ಧರ್ಮಾಚರಣೆ ಮರೆತರೆ ಅಪಾಯ ತಪ್ಪಿದ್ದಲ್ಲ ;ಶ್ರೀ ರಂಭಾಪುರಿ ಜಗದ್ಗುರುಗಳು
- by Suddi Team
- July 20, 2025
- 219 Views

ದಾವಣಗೆರೆ: ಸತ್ಯ ಮತ್ತು ಶಾಂತಿ ಧರ್ಮದ ಎರಡು ಕಣ್ಣು. ಶಾಂತಿ ನೆಮ್ಮದಿಯ ಬದುಕಿಗೆ ಸಂತೃಪ್ತಿ ಸಮೃದ್ಧಿಗಾಗಿ ಧರ್ಮಾಚರಣೆ ಬೇಕು. ಧರ್ಮದಿಂದ ಮನುಷ್ಯ ವಿಮುಖನಾದರೆ ಅಪಾಯ ತಪ್ಪಿದ್ದಲ್ಲವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಭಾನುವಾರ ನಗರದ ಶ್ರೀ ಜಗದ್ಗುರು ರಂಭಾಪುರಿ ವೀರಗಂಗಾಧರ ಮಂಗಲ ಭವನದಲ್ಲಿ ಜರುಗಿದ ಜನಜಾಗೃತಿ ಧರ್ಮ ಸಮಾವೇಶದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಶಿಕ್ಷಣದಿಂದ ಮನುಷ್ಯನ ಬುದ್ದಿ ಶಕ್ತಿ ಬೆಳೆಯುತ್ತದೆ. ಧರ್ಮದಿಂದ ಮನುಷ್ಯನ ಭಾವನೆಗಳು ಬೆಳೆಯುತ್ತವೆ. ಬದುಕಿ ಬಾಳುವ ಮನುಷ್ಯನಿಗೆ ಬುದ್ದಿ ಶಕ್ತಿ ಮತ್ತು ಭಾವನೆಗಳೆರಡರ ಅವಶ್ಯಕತೆಯಿದೆ. ವಿಜ್ಞಾನ ತಂತ್ರಜ್ಞಾನ ಬೆಳೆದಂತೆ ಮನುಷ್ಯನ ಭಾವನೆಗಳು ಬೆಳೆಯದಿರುವುದೇ ಇಂದಿನ ಅನೇಕ ಸಮಸ್ಯೆಗಳಿಗೆ ಕಾರಣವೆಂದರೆ ತಪ್ಪಾಗದು. ಇಂದು ಎಲ್ಲ ರಂಗಗಳಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳು ಶಿಥಿಲಗೊಳ್ಳುತ್ತಿರುವುದರಿಂದ ಸಂಬಂಧಗಳು ಉಳಿಯುತ್ತಿಲ್ಲ. ಹಣ ಮತ್ತು ಅಧಿಕಾರದ ಬಗ್ಗೆ ಸದಾ ಚಿಂತಿಸುವ ಮನುಷ್ಯ ತನ್ನ ದೇಶ ಸಂಸ್ಕೃತಿ ಮತ್ತು ಧರ್ಮದ ಬಗ್ಗೆ ಚಿಂತಿಸಲಾರ. ಧರ್ಮ ಧರ್ಮಗಳಲ್ಲಿ ಮತ್ತು ವ್ಯಕ್ತಿ ವ್ಯಕ್ತಿಗಳಲ್ಲಿ ನಡೆಯುತ್ತಿರುವ ಸಂಘರ್ಷಗಳು ಒಳ್ಳೆಯದಲ್ಲ. ಸತ್ಯದ ತಳಹದಿಯ ಸೈದ್ಧಾಂತಿಕ ನಿಲುವು ಗಟ್ಟಿಗೊಳ್ಳಬೇಕೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ಬೋಧಿಸಿದ್ದಾರೆ. ಮನುಷ್ಯ ಜೀವನದಲ್ಲಿ ಸಾಧನೆಗಳು ಮಾತನಾಡಬೇಕೇ ವಿನಾ ಮಾತನಾಡುವುದೇ ಸಾಧನೆಯಲ್ಲ, ಪರಸ್ಪರ ಅರಿತು ಬಾಳುವುದರಲ್ಲಿ ಮಾನವನ ಶ್ರೇಯಸ್ಸಿದೆ ಎಂದರು.
ಖ್ಯಾತ ಲೆಕ್ಕ ಪರಿಶೋಧಕರಾದ ಡಾ.ಉಮೇಶ ಶೆಟ್ಟಿ ಅವರಿಗೆ “ಸಾಧನೆಯ ಶಿಖರ” ಎಂಬ ಪ್ರಶಸ್ತಿಯಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು.
ಹರಪನಹಳ್ಳಿ ತೆಗ್ಗಿನಮಠ ಸಂಸ್ಥಾನದ ವರಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪ್ರಜ್ಞಾವಂತರು ಹೆಜ್ಜೆ ಹಾಕಬೇಕಾಗಿದೆ. ವೀರಶೈವ ಧರ್ಮ ಮಾನವ ಜೀವನದ ವಿಕಾಸಕ್ಕೆ ಕೊಟ್ಟ ಸಂಸ್ಕಾರ ತೋರಿದ ದಾರಿ ಯಾರೂ ಮರೆಯಲಾಗದು. ಶ್ರೀ ಜಗದ್ಗುರು ರೇಣುಕಾಚಾರ್ಯರ ಮೌಲ್ಯಾಧಾರಿತ ಚಿಂತನೆಗಳು ಸರ್ವ ಕಾಲಕ್ಕೂ ಅನ್ವಯಿಸುತ್ತವೆ ಎಂದರು. ಕಣ್ವಕುಪ್ಪಿ ಗವಿಮಠದ ಡಾ. ಮುಮ್ಮಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿ ಮಾತನಾಡಿದರು. ಮಳಲಿಮಠ, ಎಡೆಯೂರು, ನೆಗಳೂರು, ನಾಗಲಾಪುರ, ಬೆಳಕಿ, ತಾವರೆಕೆರೆ, ಸಿದ್ದರಬೆಟ್ಟ, ಬೀರೂರು, ಸಂಗೊಳ್ಳಿ, ಚನ್ನಗಿರಿ ಶ್ರೀಗಳವರು ಪಾಲ್ಗೊಂಡಿದ್ದರು.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ತಿನ ಮಾಜಿ ಸಚೇತಕ ಶಿವಯೋಗಿಸ್ವಾಮಿ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಪೋಲೀಸ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ದಾವಣಗೆರೆಯ ಎಂ.ಟಿ.ಸುಭಾಷ್‌ಚಂದ್ರ, ಎನ್.ಜಿ.ಪುಟ್ಟಸ್ವಾಮಿ ಪಾಲ್ಗೊಂಡು ನುಡಿ ಸೇವೆ ಸಲ್ಲಿಸಿದರು. ಈ ಪವಿತ್ರ ಸಂದರ್ಭದಲ್ಲಿ ಜಯಪ್ರಕಾಶ ಮಾಗಿ, ಲೀಲಾವತಿ ಎನ್.ಬದರಿನಾಥ್, ಕುಂದನ್ ಲಾಲ್, ಎ.ಡಿ.ರಾಘವೇಂದ್ರ, ದಿನೇಶ್ ಪಿ. ಜೈನ್, ಸುರೇಶ್ ಉತ್ತಂಗಿ, ಮಹೇಶ್ ಶೆಟ್ಟಿ, ಸುಮ, ರೂಪ, ಡಿ.ಎಂ.ಮಂಜುನಾಥಯ್ಯ, ಜ್ಯೋತಿ ಪವಾಡಶೆಟ್ರು, ಡಾ.ಮಮತ, ಮೋಕ್ ಸರ್, ವಜೇಶ್, ಡಾ.ವೀರಣ್ಣ ಬಿ.ಶೆಟ್ಟರ್ ಇವರೆಲ್ಲರಿಗೂ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು. ಸಮಾರಂಭದಲ್ಲಿ ದೇವರಮನೆ ಶಿವರಾಜ್, ದೇವರಮನೆ ಶಿವಕುಮಾರ್ ಉಪಸ್ಥಿತರಿದ್ದರು. ಸೋಗಿ ಶಾಂತಕುಮಾರ ಸ್ವಾಗತಿಸಿದರು. ಡಾ.ವೀರಣ್ಣ ಶೆಟ್ಟರ್ ನಿರೂಪಿಸಿದರು. ಹೊಳೆಹೊನ್ನೂರು ರಾಜಣ್ಣ ಬಸಾಪುರ ಅವರು ಶ್ರೀ ರಂಭಾಪುರಿ ಜಗದ್ಗುರುಗಳಿಗೆ ಗೌರವ ಮಾಲಾರ್ಪಣೆ ಮಾಡಿ ಆಶೀರ್ವಾದ ಪಡೆದರು. ಬೆಳಿಗ್ಗೆ ಶಾಂತಿ ಸನ್ಮಂಗಲ ಪ್ರಾಪ್ತಿಗಾಗಿ ಶ್ರೀ ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಭಕ್ತ ಸಮುದಾಯಕ್ಕೆ ಶುಭ ಹಾರೈಸಿದರು.
Related Articles
Thank you for your comment. It is awaiting moderation.
Comments (0)