ರಂಭಾಪುರಿ ಪೀಠದಲ್ಲಿ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ
- by Suddi Team
- March 1, 2026
- 7 Views
ಬಾಳೆಹೊನ್ನೂರು: ಮಾನವನ ಜೀವನದ ಏಳಿಗೆ ಹಾಗೂ ಸುಖ-ಶಾಂತಿಯ ಲೇಸಿಗೆ ಧರ್ಮಾಚರಣೆಯು ಮೂಲಾಧಾರವಾಗಿದೆ. ವಿಶ್ವಬಂಧುತ್ವದ ಸಂದೇಶ ಸಾರಿದ ವೀರಶೈವ ಧರ್ಮವು ಜಗತ್ತಿಗೆ ಜೀವನ ದರ್ಶನದ ದೊಡ್ಡ ಕೊಡುಗೆ ನೀಡಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಪೀಠದಲ್ಲಿ ಆಯೋಜಿಸಲಾಗಿದ್ದ ‘ಶಿವಾದ್ವೈತ ಸಮಾವೇಶ’ದಲ್ಲಿ ಅವರು ಆಶೀರ್ವಚನ ನೀಡಿದರು.
ಸತ್ಯದ ಹಾದಿ:
ಜಗದ್ಗುರು ರೇಣುಕಾಚಾರ್ಯರು ಸತ್ಯದ ಸಾಕ್ಷಾತ್ಕಾರ ಪಡೆದ ಪರಮಾಚಾರ್ಯರು. ಸತ್ಯವೇ ಅವರ ಉಸಿರಾಗಿತ್ತು. ಜೀವ ಶಿವನಾಗುವ, ನರ ಹರನಾಗುವ ವಿಶಿಷ್ಟ ಆಧ್ಯಾತ್ಮಿಕ ಜ್ಞಾನವನ್ನು ಜಗತ್ತಿಗೆ ಬೋಧಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಜಾತಿ-ಮತಗಳ ಬೇಧವಿಲ್ಲದೆ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ ಅವರು, ಅಗಸ್ತ ಮಹಾಮುನಿಗಳಿಗೆ ಶಿವಾದ್ವೈತ ಸಿದ್ಧಾಂತವನ್ನು ಬೋಧಿಸಿ ಉದ್ಧರಿಸಿದ ಮಹಾನ್ ಚೇತನ ಎಂದು ಬಣ್ಣಿಸಿದರು.
ರವಿ ಹಂಜ್ ಅವರಿಗೆ ಪ್ರಶಸ್ತಿ ಗೌರವ:
ವೀರಶೈವ ಧರ್ಮದ ಪರಂಪರೆ ಹಾಗೂ ಆಧುನಿಕ ವಿಚಾರಧಾರೆಗಳನ್ನು ಜನತೆಗೆ ತಲುಪಿಸುತ್ತಿರುವ ಚಿಂತಕ ರವಿ ಹಂಜ್ ಅವರಿಗೆ ಈ ವರ್ಷದ ‘ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಸಮಾಜಕ್ಕೆ ಜಾಗೃತ ವಿಚಾರಗಳನ್ನು ನೀಡುತ್ತಿರುವ ರವಿ ಹಂಜ್ ಅವರಿಗೆ ಈ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ ಎಂದು ಶ್ರೀಗಳು ನುಡಿದರು.
ಅಷ್ಟಾವರಣ, ಪಂಚಾಚಾರ ಹಾಗೂ ಷಟ್‌ಸ್ಥಲಗಳ ಮೂಲಕ ಜೀವಾತ್ಮನನ್ನು ಪರಮಾತ್ಮನೆಡೆಗೆ ಕೊಂಡೊಯ್ಯುವ ಮಾರ್ಗವನ್ನು ರೇಣುಕಾಚಾರ್ಯರು ಹಾಕಿಕೊಟ್ಟಿದ್ದಾರೆ. ಅಂತಹ ಮಹಾತ್ಮರ ತತ್ವಗಳನ್ನು ಅಳವಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಅವರು ಕರೆ ನೀಡಿದರು.
ಭಾರತ ಸರಕಾರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ, ನವೀಕರಿಸಬಹುದಾದ ಇಂಧನ ಖಾತೆ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ ಸಕಲ ಜೀವ ರಾಶಿಗಳಿಗೆ ಒಳ್ಳೆಯದನ್ನು ಬಯಸುವುದೇ ಮಹಾತ್ಮರ ಜೀವನದ ಗುರಿಯಾಗಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಹಿಂದೂ ಸಂಸ್ಕೃತಿಯನ್ನು ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಮುಕ್ಕೋಟಿ ಗುರು ರೂಪ ಧರಿಸಿ ಶ್ರೀ ಲಂಕೆಯಲ್ಲಿ 3 ಕೋಟಿ ಶಿವಲಿಂಗಗಳನ್ನು ಸ್ಥಾಪಿಸಿದ ಕೀರ್ತಿ ಶ್ರೀ ಜಗದ್ಗುರು ರೇಣುಕರಿಗಿದೆ. ಇಂದಿನ ಜಗದ್ಗುರುಗಳವರು ನಿರಂತರ ಸಂಚರಿಸಿ ಜನರಲ್ಲಿ ಧಾರ್ಮಿಕ ಪ್ರಜ್ಞೆ ಮತ್ತು ರಾಷ್ಟ್ರ ಪ್ರಜ್ಞೆ ಬೆಳೆಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ ಎಂದರು.
ಅ.ಭಾ.ವೀರಶೈವ ಶಿವಾಚಾರ್ಯ ಸಂಸ್ಥೆ ಹೊರತಂದ ವೀರಶೈವ ಪರಂಪರೆ ಕೃತಿಯನ್ನು ಬಿಡುಗಡೆ ಮಾಡಿದ ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಮಾತನಾಡಿ ನನ್ನ ಬಹು ಜನ್ಮದ ಪುಣ್ಯದ ಫಲವೆಂದು ಭಾವಿಸುವೆ. ವೀರಶೈವ ಲಿಂಗಾಯತ ಎರಡೂ ಒಂದೇ ಎಂಬುದು ನಮ್ಮ ಗಟ್ಟಿ ಧ್ವನಿಯಾಗಿರಬೇಕು. ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಚಾರ ಧಾರೆಗಳು ಎಲ್ಲಾ ಕಾಲಕ್ಕೂ ಎಲ್ಲರಿಗೂ ಅನ್ವಯಿಸುತ್ತವೆ ಶ್ರೀ ಜಗದ್ಗುರುಗಳವರ ಸತ್ಯ ಸಂಕಲ್ಪಗಳು ಸಾಕಾರಗೊಳ್ಳುವ ಕಾರ್ಯ ನಡೆಯುತ್ತಿದೆ. ಆದಷ್ಟು ಬೇಗ ಕೈಕೊಂಡ ಕಾರ್ಯ ಪೂರ್ಣಗೊಳ್ಳಲಿ, ಆ ಮಹತ್ಕಾರ್ಯಕ್ಕೆ ನನ್ನ ಸಹಕಾರ ಇದೆ ಎಂದರು. ದಾವಣಗೆರೆ ನಗರದಲ್ಲಿ ಈ ಹಿಂದೆ ಪೀಠಾಚಾರ್ಯರ-ಶಿವಾಚಾರ್ಯರ ಶೃಂಗ ಸಮ್ಮೇಳನ ಅದ್ದೂರಿಯಾಗಿ ನೆರವೇರಿಸಿ ಕೊಟ್ಟ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರಿಗೆ “ರಾಜಧರ್ಮ ಸೇವಾ ಸಂಜೀವಿನಿ” ಪ್ರಶಸ್ತಿಯನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಅನುಗ್ರಹಿಸಿ ಆಶೀರ್ವದಿಸಿದರು.
ಜಗದ್ಗುರು ಪ್ರಶಸ್ತಿ ಪುರಸ್ಕೃತರಾದ ಸಾಹಿತ್ಯ ಸಂಶೋಧಕರಾದ ರವಿ ಹಂಜ್ ಅವರು ಮಾತನಾಡಿ ವೀರಶೈವ ಧರ್ಮ ಸಾಹಿತ್ಯ ಅಪಾರವಾದುದು. ಸತ್ಯ, ಅತ್ಯುನ್ನತ ಸೈದ್ದಾಂತಿಕ ನೆಲೆ ಮೂಲಗಳನ್ನು ಮರೆಯದೇ ಅವುಗಳನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕಾಗಿದೆ. ವೀರಶೈವ ಧರ್ಮವನ್ನು ಛಿದ್ರಗೊಳಿಸುತ್ತಿರುವ ಕೆಲವರ ವರ್ತನೆ ಸರಿಯಾದುದಲ್ಲ. ಶ್ರೀ ಜಗದ್ಗುರು ರೇಣುಕಾಚಾರ್ಯರ ಧಾರ್ಮಿಕ ಮತ್ತು ಸಾಮಾಜಿಕ ಸತ್ಕಾಂತಿ ಎಲ್ಲ ಕ್ರಾಂತಿಗಳಿಗೆ ಸೆಲೆಯಾಗಿದೆ. ಸತ್ಯದ ನಿಲುವು ಗಟ್ಟಿಗೊಳಿಸುವ ಕಾರ್ಯವನ್ನು ನಾನು ಮಾಡುತ್ತಿದ್ದೇನೆ. ನನ್ನ ಪ್ರಯತ್ನವನ್ನು ಕಂಡು ಶ್ರೀ ರಂಭಾಪುರಿ ಜಗದ್ಗುರುಗಳು ಬಹು ದೊಡ್ಡ ಪ್ರಶಸ್ತಿ ಅನುಗ್ರಹಿಸಿವುರುವುದು ನನ್ನ ಪೂರ್ವ ಜನ್ಮದ ಸುಕೃತ ಮತ್ತು ಪೂರ್ವಜರ ಆಶೀರ್ವಾದ ಎಂದು ಭಾವಿಸುವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಶೋಧನೆಯಲ್ಲಿ ತೊಡಗಿಸಿಕೊಂಡು ಸಾಹಿತ್ಯ ಸೇವೆ ಮುಂದುವರಿಸುತ್ತೇನೆ ಎಂದರು.
ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ಮಾಜಿ ಸಚಿವ ಡಿ.ಎನ್. ಜೀವರಾಜ್, ಬೆಂಗಳೂರಿನ ಶಿವಶಂಕರಪ್ಪ ಸಾಹುಕಾರ್, ಹಾಸನದ ಸಿದ್ದೇಶ್ ನಾಗೇಂದ್ರ ಭಾಗವಹಿಸಿದ್ದರು.
ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷರಾದ ಡಾ.ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿ ವಾಯ್ಸ್ ಆಫ್ ವೀರಶೈವ ಲಿಂಗಾಯತ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಕಾರ್ಯದರ್ಶಿ ಶಿವಗಂಗಾ ಕ್ಷೇತ್ರದ ಡಾ.ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮಿಗಳು ಸಹಭಾಗಿತ್ತ ವಹಿಸಿ ಮಾತನಾಡಿದರು.
ತರೀಕೆರೆಯ ಕೂಡೂರು ಬಸಪ್ಪ ಶಿವಮೂರ್ತಿ, ತುಮಕೂರಿನ ಬಿ.ಫಾಲಾಕ್ಷಯ್ಯ, ಬೆಂಗಳೂರಿನ ನಾಗರತ್ನ ಗಣೇಶ್ ಕುಮಾರ, ಸ್ನೇಹ ಶ್ರೀ ಶಿವಕುಮಾರಯ್ಯ ಎನ್., ಕೊಲ್ಲಾಪುರದ ಶಾಂತಮ್ಮ-ಶ್ರೀ ಪರಮೇಶ್ವರಯ್ಯ, ಕನ್ನಳ್ಳಿಯ ಎಸ್.ಶಾಂತರಾಜು, ಸಿದ್ದಲಿಂಗಸ್ವಾಮಿ ಜಿ. ಇವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು. ಹುಬ್ಬಳ್ಳಿಯ ಪ್ರಕಾಶ ಬೆಂಡಿಗೇರಿ ಸ್ವಾಗತಿಸಿದರು. ಶ್ರೀ ಜಗದ್ಗುರು ರುದ್ರಮುನೀಶ್ವರ ವಸತಿ ಪ್ರೌಢಶಾಲೆಯ ಹಾಲುಸ್ವಾಮಿ ಮತ್ತು ತಂಡದವರು ಭರತ ನಾಟ್ಯ ಪ್ರದರ್ಶನ ನೀಡಿದರು. ಶಿವಮೊಗ್ಗದ ಶಾಂತಾ ಆನಂದ ಹಾಗೂ ಸವಣೂರಿನ ಗುರುಪಾದಯ್ಯ ಸಾಲಿಮಠ ನಿರೂಪಿಸಿದರು. ಶಿಲಾನ್ಯಾಸ ಭೂಮಿ ಪೂಜೆ: ಸಮಾರಂಭಕ್ಕೂ ಮುನ್ನ 51 ಅಡಿ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂಗಲ ಶಿಲಾ ಮೂರ್ತಿ ಪ್ರತಿಷ್ಠಾಪನೆಯ ಶಿಲಾನ್ಯಾಸ ಭೂಮಿ ಪೂಜೆಯನ್ನು ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೆರವೇರಿಸಿದ ನಂತರ ಬಾಳೆಹೊನ್ನೂರು-ಶ್ರೀ ರಂಭಾಪುರಿ ಪೀಠದ ಮೂಲಕ ಮೇಲ್ಬಾಲ್ ರಸ್ತೆ ಉದ್ಘಾಟನೆ ಮಾಡಿದರು. ಇದೇ ಸಂದರ್ಭದಲ್ಲಿ ಶ್ರೀ ರಂಭಾಪುರಿ ಪೀಠದ ನೂತನ ಪುಷ್ಕರಣೆಯನ್ನು ಕೇಂದ್ರದ ಮತ್ತು ರಾಜ್ಯದ ಸಚಿವರು, ಸಂಸದರು, ಶಾಸಕರು, ವಿವಿಧ ಮಠಾಧೀಶರು ಉಪಸ್ಥಿತರಿದ್ದರು. ಸಮಾರಂಭದ ನಂತರ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ ಸಡಗರ ಸಂಭ್ರಮದಿಂದ ಜರುಗಿತು.
Related Articles
Thank you for your comment. It is awaiting moderation.


Comments (0)