ದಾವಣಗೆರೆಯಲ್ಲಿ ಜು.21, 22ರಂದು ವೀರಶೈವ ಪೀಠಾಚಾರ್ಯರ ಶೃಂಗ ಸಮ್ಮೇಳನ; ರಂಭಾಪುರಿ ಶ್ರೀ
- by Suddi Team
- June 26, 2025
- 537 Views

ಬೆಂಗಳೂರು: ದಾವಣಗೆರೆ ಮಹಾನಗರದ ಶ್ರೀಮದ್ ಅಭಿನವ ರೇಣುಕ ಮಂದಿರದ ಸಭಾಂಗಣದಲ್ಲಿ ಜುಲೈ 21 ಹಾಗೂ 22ರಂದು ವೀರಶೈವ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನ ನಡೆಯಲಿದೆ ಎಂದು ಬಾಳೆ ಹೊನ್ನೂರು ರಂಭಾಪುರಿ ಪೀಠದ 1008 ಜಗದ್ಗುರು ಪ್ರಸನ್ನರೇಣುಕ ಡಾ.ವೀರಸೋಮೇಶ್ವರ ಭಗವದ್ಪಾದರು ತಿಳಿಸಿದರು.
ಚಿಕ್ಕಪೇಟೆಯಲ್ಲಿರುವ ಮಹಂತಿನಮಠದಲ್ಲಿ ಆಷಾಢ ಮಾಸ ಧರ್ಮ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದ ಶ್ರೀಗಳು, ಪುರಾತನ ಇತಿಹಾಸ ಮತ್ತು ಪರಂಪರೆ ಹೊಂದಿದ ವೀರಶೈವ-ಲಿಂಗಾಯತ ಧರ್ಮ ಜಾತಿ-ಜಾತಿಗಳಾಗಿ ವಿಂಗಡಣೆಗೊಂಡು ಛಿದ್ರಗೊಂಡಿದೆ. ಸಮಾಜದಲ್ಲಿ ಸಾಮರಸ್ಯ, ಸಂಘಟನೆ ಮತ್ತು ಪ್ರಚಲಿತ ಸಮಾಜದಲ್ಲಿ ತಲೆದೂರಿರುವ ಸಮಸ್ಯೆಗಳನ್ನು ಕುರಿತು ಸಮಾಲೋಚಿಸುವುದರ ಮೂಲಕ ವೀರಶೈವ ಧರ್ಮವನ್ನು ಪುನಶ್ಚೇತನಗೊಳಿಸುವ ಸದುದ್ದೇಶ ಮತ್ತು ಧ್ಯೇಯ ನಮ್ಮ ಧರ್ಮ ಪೀಠಗಳದ್ದಾಗಿದೆ. ಈ ಅಪೂರ್ವ ಸಮಾರಂಭದಲ್ಲಿ ಪಂಚಪೀಠಗಳ ಜಗದ್ಗುರುಗಳು ಮತ್ತು ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ, ಗೋವಾ, ಮಧ್ಯಪ್ರದೇಶ, ಉತ್ತರಾಂಚಲ ರಾಜ್ಯಗಳಿಂದ ವೀರಶೈವ ಮಠಾಧೀಶರು ಆಗಮಿಸಿ ಪಾಲ್ಗೊಳ್ಳಲಿದ್ದಾರೆ ಎಂದರು.
ಶ್ರೀಮದ್ವೀರಶೈವ ಸದ್ಬೋಧನಾ ಸಂಸ್ಥೆ ದಾವಣಗೆರೆ ಜಿಲ್ಲಾ ಘಟಕ ಹಾಗೂ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಜುಲೈ 21ರಂದು ಜರುಗುವ ಶೃಂಗ ಸಮ್ಮೇಳನವನ್ನು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪನವರು ಉದ್ಘಾಟನೆ ಮಾಡಲಿದ್ದು, ರಾಜ್ಯಾಧ್ಯಕ್ಷ ಶಂಕರ ಬಿದರಿ ಸದಾಶಯ ನುಡಿಗಳನ್ನು ನುಡಿಯಲಿದ್ದಾರೆ. ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಗೌರವ ಅಧ್ಯಕ್ಷರಾದ ರೇಣುಕ ಶಿವಾಚಾರ್ಯ ಸ್ವಾಮಿಗಳು ಎಡೆಯೂರು ಮತ್ತು ಅಧ್ಯಕ್ಷರಾದ ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಲಿದ್ದಾರೆ. ಈ ಸಮಾರಂಭದಲ್ಲಿ ಹಲವಾರು ಮಂತ್ರಿಗಳು, ಶಾಸಕರು, ಸಮಾಜದ ಧುರೀಣರು ಪಕ್ಷಾತೀತವಾಗಿ ಪಾಲ್ಗೊಳ್ಳಲಿದ್ದು, ನಾಡಿನೆಲ್ಲೆಡೆ ಇರುವ ಶಿವಾಚಾರ್ಯರು ಹಾಗೂ ವೀರಶೈವ-ಲಿಂಗಾಯತ ಧರ್ಮಾಭಿಮಾನಿಗಳು ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.
Related Articles
Thank you for your comment. It is awaiting moderation.
Comments (0)