ವೀರಶೈವ ಪೀಠಾಚಾರ್ಯರ, ಶಿವಾಚಾರ್ಯರ ಶೃಂಗ ಸಮ್ಮೇಳನದಲ್ಲಿ ಪಾಲ್ಗೊಳ್ಳಿ; ಧರ್ಮಾಭಿಮಾನಿಗಳಿಗೆ ರಂಭಾಪುರಿ ಶ್ರೀ ಕರೆ
- by Suddi Team
 - July 12, 2025
 - 420 Views
 
                                                          ರಂಭಾಪುರಿ ಪೀಠ (ಬಾಳೆಹೊನ್ನೂರು): ಜುಲೈ 21 ಹಾಗೂ 22ರಂದು ದಾವಣಗೆರೆ ನಗರದ ಶ್ರೀಮದಭಿನವ ರೇಣುಕ ಮಂದಿರದಲ್ಲಿ ವೀರಶೈವ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನ ಜರುಗಲಿದ್ದು ಶ್ರೀ ಜಗದ್ಗುರು ಪಂಚಪೀಠಾಧೀಶ್ವರರು ಸಾನ್ನಿಧ್ಯ ವಹಿಸುವರು. ವೀರಶೈವ ಲಿಂಗಾಯತ ಸಂಸ್ಕೃತಿ ಸಂವರ್ಧನೆ ಹಾಗೂ ಜಾತಿ ಗಣತಿಯ ಸಂದರ್ಭದಲ್ಲಿ ಕೈಗೊಳ್ಳಬೇಕಾದ ನಿಲುವು ಕುರಿತಾದ ಚರ್ಚೆ ಈ ಶೃಂಗ ಸಮ್ಮೇಳನದಲ್ಲಿ ನಡೆಯಲಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜುಲೈ 21ರಂದು ಬೆಳಿಗ್ಗೆ 11 ಗಂಟೆಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ರಾಷ್ಟ್ರೀಯ ಅಧ್ಯಕ್ಷರಾದ ಶಾಸಕ ಡಾ. ಶಾಮನೂರು ಶಿವಶಂಕರಪ್ಪನವರು ಶೃಂಗ ಸಮ್ಮೇಳನವನ್ನು ಉದ್ಘಾಟಿಸಲಿದ್ದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಪ್ರಾಸ್ತಾವಿಕ ಮಾತನಾಡುವರು. ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಡಾ. ಬಿ.ಎಸ್. ಯಡಿಯೂರಪ್ಪ, ಅರಣ್ಯ ಮತ್ತು ಪರಿಸರ ಖಾತೆ ಸಚಿವರಾದ ಈಶ್ವರ ಖಂಡ್ರೆ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲಭೂತ ಅಭಿವೃದ್ಧಿ ಖಾತೆ ಸಚಿವರಾದ ಎಂ.ಬಿ. ಪಾಟೀಲ, ಮಾಜಿ ಮುಖ್ಯಮಂತ್ರಿ-ಸಂಸದರಾದ ಜಗದೀಶ ಶೆಟ್ಟರ್, ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಶಿವರಾಜ ಪಾಟೀಲ, ರಾಜ್ಯ ಬಿಜೆಪಿ ಅಧ್ಯಕ್ಷರು-ಶಾಸಕರಾದ ಬಿ.ವೈ. ವಿಜಯೇಂದ್ರ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ವಿಜಯಾನಂದ ಕಾಶಪ್ಪನವರ ಆಗಮಿಸುವರು.
ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಲಿದ್ದು ಎಮ್ಮಿಗನೂರು ಹಂಪಿಸಾವಿರದೇವರಮಠದ ವಾಮದೇವ ಮಹಂತ ಶಿವಾಚಾರ್ಯ ಸ್ವಾಮಿಗಳು ಹೃದಯ ಹಂಬಲ ನುಡಿಗಳನ್ನಾಡುವರು. ಅ.ಭಾ.ವೀ. ಮಹಾಸಭೆ ರಾಜ್ಯಾಧ್ಯಕ್ಷರಾದ ಶಂಕರ್ ಬಿದರಿ ಸದಾಶಯ ಸಂಕಲ್ಪ ನುಡಿಗಳನ್ನಾಡುವರು. ವಿಶೇಷ ಆಹ್ವಾನಿತರಾಗಿ ಅ.ಭಾ.ವೀ. ಮಹಾಸಭೆ ಉಪಾಧ್ಯಕ್ಷರಾದ ಅಥಣಿ ವೀರಣ್ಣ, ಮಾಜಿ ಸಚಿವರಾದ ಎಂ.ಪಿ. ರೇಣುಕಾಚಾರ್ಯ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಡಾ.ಎ.ಎಚ್. ಶಿವಯೋಗಿಸ್ವಾಮಿ, ಜಿ.ಪಂ.ಮಾಜಿ ಸದಸ್ಯರಾದ ಬಿ.ಎಂ.ವಾಗೀಶಸ್ವಾಮಿ ಭಾಗವಹಿಸುವರು.
ಜುಲೈ 22ರಂದು ಜರುಗುವ ಶೃಂಗ ಸಮ್ಮೇಳನವನ್ನು ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ಸಚಿವರಾದ ವಿ. ಸೋಮಣ್ಣ ಉದ್ಘಾಟಿಸುವರು. ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಖಾತೆ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ, ಮಾಜಿ ಮುಖ್ಯಮಂತ್ರಿ-ಸಂಸದರಾದ ಬಸವರಾಜ ಬೊಮ್ಮಾಯಿ, ಸಂಸದರಾದ ಬಿ.ವೈ.ರಾಘವೇಂದ್ರ, ವಿಆರ್‌ಎಲ್ ಸಮೂಹ ಸಂಸ್ಥೆಯ ಛೇರ್ಮನ್-ಮಾಜಿ ಸಂಸದರಾದ ಡಾ. ವಿಜಯ ಸಂಕೇಶ್ವರ, ಮಾಜಿ ಸಂಸದರಾದ ಜಿ.ಎಂ. ಸಿದ್ದೇಶ್ವರ, ಮಾಜಿ ಸಚಿವರು ಮತ್ತು ನರಗುಂದ ಶಾಸಕರಾದ ಸಿ.ಸಿ. ಪಾಟೀಲ, ಶಾಸಕರಾದ ಬಿ.ಪಿ.ಹರೀಶ್, ಮಾಜಿ ಶಾಸಕರಾದ ಎಚ್.ಎಸ್. ಶಿವಶಂಕರ್, ಸಂಯುಕ್ತ ಜನತಾದಳದ ಅಧ್ಯಕ್ಷರು-ಮಾಜಿ ಶಾಸಕರಾದ ಮಹಿಮಾ ಪಟೇಲ್ ಪಾಲ್ಗೊಳ್ಳುವರು.
ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಲಿದ್ದು ಬಸವನಬಾಗೇವಾಡಿ ಶಿವಪ್ರಕಾಶ ಶಿವಾಚಾರ್ಯ ಸ್ವಾಮಿಗಳು ಹೃದಯ ಹಂಬಲ ನುಡಿಗಳನ್ನಾಡುವರು. ವಿಶೇಷ ಆಹ್ವಾನಿತರಾಗಿ ಅ.ಭಾ.ವೀ. ಮಹಾಸಭೆ ಉಪಾಧ್ಯಕ್ಷರಾದ ಅಣಬೇರು ರಾಜಣ್ಣ, ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್. ನವೀನ್, ಶ್ರೀಮದಭಿನವ ರೇಣುಕ ಮಂದಿರದ ಕಾರ್ಯದರ್ಶಿ ದೇವರಮನೆ ಶಿವಕುಮಾರ್, ಹಿರಿಯ ನ್ಯಾಯವಾದಿ ಗಂಗಾಧರ ಗುರುಮಠ, ಅ.ಭಾ.ವೀ. ಮಹಾಸಭೆ ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಕಾಶಪ್ಪನವರ ಭಾಗವಹಿಸುವರು.
ಸೋಮೇಶ್ವರ ವಿದ್ಯಾಲಯದ ಕಾರ್ಯದರ್ಶಿ ಕೆ.ಎಂ.ಸುರೇಶ್, ದಾವಣಗೆರೆ-ಹರಿಹರ ಅ.ಸ.ಬ್ಯಾಂಕ್ ಅಧ್ಯಕ್ಷ ಮುರಿಗೇಶ ಆರಾಧ್ಯ ಉಪಸ್ಥಿತರಿರುವರು. ಸಂಶೋಧಕ ಮತ್ತು ಆಧ್ಯಾತ್ಮ ಚಿಂತಕರಾದ ಭಂಡಿವಾಡದ ಡಾ.ಎ.ಸಿ. ವಾಲಿ ಸದಾಶಯ ಸಂಕಲ್ಪ ನುಡಿಗಳನ್ನಾಡುವರು. ಜುಲೈ 22ರಂದು ಸಂಜೆ ಸಂಸ್ಕೃತಿ ಸಂವರ್ಧನೆಗಾಗಿ ವೀರಶೈವ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಪಾದಯಾತ್ರೆ ನಡೆಯಲಿದೆ. ಜುಲೈ 21ರ ಸಂಜೆ 7 ಗಂಟೆಗೆ ಡಾ. ರಾಜಗುರು ಗುರುಸ್ವಾಮಿ ಕಲಿಕೇರಿ ಹಾಗೂ ಶಿವಶಂಕರ ಶಾಸ್ತ್ರಿಗಳು ಬೆಂಗಳೂರು ಇವರಿಂದ ಸಂಗೀತ ಸೌರಭ ಜರುಗುವುದು. ಎರಡೂ ದಿನಗಳ ಕಾಲ ಶೃಂಗ ಸಮ್ಮೇಳನದಲ್ಲಿ ರಾಜ್ಯ ಹೊರರಾಜ್ಯಗಳ ಮಠಾಧೀಶರು, ಗಣ್ಯರು ಭಾಗವಹಿಸಲಿದ್ದು ನಾಡಿನ ಸಮಸ್ತ ಧರ್ಮಾಭಿಮಾನಿಗಳು ಪಾಲ್ಗೊಳ್ಳಬೇಕು. ಪಾಲ್ಗೊಳ್ಳುವ ಸರ್ವರಿಗೂ ಮಹಾಪ್ರಸಾದದ ವ್ಯವಸ್ಥೆ ಇದೆ ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Related Articles
                            Thank you for your comment. It is awaiting moderation.
                        
                                        
                    
                    
                
                            
                                            
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
                                                                                                                                                    
Comments (0)