲು ಖಚಿತ. ಆಶೆ ಕಳೆದುಕೊಂಡು ಬದುಕಬಹುದು. ಆದರೆ, ಆಸಕ್ತಿ ಕಳೆದುಕೊಂಡು ಬಾಳಲಾಗದು ಎಂದರು.

ಗೊಂಬೆ ಆಡಿಸುವ ಭಗವಂತ ಒಬ್ಬ ಮೇಲೆ ಇದ್ದಾನೆ. ನಮ್ಮ ಸುತ್ತ ನೂರೆಂಟು ಜನ ಕಡ್ಡಿ ಆಡಿಸುವವರು ಇರುತ್ತಾರೆ. ಗೌರವ ಎನ್ನುವುದು ಹಣ, ಆಸ್ತಿ, ಅಂತಸ್ತು ನೋಡಿ ಕೊಡುವುದಲ್ಲ. ನಮ್ಮ ಹತ್ತಿರ ಏನಿಲ್ಲದಿದ್ದರೂ ನಮ್ಮ ಮಾತಿಗೆ ಗುಣಕ್ಕೆ ಪ್ರೀತಿಗೆ ಕೊಡುವುದೇ ನಿಜವಾದ ಗೌರವ. ಆಚರಣೆ ಅನುಸಂಧಾನ ಇಲ್ಲದ ಬರಿ ಮಾತಿಗೆ ಯಾವುದೇ ಬೆಲೆ ನೆಲೆ ಸಿಗಲಾರದೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಎಚ್ಚರಿಸಿದ್ದಾರೆ. ಹರಿಹರ ನಗರದಲ್ಲಿ ನಡೆಯುವ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆಯಿಂದ ಭಕ್ತರು ಸಂಸ್ಕಾರವಂತರನ್ನಾಗಿ ಪರಿವರ್ತಿಸುವುದೇ ಪೂಜೆಯ ಮೂಲ ಉದ್ದೇಶವಾಗಿದೆ ಎಂದುು ಹೇಳಿದರು.

ಸಮಾರಂಭ ಉದ್ಘಾಟಿಸಿದ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಗೌರವಾಧ್ಯಕ್ಷರಾದ ಯಡಿಯೂರು ಕ್ಷೇತ್ರದ ಬಾಳೆಹೊನ್ನೂರು ಖಾಸಾ ಶಾಖಾ ಮಠದ ರೇಣುಕ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಮನೆಯಲ್ಲಿ ಹಿರಿಯರ ಕೈಯಲ್ಲಿ ನಿರ್ಧಾರ ಇರುವವರೆಗೆ ಮನೆ ಒಡೆಯುವುದಿಲ್ಲ. ಮನೆಯಲ್ಲಿ ಎಲ್ಲರೂ ಹಿರಿಯರಾಗಲು ಪ್ರಾರಂಭಿಸಿದಾಗ ಮನೆ ಒಡೆಯಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಧರ್ಮ ಎಲ್ಲರನ್ನು ಒಗ್ಗೂಡಿಸುವ ಕೆಲಸ ಮಾಡಿದರೆ ಜಾತಿ ಒಡೆಯುವ ಕೆಲಸ ಮಾಡುತ್ತದೆ. ಜಾತಿಗಿಂತ ನೀತಿ ನಿಯತ್ತು ಮುಖ್ಯ ಶ್ರೀ ರಂಭಾಪುರಿ ಜಗದ್ಗುರುಗಳವರ ಆಷಾಢ ಮಾಸದ ಜ್ಞಾನ ಯಜ್ಞ ನಮ್ಮೆಲ್ಲರನ್ನು ಸನ್ಮಾರ್ಗದೆಡೆಗೆ ಕರೆದೊಯ್ಯುವುದೆಂದರು.

ಮಲ್ಲಿಕಾರ್ಜುನ ದೇವಾಂಗ ಮಾತನಾಡಿ, ಸುಖ ಯಾವಾಗಲೂ ಸಾಸಿವೆಯಷ್ಟೇ ಸಿಗುವುದು. ಕಷ್ಟ ಯಾವಾಗಲೂ ಸಾಗರದಷ್ಟು ಇರುತ್ತದೆ. ಜೀವನ ಸಹ ಹಾಗೆ, ಕತ್ತಲು ದೊಡ್ಡದು, ಅದನ್ನು ಓಡಿಸುವ ದೀಪ ಚಿಕ್ಕದು ಎಂಬುದನ್ನ ಮರೆಯಬಾರದೆಂದರು.

ನೇತೃತ್ವ ವಹಿಸಿದ ಮಳಲಿ ಸಂಸ್ಥಾನ ಮಠದ ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಸಮಾಧಾನಕ್ಕೆ ನಮಗಿಂತ ಕೆಳಗಿನವರನ್ನು ನೋಡಬೇಕು. ಸಾಧನೆಗೆ ನಮಗಿಂತ ದೊಡ್ಡವರನ್ನು ನೋಡಬೇಕೆಂದು ಸ್ವಾಮಿ ವಿವೇಕಾನಂದರು ಹೇಳಿದ ಮಾತು ಸತ್ಯವಾದುದು. ಆದರ್ಶ ಮೌಲ್ಯಗಳನ್ನು ಪರಿಪಾಲಿಸಿಕೊಂಡು ಜೀವನ ಸಾರ್ಥಕಪಡಿಸಿಕೊಳ್ಳಬೇಕೆಂದರು.

ಶೃಂಗ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ:

ಜುಲೈ 21, 22ರಂದು ದಾವಣಗೆರೆಯಲ್ಲಿ ನಡೆಯಲಿರುವ ವೀರಶೈವ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳು ಬಿಡುಗಡೆ ಮಾಡಿದರು.

ಮುಖ್ಯ ಅತಿಥಿಗಳಾಗಿ ಜಗದ್ಗುರು ರೇಣುಕಾಚಾರ್ಯ ಮಂದಿರ ಕಾರ್ಯಾಧ್ಯಕ್ಷ ಜುಂಜಪ್ಪ ಹೆಗ್ಗಪ್ಪನವರ, ಸಿರಿಗೆರೆಯ ನಾಗನಗೌಡರು, ಹರಿಹರದ ಹಾಲೇಶಗೌಡ ಬಿ. ಪಾಲ್ಗೊಂಡು ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಪಡೆದರು. ಹರಿಹರ ವೀರಶೈವ ಸಮಾಜದ ಅಧ್ಯಕ್ಷ ಡಿ.ಜಿ.ಶಿವಾನಂದಪ್ಪ, ಸಿ.ವಿ.ಪಾಟೀಲ, ಹೆಚ್.ವಿ.ಭಿಕ್ಷಾವರ್ತಿಮಠ, ಟಿ.ಜಿ.ಮುರುಗೇಶಪ್ಪ, ಎಸ್.ಎಚ್.ಪಾಟೀಲ ಹಾಗೂ ಇತರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಹಲವಾರು ಗಣ್ಯರಿಗೆ ಮತ್ತು ದಾನಿಗಳಿಗೆ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು. ಕುಮಾರಿ ವರ್ಷಿಣಿ ಭರತ ನಾಟ್ಯ ಮಾಡಿದರು. ಕಾಂತರಾಜ ಮತ್ತು ವೀರೇಶ ಇವರು ಭಕ್ತಿಗೀತೆ ಹಾಡಿದರು. ಉಪನ್ಯಾಸಕ ವಜೇಶ್ ಸ್ವಾಗತಿಸಿದರು. ಡಾ. ಎ.ಎಮ್. ರಾಜಶೇಖರ ಮತ್ತು ಶ್ರೀಮತಿ ರತ್ನ ಸಾಲಿಮಠ ನಿರೂಪಿಸಿದರು.

Related Articles

Comments (0)

Leave a Comment