ಜಾತಿ ಗಣತಿ ಮಾಡಲು ಕೇಂದ್ರ ಸರ್ಕಾರಕ್ಕೆ ಮಾತ್ರ ಅಧಿಕಾರವಿದೆ; ರಂಭಾಪುರಿ ಶ್ರೀ

ದಾವಣಗೆರೆ: ಈಗಾಗಲೇ ಹಲವಾರು ಕಾರಣಗಳಿಂದ ವೀರಶೈವ-ಲಿಂಗಾಯತ ಸಮಾಜವು ಛಿದ್ರ ಛಿದ್ರವಾಗಿ ಹೋಗುತ್ತಿದ್ದು ಅವೆಲ್ಲವುಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಒಂದು ಗಟ್ಟಿ ನಿರ್ಧಾರ ಕೈಗೊಳ್ಳುವ ಅವಶ್ಯಕತೆಯಿದೆ. ಬರಲಿರುವ ವರ್ಷ ಕೇಂದ್ರ ಸರ್ಕಾರ ಜನಗಣತಿಯ ಜತೆಗೆ ಜಾತಿ ಗಣತಿಯನ್ನೂ ಮಾಡಲು ನಿರ್ಧರಿಸಿದೆ. ಜಾತಿ ಗಣತಿ ಮಾಡಲು ಕೇಂದ್ರ ಸರ್ಕಾರಕ್ಕೆ ಮಾತ್ರ ಅಧಿಕಾರವಿದ್ದು ಉಳಿದ ಯಾರಿಗೂ ಆ ಅಧಿಕಾರವಿಲ್ಲವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಮಂಗಳವಾರ ನಗರದ ಶ್ರೀ ಜಗದ್ಗುರು ಪಂಚಾಚಾರ್ಯ ಮಂದಿರದಲ್ಲಿ ಜರುಗಿದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಶ್ರೀಗಳು, ಜುಲೈ 21 ಹಾಗೂ 22ರಂದು ದಾವಣಗೆರೆ ನಗರದ ಶ್ರೀಮದಭಿನವರ ರೇಣುಕ ಮಂದಿರದ ಸಭಾಂಗಣದಲ್ಲಿ ನಡೆಯಲಿರುವ ವೀರಶೈವ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನದ ಉದ್ದೇಶವನ್ನು ತಿಳಿಸಿದರು.

40 ವರ್ಷಗಳ ಹಿಂದೆ ದಾವಣಗೆರೆಯಲ್ಲಿ ಪೀಠಾಚಾರ್ಯರ ಮತ್ತು ಶಿವಾಚಾರ್ಯರ ಬೃಹತ್ ಸಮ್ಮೇಳನ ನಡೆದಿದೆ. 10-15 ವರ್ಷಗಳಿಂದ ಕೆಲವು ಆಂತರಿಕ ಸಮಸ್ಯೆಗಳಿಂದ ತಪ್ಪು ಕಲ್ಪನೆಯಿಂದ ಪೀಠಗಳು ದೂರ ದೂರ ಇದ್ದವು. ಈಗ ಸಮಸ್ಯೆಗಳೆಲ್ಲವನ್ನೂ ಬದಿಗಿರಿಸಿ ವೀರಶೈವ ಧರ್ಮ ಸಂಸ್ಕೃತಿ ಬೆಳೆಸುವ ಪ್ರಯತ್ನ ಆಗಬೇಕಾಗಿದೆ. ವಿವಿಧ ರಂಗಗಳಲ್ಲಿ ಕವಲು ದಾರಿಯಲ್ಲಿ ಹೆಜ್ಜೆ ಹಾಕುತ್ತಿರುವ ಎಲ್ಲ ಭಿನ್ನ ಚಟುವಟಿಕೆಗೆ ಕಡಿವಾಣ ಹಾಕಬೇಕು. ಆದರ್ಶ ಉತ್ಕೃಷ್ಟ ವೀರಶೈವ ಲಿಂಗಾಯತ ಧರ್ಮ ಸಂಸ್ಕೃತಿಯನ್ನು ಮತ್ತೊಮ್ಮೆ ಪುನಶ್ಚತನಗೊಳಿಸುವ ಸಂಕಲ್ಪವನ್ನು ಹೊಂದಿ ಜಗದ್ಗುರು ಪಂಚ ಪೀಠಾಧೀಶರು ಗಟ್ಟಿಯಾದ ಹೆಜ್ಜೆ ಇಟ್ಟಿದ್ದೇವೆ. ಧಾರ್ಮಿಕ ಸಾಮಾಜಿಕ ಚಿಂತನಗಳನ್ನು ಒಳಗೊಂಡಂತ ಸಮಾಲೋಚನಾ ಸಮಾರಂಭ ನಡೆಯಲಿದೆ ಎಂದರು.

ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ, ಮಧ್ಯ ಪ್ರದೇಶ ಉತ್ತರ ಪ್ರದೇಶ ಇನ್ನೂ ಅನೇಕ ರಾಜ್ಯಗಳಿಂದ ವೀರಶೈವ ಗುರು ಪರಂಪರೆಯ ಮಠಾಧೀಶರು ಭಾಗವಹಿಸುವರು. ಮಾನವ ಧರ್ಮಕ್ಕೆ ಜಯವಾಗಲಿ ಎಂಬ ದಿವ್ಯ ಸಂದೇಶ ನೀಡಿದ ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ತಪಗೈದ ಮುಕ್ತಿಮಂದಿರ ಕ್ಷೇತ್ರದಲ್ಲಿ ಮೊದಲ ಸಮ್ಮೇಳನ ನಡೆದು ಒಂದು ನಿರ್ಧಾರಕ್ಕೆ ಬರಲಾಗಿದೆ. ತದನಂತರ ವೀರಶೈವ-ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪನವರ ಬೆಂಗಳೂರು ನಿವಾಸದಲ್ಲಿ ಪೀಠಾಚಾರ್ಯರು ಒಂದೆಡೆ ಸೇರಿ ಧಾರ್ಮಿಕವಾಗಿ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಚರ್ಚಿಸಲಾಗಿದೆ. ಸಮಾಜ ಬಾಂಧವರಿಗಾಗುತ್ತಿರುವ ತೊಂದರೆ ತಾಪತ್ರಯ ಸಮಸ್ಯೆಗಳ ಕುರಿತು ಚರ್ಚಿಸಿ ಒಂದು ಸಮಷ್ಟಿಯಾದ ನಿಲುವನ್ನು ವ್ಯಕ್ತಪಡಿಸುವ ಉದ್ದೇಶ ಹೊಂದಲಾಗಿದೆ.ಈ ಕಾರಣದಿಂದಾಗಿ 21 ಹಾಗೂ 22 ರಂದು ದಾವಣಗೆರೆ ನಗರದಲ್ಲಿ ಈ ಶೃಂಗ ಸಮ್ಮೇಳನ ನಡೆಸಲಾಗುತ್ತಿದೆ ಎಂದರು.

ವೀರಶೈವ ಧರ್ಮ ಇತಿಹಾಸ ಪರಂಪರೆ ಬಹು ದೊಡ್ಡದು. ಇದಕ್ಕೆ ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರ ಕೊಡುಗೆ ಬಹಳ ದೊಡ್ಡದಾಗಿದೆ. ವೀರಶೈವ ಭವ್ಯ ಸಂಸ್ಕೃತಿಗೆ 12ನೇ ಶತಮಾನದ ಶಿವಶರಣರು ಇನ್ನಷ್ಟು ಮೆರಗು ಕೊಟ್ಟಿದ್ದನ್ನು ಮರೆಯುವಂತಿಲ್ಲ ಎಂದು ಸ್ಮರಿಸಿದರು.

ಜುಲೈ 21ರ ಶೃಂಗ ಸಮ್ಮೇಳನವನ್ನು ವೀರಶೈವ-ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಉದ್ಘಾಟಿಸುವರು. ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿಯವರೂ ಸೇರಿ ಅನೇಕ ಗಣ್ಯರು ಪಾಲ್ಗೊಳ್ಳುವರು. 22ರ ಸಮ್ಮೇಳನದಲ್ಲಿ ಪಂಚ ಪೀಠಾಧೀಶರ ಹಾಗೂ ಶಿವಾಚಾರ್ಯರ ವಿಚಾರ ವಿನಿಮಯ ಮಾಡಲಾಗುವುದು, ನಂತರ ವೀರಶೈವ-ಲಿಂಗಾಯತ ಮಹಾಸಭಾದವರು ಏರ್ಪಡಿಸಲು ಉದ್ದೇಶಿಸಿರುವ ಬೃಹತ್ ಸಮಾರಂಭದಲ್ಲಿ ಪಾಲ್ಗೊಳ್ಳಲಾಗುವುದು ಎಂದು ತಿಳಿಸಿದರು.

ಶ್ರೀ ಉಜ್ಜಯಿನಿ ಜಗದ್ಗುರು ಸಿದ್ದಲಿಂಗ ಶಿವಾಚಾರ್ಯ ಭಗವತ್ಪಾದರು. ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಭಗವತ್ಪಾದರು, ಕಾಶೀ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವರಾಧ್ಯ ಭಗವತ್ಪಾದರು ಪತ್ರಿಕಾ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಸಮಾರಂಭದಲ್ಲಿ, ಶಿವಾಚಾರ್ಯರು ಭಾಗವಹಿಸಿದ್ದರು. ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯರು ನಿರೂಪಿಸಿದರು.

Related Articles

Comments (0)

Leave a Comment