ಚಿಣ್ಣರ ಸಾಂಸ್ಕೃತಿಕ ಹಬ್ಬ ಉದ್ಘಾಟಿಸಿದ ಅಮ್ಮಿನಬಾವಿಯ ಶ್ರೀಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ
- by Suddi Team
- February 28, 2026
- 60 Views
ಧಾರವಾಡ : ಎಲ್ಲಾ ಕ್ಷೇತ್ರಗಳಲ್ಲಿ ಮೇರು ಸಾಧನೆಯನ್ನು ಸಾಧಿಸಿ ವಿಶ್ವದ ಸಮಸ್ತ ರಾಷ್ಟ್ರಗಳಿಗೂ ಮೀರಿದ ಅಗ್ರಸ್ಥಾನ ಪಡೆಯುವಂತೆ ಶ್ರೇಷ್ಠ ಭಾರತ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಸಂಕಲ್ಪ ಮಾಡಬೇಕೆಂದು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.
ಅವರು ಬಾಳೆಹೊನ್ನೂರಿನ ಶ್ರೀಜಗದ್ಗುರು ರೇಣುಕಾಚಾರ್ಯ ಶಿಕ್ಷಣ ಪ್ರತಿಷ್ಠಾನ ಹಾಗೂ ಅಮ್ಮಿನಬಾವಿಯ ಶ್ರೀಗುರುಶಾಂತಲಿಂಗ ಶಿವಾಚಾರ್ಯ ಶಿಕ್ಷಣ ಪ್ರತಿಷ್ಠಾನಗಳ ಜಂಟಿ ಆಶ್ರಯದಲ್ಲಿ ತಾಲೂಕಿನ ಅಮ್ಮಿನಬಾವಿ ಗ್ರಾಮದ ಸುಶಿಲಾತಾಯಿ ಅಜ್ಜಯ್ಯ ಹಿರೇಮಠ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಚಿಣ್ಣರ ಸಾಂಸ್ಕೃತಿಕ ಹಬ್ಬ ಉದ್ಘಾಟಿಸಿ ಮಾತನಾಡುತ್ತಿದ್ದರು. ಭ್ರಷ್ಟಾಚಾರವು ನಿರ್ಮೂಲನೆಯಾದಾಗ ಮಾತ್ರ ಶ್ರೇಷ್ಠ ಭಾರತ ನಿರ್ಮಾಣದ ಕೆಲಸ ಅತ್ಯಂತ ಸುಲಭವಾಗುತ್ತಿದ್ದು, ಭವಿಷ್ಯದಲ್ಲಿ ರಾಷ್ಟ್ರವನ್ನು ಮುನ್ನಡೆಸಲಿರುವ ವಿದ್ಯಾರ್ಥಿಗಳೆಲ್ಲರೂ ಉತ್ಕೃಷ್ಟ ಮಾನವ ಸಂಪನ್ಮೂಲವಾಗಬೇಕಾದ ಅಗತ್ಯತೆ ಇದೆ ಎಂದರು.
ಅಂಕಗಳ ಬೆನ್ನುಹತ್ತಿ ಕೇವಲ ಪರೀಕ್ಷಾ ದೃಷ್ಟಿಯಿಂದ ಮಾತ್ರ ಪಠ್ಯದ ವಿಷಯಗಳನ್ನು ಅಧ್ಯಯನ ಮಾಡದೇ ಆಳವಾದ ಜ್ಞಾನಾರ್ಜನೆಯ ದೃಷ್ಟಿಕೋನದಿಂದ ಎಲ್ಲಾ ವಿಷಯಗಳ ವ್ಯಾಸಂಗವನ್ನು ಮಾಡಬೇಕು ಎಂದೂ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.
ಮಾಜಿ ಮಂಡಳ ಪಂಚಾಯತಿಯ ಪ್ರಧಾನ ಎಂ.ಸಿ.ಹುಲ್ಲೂರ, ನಿವೃತ್ತ ಅಧ್ಯಾಪಕ ವ್ಹಿ. ಬಿ. ಕೆಂಚನಗೌಡರ ಹಾಗೂ ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ವಿಶ್ರಾಂತ ಸಂಪಾದಕ ಗುರುಮೂರ್ತಿ ಯರಗಂಬಳಿಮಠ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ನಿರ್ದೇಶಕರುಗಳಾದ ಬಿ.ಸಿ. ಕೊಳ್ಳಿ, ಚಂದ್ರು ಶೆಟ್ಟರ, ಸೋಮಲಿಂಗಯ್ಯ ಗುಡ್ಡದಮಠ, ಮುಖ್ಯಾಧ್ಯಾಪಕಿ ಮಂಜುಳಾ ದೊಡಮನಿ, ಸಂಚಾಲಕ ಟಿ.ಎಂ.ದೇಸಾಯಿ ಇದ್ದರು.
ಪುಟ್ಟ ವಿದ್ಯಾರ್ಥಿಗಳು ‘ಶ್ರೀಸಿದ್ಧಾಂತ ಶಿಖಾಮಣಿ’ ಗ್ರಂಥದ ಸಂಸ್ಕೃತ ಶ್ಲೋಕಗಳ ಪಠಣ ಮಾಡಿದರು. ಎಂ.ಎನ್. ಆಲದಕಟ್ಟಿ ಸ್ವಾಗತಿಸಿದರು. ಮಹೇಶ್ವರಿ ಹಳ್ಳಿಗೇರಿಮಠ ನಿರೂಪಿಸಿದರು. ವಿನಾಯಕ ಹಿರೇಮಠ ವಂದಿಸಿದರು. ಎಂ.ಆಂಜನೇಯ, ಅನುಸೂಯಾ ಅನಿಗೋಳ, ಲೀಲಾವತಿ ಅಣ್ಣಿಗೇರಿ, ವಿಜಯಲಕ್ಷ್ಮಿ ಇದ್ಲಿ, ಶೋಭಾ ಗಾಣಿಗೇರ, ಶಕೀಲಾ ನದಾಫ್, ಅನಿತಾ ಬೆಟಗೇರಿ, ಜ್ಯೋತಿ ವಿಠ್ಠೋಜಿ, ಸರಿತಾ ಸುಣಗಾರ, ಆರತಿ ಹರಿಜನ ಅವರು ಮಕ್ಕಳ ಗುಂಪು ನೃತ್ಯ, ಜಾನಪದ ಕುಣಿತ, ಹಳ್ಳಿ ಸೊಬಗಿನ ಕೋಲಾಟ, ಏಕಪಾತ್ರಾಭಿನಯ, ಕಿರು ನಾಟಕ, ಹಾಡುಗಾರಿಕೆ ಸೇರಿದಂತೆ 35 ವಿಧದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು.
Related Articles
Thank you for your comment. It is awaiting moderation.


Comments (0)