ಬಸವಕಲ್ಯಾಣದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಪ್ರಶಸ್ತಿಗಳ ಪ್ರಕಟಿಸಿದ ರಂಭಾಪುರಿ ಜಗದ್ಗುರುಗಳು

ಗದಗ:ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಸಪ್ಟೆಂಬರ್ 22ರಿಂದ ಅಕ್ಟೋಬರ್ 2ರ ವರೆಗೆ ಜರುಗುತ್ತಿರುವ ಶ್ರೀ ರಂಭಾಪುರಿ ಜಗದ್ಗುರುಗಳವರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ವಿವಿಧ ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಪ್ರಕಟಿಸಿದರು.

ಮಂಗಳವಾರ ನಗರದಲ್ಲಿ ನಡೆಸಿದ ಇಷ್ಟಲಿಂಗ ಮಹಾಪೂಜಾ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು ಪ್ರಶಸ್ರಿಗೆ ಹೆಸರುಗಳನ್ನು ಪ್ರಕಟಿಸಿದರು.

ಪ್ರಶಸ್ತಿ ವಿವರ:

ಶಿವಾಚಾರ್ಯ ರತ್ನ ಪ್ರಶಸ್ತಿ: ನಿರಂತರ ಧರ್ಮ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಮುಕ್ತಿಮಂದಿರ ಕ್ಷೇತ್ರದಲ್ಲಿ ತ್ರಿಕೋಟಿ ಲಿಂಗ ಸ್ಥಾಪನೆಯ ಮಹತ್ತರ ಕಾರ್ಯ ಮಾಡುತ್ತಿರುವ ಹಾಗೂ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷರಾಗಿ ಉತ್ತಮ ಕಾರ್ಯ ನಿರ್ವಹಿಸಿರುವ ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳಿಗೆ ಈ ವರ್ಷದ ಶಿವಾಚಾರ್ಯ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಸಾಧನ ಸಿರಿ: ಕಲ್ಯಾಣ ಕರ್ನಾಟಕದ ಕ್ರಿಯಾಶೀಲ ಶಿವಾಚಾರ್ಯರಲ್ಲಿ ಒಬ್ಬರಾಗಿ ಧರ್ಮ ಸಾಹಿತ್ಯ ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿರುವ ಬಸವಕಲ್ಯಾಣ ತಾಲೂಕಿನ ತ್ರಿಪೂರಾಂತದ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳವರಿಗೆ ಈ ವರ್ಷದ ಸಾಧನ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ವೀರಶೈವ ಸಿರಿ: ಹಲವಾರು ಹುದ್ದೆಗಳನ್ನು ಅಲಂಕರಿಸಿ ವೀರಶೈವ ಸಮಾಜವನ್ನು ಕಟ್ಟಿ ಬೆಳೆಸುವ ನಿಟ್ಟಿನಲ್ಲಿ ನಿರಂತರ ಶ್ರಮಿಸುತ್ತಿರುವ ತ್ರಿಪೂರಾಂತದ ಶರಣಪ್ಪನವರು ಗುಂಡಪ್ಪನವರು ಬಿರಾದಾರ ಇವರಿಗೆ ಈ ವರ್ಷದ ವೀರಶೈವ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಸಾಹಿತ್ಯ ಸಿರಿ: ಸಾಹಿತ್ಯಾತ್ಮಕ ಕ್ರಿಯಾಶೀಲತೆಯನ್ನು ಬೆಳೆಸಿಕೊಂಡಿರುವ ಹಲವಾರು ವೇದಿಕೆಗಳ ಮೂಲಕ ಸಾಹಿತ್ಯಾಸಕ್ತರಿಗೆಲ್ಲ ಅವಕಾಶ ನಿರ್ಮಾಣ ಮಾಡಿರುವ ಕಲಬುರ್ಗಿಯ ಸಾಹಿತಿ ಅಮರಾವತಿ ಶಿವಯ್ಯ ಹಿರೇಮಠ ಇವರಿಗೆ ಈ ವರ್ಷದ ಸಾಹಿತ್ಯ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು,

ರಂಭಾಪುರಿ ಯುವಸಿರಿ: ಭವಿಷ್ಯತ್ತಿನಲ್ಲಿ ಸಮಾಜ ಮತ್ತು ಸಮೂಹಕ್ಕೆ ತಮ್ಮದೇ ಆದ ಸೇವೆ ಮಾಡಬೇಕೆಂಬ ಅತುಲ ಹಂಬಲ ಹೊಂದಿರುವ ಬಸವಕಲ್ಯಾಣ ತಾಲೂಕಿನ ಲಾಡವಂತಿ ಗ್ರಾಮದ ಯುವಕ ವಿಶ್ವಜೀತ ತಾತೇರಾವ್ ಢವಳಿ ಅವರಿಗೆ ಇವರಿಗೆ ಈ ವರ್ಷದ ರಂಭಾಪುರಿ ಯುವ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಇದೇ ಸಂದರ್ಭದಲ್ಲಿ ಪಡಸಾವಳಿ ಹಿರೆಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮಿಗಳಿಗೆ ‘ವೀರಶೈವ ತತ್ವ ಪ್ರಬೋಧಕ’ ಪ್ರಶಸ್ತಿಯನ್ನು ಅನುಗ್ರಹಿಸಲಾಗುವುದು,

ಸಪ್ಟೆಂಬ‌ರ್ 22ರಂದು ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನವನ್ನು ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಉದ್ಘಾಟಿಸುವರು, ಅಕ್ಟೋಬರ್ 2ರ ವರೆಗಿನ ಕಾರ್ಯಕ್ರಮಗಳಲ್ಲಿ ಕೇಂದ್ರ ಹಾಗೂ ರಾಜ್ಯದ ಸಚಿವರು ಶಾಸಕರು ಗಣ್ಯರು ಕವಿ ಕಲಾವಿದರು ಪಾಲ್ಗೊಳ್ಳುವರು. ಶರನ್ನವರಾತ್ರಿ ದಸರಾ ಮಹೋತ್ಸವ ಸಮಿತಿಯ ಅಧ್ಯಕ್ಷರಾಗಿ ಅರಣ್ಯ ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ, ಸಮಿತಿಯ ಕಾರ್ಯಾಧ್ಯಕ್ಷರಾಗಿ ಶಾಸಕ ಶರಣು ಬಿ.ಸಲಗರ, ಗೌರವಾಧ್ಯಕ್ಷರಾಗಿ ಹಾರಕೂಡ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ಶಿವಾಚಾರ್ಯರು, ಗೌರವ ಉಪಾಧ್ಯಕ್ಷರಾಗಿ ರಾಜಶೇಖರ ಪಾಟೀಲ, ಮಾರ್ಗದರ್ಶಕರಾಗಿ ಮೆಹಕರ-ತಡೋಳಾ ಹಿರೇಮಠದ ರಾಜೇಶ್ವರ ಶಿವಾಚಾರ್ಯರು, ತ್ರಿಪುರಾಂತಕ ಗವಿಮಠದ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಕಾರ್ಯ ನಿರ್ವಹಿಸುತ್ತಿದ್ದು ಸಿದ್ಧತೆಗಳು ಭರದಿಂದ ನಡೆದಿವೆ ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ತಿಳಿಸಿದರು.

Related Articles

Comments (0)

Leave a Comment