ದೈವಿ ಗುಣಗಳನ್ನು ಬಲಗೊಳಿಸುವುದೇ ವಿಜಯ ದಶಮಿಯ ಗುರಿ;ಶ್ರೀ ರಂಭಾಪುರಿ ಜಗದ್ಗುರುಗಳು
- by Suddi Team
- October 3, 2025
- 71 Views

ಬಸವಕಲ್ಯಾಣ:ಮನುಷ್ಯನಲ್ಲಿರುವ ಅಸುರಿ ಗುಣಗಳು ನಾಶವಾಗಿ ದೈವೀ ಗುಣಗಳನ್ನು ಬಲಗೊಳಿಸುವುದೇ ದಸರಾ ಹಬ್ಬದ ಮೂಲ ಗುರಿಯಾಗಿದೆಯೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಗುರುವಾರ ವಿಜಯ ದಶಮಿಯ ಅಂಗವಾಗಿ ಶಮಿ ಸೀಮೊಲ್ಲಂಘನ ನೆರವೇರಿಸಿ ಮಾನದ ಧರ್ಮ ವೇದಿಕೆಯಲ್ಲಿ ಶಾಂತಿ ಸಂದೇಶ ನೀಡಿದ ಜಗದ್ಗುರುಗಳು,ಜೀವನದಲ್ಲಿ ಬದಲಾವಣೆ ಮತ್ತು ಬೆಳವಣಿಗೆ ಎರಡೂ ಮುಖ್ಯ. ಮೌಲ್ಯಾಧಾರಿತ ಬದುಕಿಗೆ ಬೆಲೆಯಿದೆ. ಅತ್ಮ ವಿಶ್ವಾಸ ನಿಶ್ಚಿತ ಗುರಿ ಮತ್ತು ಸಂಯಮ ಯಶಸ್ವಿಗೆ ಭದ್ರ ಬುನಾದಿ. ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸಿ ಬದುಕಿನ ಹಿರಿಮೆ ಮತ್ತು ರಹಸ್ಯ ಬೋಧಿಸುವುದೇ ನಿಜವಾದ ಧರ್ಮ, ಸತ್ಯವೇ ಒಂದು ಧರ್ಮ. ಇದು ಧರ್ಮವನ್ನು ರಕ್ಷಿಸುವ ರಕ್ಷಾ ಕವಚ. ಧರ್ಮದ ರಕ್ಷಾ ಕವಚ ಕಳಚಿದರೆ ನಾಡಿನಲ್ಲಿ ಧರ್ಮ ಸಂಸ್ಕೃತಿ ಸಭ್ಯತೆ ಮತ್ತು ಪರಂಪರೆಯ ಆದರ್ಶಗಳು ಉಳಿಯಲಾರವು. ಧರ್ಮದ ಉತ್ಕೃಷ್ಟ ಮೌಲ್ಯಗಳನ್ನು ಪ್ರತಿಪಾದಿಸಿದ ಶ್ರೀ ಜಗದ್ಗುರು ರೇಣುಕಾಚಾರ್ಯರ ಮತ್ತು ಬಸವಾದಿ ಶರಣರ ವಿಚಾರ ಧಾರೆಗಳ ಪರಿಪಾಲನೆಯಿಂದ ಜಗದಲ್ಲಿ ಶಾಂತಿ ಸಾಮರಸ್ಯ ಮೂಡಿ ಬರಲು ಸಾಧ್ಯವಾಗುತ್ತದೆ. ಬಸವಕಲ್ಯಾಣದಲ್ಲಿ ನಡೆದ ದಸರಾ ನಾಡಹಬ್ಬ ಅತ್ಯಂತ ಸಂಭ್ರಮ ಸಡಗರದಿಂದ ನಡೆದಿರುವುದು ತಮ್ಮಲ್ಲಿರುವ ಧರ್ಮಶ್ರದ್ಧೆ ಮತ್ತು ಭಕ್ತಿಯ ಶಕ್ತಿಯೇ ಕಾರಣವಾಗಿದೆ ಎಂದು ಹರುಷ ವ್ಯಕ್ತಪಡಿಸಿದ ಜಗದ್ಗುರುಗಳು ಸ್ವಧರ್ಮದಲ್ಲಿ ನಿಷ್ಠೆ ಮತ್ತು ಪರಧರ್ಮದಲ್ಲಿ ಸಹಿಷ್ಣುತಾ ಮನೋಭಾವ ಹೊಂದಿ ಬಾಳಿದರೆ ಸಕಲರಿಗೂ ಸುಖ ಶಾಂತಿ ಪ್ರಾಪ್ತವಾಗುತ್ತದೆ ಎಂದರು.
ಇಂದು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಂಚೂಣಿಯಲ್ಲಿ ನಿಂತು ಶ್ರಮಿಸಿದ ಮಹಾತ್ಮ ಗಾಂಧೀಜಿ ಹಾಗೂ ಹಾಗೂ ದಕ್ಷ ಪ್ರಾಮಾಣಿಕ ಜನಪರ ಕಾಳಜಿ ಹೊಂದಿದ್ದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ. ಅವರ ಸರಳತೆ ಸಾತ್ವಿಕ ಮನೋಭಾವ ಬೆಳೆಯುವ ಯುವ ಜನಾಂಗದಲ್ಲಿ ಮತ್ತು ರಾಜಕೀಯ ಧುರೀಣರಲ್ಲಿ ಬೆಳೆದು ಬಂದರೆ ನಾಡು ನುಡಿ ಶ್ರೀಮಂತಗೊಳ್ಳುವುದರಲ್ಲಿ ಯಾವುದೇ ಸಂದೇಹ ಇಲ್ಲ ಎಂದರು.
ಸಮಾರಂಭಕ್ಕೂ ಮುನ್ನ ಶ್ರೀ ಬಸವೇಶ್ವರ ದೇವಸ್ಥಾನದಿಂದ ವೈಭವದ ಅಡ್ಡಪಲ್ಲಕ್ಕಿ ಪ್ರಾರಂಭಗೊಂಡು ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಸುಮಾರು 3 ಗಂಟೆಗಳ ಕಾಲ ಉತ್ಸವ ಜರುಗಿತು. ನಂತರ ತೇರು ಮೈದಾನದಲ್ಲಿ ನಿರ್ಮಿಸಿದ ಬನ್ನಿ ಮಂಟಪದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ಶಮೀ ಪೂಜೆ ಸಲ್ಲಿಸಿ ದಿನ ನಿತ್ಯದಂತೆ ಅಕ್ಕಮಹಾದೇವಿ ಮಹಿಳಾ ವಿದ್ಯಾಲಯದ ಆವರಣದಲ್ಲಿರುವ ಮಾನವ ಧರ್ಮ ಮಂಟಪಕ್ಕೆ ಆಗಮಿಸಿ ಮಹಾತ್ಮಾ ಗಾಂಧೀಜಿ ಹಾಗೂ ಲಾಲಬಹದ್ದೂರ ಇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ನಂತರ ಸಿಂಹಾಸನಾರೋಹಣ ಮಾಡಿ ಶಾಂತಿ ಸಂದೇಶವನ್ನು ಅನುಗ್ರಹಿಸಿದರು. ಶಾಸಕ ಶರಣು ಸಲಗರ ಸರ್ವರನ್ನು ಸ್ವಾಗತಿಸಿ ದಸರಾ ಯಶಸ್ಸಿಗೆ ಶ್ರಮಿಸಿದ ಎಲ್ಲ ಸದ್ಭಕ್ತರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.
ಹಾರಕೂಡ ಹಿರೇಮಠದ ಡಾ. ಚನ್ನವೀರ ಶಿವಾಚಾರ್ಯರು, ಮೇಹಕರ ಹಿರೇಮಠದ ರಾಜೇಶ್ವರ ಶಿವಾಚಾರ್ಯರು, ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ತ್ರಿಪುರಾಂತಕ, ದಸರಾ ಸಮಿತಿಯ ಎಲ್ಲ ಸದಸ್ಯರು ಶ್ರೀ ರಂಭಾಪುರಿ ಜಗದ್ಗುರುಗಳಿಗೆ ಗೌರವ ಸಮರ್ಪಿಸಿ ಬಿನ್ನವತ್ತಳೆಯನ್ನು ಅರ್ಪಿಸಿದರು.
ಈ ಪವಿತ್ರ ಸಮಾರಂಭದಲ್ಲಿ ಮಳಲಿಮಠ, ಸಿದ್ದರಬೆಟ್ಟ, ಶಕಾಪುರ, ಸಿಂಧನೂರ, ಸಂಗೊಳ್ಳಿ, ಆಚಲೇರಿ, ಕಪಿಲಧಾರಾ, ಪಾಳಾ ಮೊದಲಾದ ಶ್ರೀಗಳವರು ಉಪಸ್ಥಿತರಿದ್ದರು. ಆಗಮಿಸಿದ ಎಲ್ಲ ಶಿಷ್ಟ ಸದ್ಭಕ್ತರು ಜಗದ್ಗುರುಗಳಿಗೆ ಶಮೀ ಮತ್ತು ಕಾಣಿಕೆ ಸಲ್ಲಿಸಿ ಆಶೀರ್ವಾದ ಪಡೆದ ದೃಶ್ಯ ಅಪೂರ್ವವಾಗಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.
ಶ್ರೀ ರಂಭಾಪುರಿ ಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್. ಬಾಳನಗೌಡ್ರ, ಸವಣೂರಿನ ಡಾ.ಗುರುಪಾದಯ್ಯ ಸಾಲಿಮಠ ವೇದಿಕೆಯಲ್ಲಿದ್ದರು. ಗುರುಲಿಂಗಯ್ಯ ಹಿತ್ತಲಶಿರೂರ ಇವರಿಂದ ಸಂಗೀತ ಜರುಗಿತು. ಶಾಂತಾ ಆನಂದ ಹಾಗೂ ರಮೇಶ ರಾಜೋಳೆ ನಿರೂಪಿಸಿದರು.
Related Articles
Thank you for your comment. It is awaiting moderation.
Comments (0)