ಸಂಗೀತ ಜೀವನದ ಅವಿಭಾಜ್ಯ ಅಂಗ: ರಂಭಾಪುರಿ ಜಗದ್ಗುರು

ಬಾಳೆಹೊನ್ನೂರು: ನೊಂದ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ನೀಡುವ ಅದ್ಭುತ ಶಕ್ತಿ ಸಂಗೀತಕ್ಕಿದೆ. ಸಂಗೀತವು ಕೇವಲ ಮನರಂಜನೆಯಲ್ಲ, ಅದು ಮಾನವ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ ಎಂದು ಶ್ರೀ ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.

ಶ್ರೀ ರಂಭಾಪುರಿ ಪೀಠದಲ್ಲಿ ಜರುಗಿದ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ‘ಸಂಗೀತ ಸೌರಭ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಹಿಂದೂಸ್ತಾನಿ ಅಥವಾ ಕರ್ನಾಟಕ ಶಾಸ್ತ್ರೀಯ ಸಂಗೀತ ಯಾವುದೇ ಇರಲಿ, ಅವು ಕಿವಿಗೆ ಇಂಪು ಮತ್ತು ಮನಸ್ಸಿಗೆ ಮುದ ನೀಡುತ್ತವೆ. ಸಂಗೀತದ ಪ್ರಭಾವ ಕೇವಲ ಮನುಷ್ಯರ ಮೇಲಷ್ಟೇ ಅಲ್ಲ, ಸಸ್ಯಗಳ ಮೇಲೂ ಆಗುತ್ತದೆ ಎಂಬುದು ವಿಜ್ಞಾನಿಗಳ ಪ್ರಯೋಗದಿಂದ ದೃಢಪಟ್ಟಿದೆ. ಭಕ್ತಿಗೀತೆಗಳು ನಮ್ಮಲ್ಲಿ ಅವ್ಯಕ್ತ ಭಕ್ತಿಯ ಭಾವನೆಗಳನ್ನು ಜಾಗೃತಗೊಳಿಸುತ್ತವೆ ಎಂದು ಶ್ರೀಗಳು ತಿಳಿಸಿದರು.

ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು ಕಾರ್ಯಕ್ರಮ ಉದ್ಘಾಟಿಸಿದರು. ಗದಗಿನ ಖ್ಯಾತ ಗಾಯಕ ಪಂ. ಡಾ. ರಾಜಗುರು ಗುರುಸ್ವಾಮಿ ಕಲಕೇರಿ ಮತ್ತು ತಂಡದವರಿಂದ ಜರುಗಿದ ಸುಶ್ರಾವ್ಯ ಸಂಗೀತ ಕಛೇರಿ ನೆರೆದಿದ್ದ ಭಕ್ತಾದಿಗಳ ಮನಸೂರೆಗೊಂಡಿತು.

ಕಾರ್ಯಕ್ರಮದಲ್ಲಿ ಮಾಜಿ ಜಿ.ಪಂ. ಉಪಾಧ್ಯಕ್ಷ ಎಂ.ಎಸ್. ಚನ್ನಕೇಶವ, ಪ್ರಮುಖರಾದ ಬಿ.ಸಿ. ಗೀತಾ ಯಡ್ರಾಮಿಯ, ಚಂದ್ರಶೇಖರ ಪುರಾಣಿಕ ಸೇರಿದಂತೆ ವಿವಿಧ ಮಠಗಳ ಮಠಾಧೀಶರು ಉಪಸ್ಥಿತರಿದ್ದರು. ಸುಳ್ಳದ ಶಿವಸಿದ್ದರಾಮೇಶ್ವರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಆರ್.ಡಿ. ಮಹೇಂದ್ರ ಸ್ವಾಗತಿಸಿ, ಶಿವಲಿಂಗ ರುದ್ರಮುನಿ ಶಿವಾಚಾರ್ಯರು ಕಾರ್ಯಕ್ರಮ ನಿರೂಪಿಸಿದರು.

Related Articles

Comments (0)

Leave a Comment