ಹಬ್ಬಗಳ ಹಿಂದಿರುವ ತಾತ್ವಿಕ ಚಿಂತನೆ ಅರಿತು ಬಾಳುವುದು ಎಲ್ಲರ ಗುರಿಯಾಗಬೇಕು;ಶ್ರೀ ರಂಭಾಪುರಿ ಜಗದ್ಗುರುಗಳು
- by Suddi Team
- September 2, 2025
- 112 Views

ಹಾಸನ: ಎಲ್ಲ ಹಬ್ಬಗಳ ಗುರಿ ಸಮಾಜದಲಿ ಶಾಂತಿ ಸಾಮರಸ್ಯ ಮತ್ತು ಸಂಘಟನೆ ಉಂಟು ಮಾಡುವುದೇ ಆಗಿದ್ದು, ಹಬ್ಬಗಳ ಹಿಂದಿರುವ ತಾತ್ವಿಕ ಚಿಂತನಗಳನ್ನು ಅರಿತು ಬಾಳುವುದು ಎಲ್ಲರ ಗುರಿಯಾಗಬೇಕಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ನಗರದ ಶ್ರೀ ಪ್ರಸನ್ನ ಗಣಪತಿ ಭಕ್ತ ಮಂಡಳಿಯಿಂದ ಸಂಘಟಿಸಿದ 84ನೇ ವರ್ಷದ ಮಹೋತ್ಸವ ಅಂಗವಾಗಿ ಜರುಗಿದ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು,ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ಬಹಳಷ್ಟು ಮಹತ್ವವಿದೆ. ಜನಮನದ ಮೇಲೆ ಹಬ್ಬಗಳು ಅಗಾಧ ಪರಿಣಾಮವನ್ನು ಉಂಟು ಮಾಡುತ್ತವೆ. ಬತ್ತಿ ಬಳಲಿರುವ ಮನಸ್ಸಿಗೆ ಹಬ್ಬಗಳು ಹೊಸ ಉತ್ಸಾಹ ಮತ್ತು ಸ್ಫೂರ್ತಿಯನ್ನು ತರುತ್ತವೆ ಎಂದರು.
ಭಾರತ ಆಧ್ಯಾತ್ಮದ ತವರೂರು. ಇಲ್ಲಿರುವಷ್ಟು ದೇವಾಲಯಗಳು ಬೇರೆಲ್ಲಿಯೂ ಇಲ್ಲ. ಎಲ್ಲ ಹಬ್ಬಗಳ ಗುರಿ ಸಮಾಜದಲಿ ಶಾಂತಿ ಸಾಮರಸ್ಯ ಮತ್ತು ಸಂಘಟನೆ ಉಂಟು ಮಾಡುವುದೇ ಆಗಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಾಲಗಂಗಾಧರ ತಿಲಕ ಅವರು ಸಾರ್ವಜನಿಕ ಗಣೇಶೋತ್ಸವ ನೆರವೇರಿಸುವುದರ ಮೂಲಕ ಎಲ್ಲರನ್ನು ಒಗ್ಗೂಡಿಸುವ ಮಹತ್ಕಾರ್ಯ ಮಾಡಿದರು. ಹಬ್ಬಗಳ ಹಿಂದಿರುವ ತಾತ್ವಿಕ ಚಿಂತನಗಳನ್ನು ಅರಿತು ಬಾಳುವುದು ಎಲ್ಲರ ಗುರಿಯಾಗಬೇಕಾಗಿದೆ. ಗಣಗಳ ಒಡೆಯನಾದ ಗಣಪತಿ ಎಲ್ಲ ಸಮುದಾಯದವರಿಗೂ ಆರಾಧ್ಯ ದೈವ, ಮಂಗಲ ಕಾರ್ಯದ ಪೂರ್ವದಲ್ಲಿ ಗಣಪತಿಗೆ ಮೊದಲ ಪೂಜೆ ಯಾವಾಗಲೂ ಸಲ್ಲುತ್ತದೆ. ಬರುವ ಎಡರು ತೊಡರುಗಳನ್ನು ದೂರ ಮಾಡಿ ಅವರವರ ಇಷ್ಟಾರ್ಥಗಳನ್ನು ಪೂರ್ಣಗೊಳಿಸುವ ದೈವ ಎಂಬ ನಂಬಿಕೆ ಇದೆ. ಬೆಳೆದು ಬಂದ ವಿಧಿ ವಿಧಾನ ಸಂಪ್ರದಾಯ ಪರಂಪರೆಗಳು ಮಾನವರ ಶ್ರೇಯಸ್ಸಿಗಾಗಿ ಶ್ರೇಯಸ್ಸಿಗಾಗಿ ಇವೆ ಹೊರತು ಅವನತಿಗಲ್ಲ ಎಂಬ ಸಂದೇಶವನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ ಎಂದರು.
ಅರಸೀಕೆರೆ ಶ್ರೀ ಪ್ರಸನ್ನ ಗಣಪತಿ ಭಕ್ತ ಮಂಡಳಿ 84 ವರುಷಗಳಿಂದ ಸಂಭ್ರಮದಿಂದ ವಾರ್ಷಿಕೋತ್ಸವ ಆಚರಿಸಿಕೊಂಡು ಬರುತ್ತಿರುವುದು ತಮಗೆ ಅತೀವ ಸಂತೋಷ ತಂದಿದೆ ಎಂದರು.
ನೇತೃತ್ವ ವಹಿಸಿದ ದೊಡ್ಡಗುಣಿ ಹಿರೇಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಭೌತಿಕ ಎಲ್ಲ ಸಂಪನ್ಮೂಲ ಹೊಂದಿದ್ದರೂ ಮನುಷ್ಯನಿಗೆ ಮಾನಸಿಕ ಶಾಂತಿ ನೆಮ್ಮದಿಯಿಲ್ಲ. ಸುಖ ಶಾಂತಿ ಬದುಕಿಗೆ ಧರ್ಮವೊಂದೇ ಆಶಾಕಿರಣ. ಅವರವರ ಧರ್ಮ ಅವರವರು ಆಚರಿಸಿ ಭಾರತೀಯ ಉತ್ಕೃಷ್ಟ ಸಂಸ್ಕೃತಿ ಬೆಳೆಸಿಕೊಂಡು ಬರಬೇಕೆಂದರು.
ಶಾಸಕ ಕೆ.ಎಂ. ಶಿವಲಿಂಗೇಗೌಡರು ಸಮಾರಂಭ ಉದ್ಘಾಟಿಸಿ ಮಾತನಾಡಿ ಮಾನವ ಜೀವನದ ಉನ್ನತಿಗೆ ಮತ್ತು ಉಜ್ವಲ ಭವಿಷ್ಯಕ್ಕೆ ಧರ್ಮಾಚರಣೆ ಮುಖ್ಯ. ವಿಘ್ನ ವಿನಾಶಕನಾದ ಗಣಪತಿ ಎಲ್ಲರೂ ಪೂಜಿಸುವ ದೈವ. ಗಣಪತಿಯ ಬುದ್ದಿ ಶಕ್ತಿ ದೂರದೃಷ್ಟಿ ಮತ್ತು ಲೋಕಾನುಗ್ರಹ ಚಿಂತನೆ ನಮ್ಮೆಲ್ಲರ ಬಾಳಿನಲ್ಲಿ ಬೆಳಕು ಮೂಡಿಸಲೆಂದರು.
ಮಾಜಿ ಶಾಸಕ ಕೆ.ಪಿ.ಪ್ರಭುಕುಮಾರ ಮತ್ತು ಜಿ.ಎಸ್.ಪರಮೇಶ್ವರಪ್ಪ ನುಡಿ ನಮನ ಸಲ್ಲಿಸಿದರು. ಶ್ರೀ ಪ್ರಸನ್ನ ಗಣಪತಿ ಭಕ್ತ ಮಂಡಳಿ ಅಧ್ಯಕ್ಷ ರವೀಂದ್ರನಾಥ, ಕಾರ್ಯದರ್ಶಿ ವೆಂಕಟೇಶ ಬಾಬು, ಖಜಾಂಚಿ ನಾಗಭೂಷಣ ಮೊದಲ್ಗೊಂಡು ಮಂಡಳಿಯ ಎಲ್ಲ ಸದಸ್ಯರು ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಆಶೀರ್ವಾದ ಪಡೆದರು. ಅರಸೀಕೆರೆಯ ಬಸವರಾಜು (ಮಂಡಿ) ಗೀತಾ ಮತ್ತು ಮಕ್ಕಳು ದಾಸೋಹ ಸೇವೆ ಸಲ್ಲಿಸಿದರು. ಸಮಾರಂಭಕ್ಕೂ ಮುನ್ನ ಶ್ರೀ ರಂಭಾಪುರಿ ಜಗದ್ಗುರುಗಳು ಪ್ರಸನ್ನ ಗಣಪತಿಗೆ ಪೂಜೆ ಸಲ್ಲಿಸಿ ಬಂದ ಭಕ್ತರಿಗೆ ಶುಭ ಹಾರೈಸಿದರು.
Related Articles
Thank you for your comment. It is awaiting moderation.
Comments (0)