‘ನಿಸ್ವಾರ್ಥ ಪ್ರೀತಿಯ ದೈವೀರೂಪವೇ ತಾಯಿ’:ಶ್ರೀಗುರುಸಿದ್ಧೇಶ್ವರ ಶ್ರೀಗಳ ನುಡಿ
- by Suddi Team
- February 14, 2026
- 13 Views
ಧಾರವಾಡ : ತನ್ನೆದೆಯ ಅಮೃತವನುಣಿಸಿ ಬೆಳೆಸಿ ಮಾರ್ಗದರ್ಶನ ಮಾಡಿದ ಮೊದಲ ಗುರು ನಿಸ್ವಾರ್ಥ ಪ್ರೀತಿಯ ದೈವೀರೂಪವಾದ ತಾಯಿಯ ಸ್ಮರಣೆ ನಿತ್ಯವೂ ಅಂತರಂಗದಲ್ಲಿರಬೇಕೆಂದು ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷರಾದ ಶಿರಕೋಳ ಹಿರೇಮಠದ ಶ್ರೀಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅವರು ಹತ್ತಿರದ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ 2ನೆಯ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡುತ್ತಿದ್ದರು. ನಮ್ಮ ಜೀವನದ ಮೂಲದಲ್ಲಿ ಮತ್ತು ಸುತ್ತಲಿನ ಸಂಬಂಧಗಳಲ್ಲಿ ದೈವತ್ವವಿದೆ. ಸಂರಕ್ಷಣೆ ಮಾಡುವ ಜೊತೆಗೆ ಜೀವನ ವಿಧಾನದ ನೀತಿ-ನಿಯಮಗಳ ಸಂಸ್ಕಾರ ನೀಡುವ ತಂದೆಯೂ ದೈವೀರೂಪ. ದೈವತ್ವದ ಜೀವಂತ ಪ್ರತಿನಿಧಿಯಾದ ಶ್ರೀಗುರು(ಆಚಾರ್ಯರು) ಧರ್ಮ, ಸಂಸ್ಕೃತಿ, ಪರಂಪರೆ, ಆಧ್ಯಾತ್ಮದ ನೆಲೆಯಲ್ಲಿ ಸಾಕ್ಷಾತ್ಕಾರ ಸಂಪಾದಿಸುವ ಬಗೆಯನ್ನು ಬೋಧಿಸುತ್ತಾರೆ. ಅದಕ್ಕೆಂದೇ ತಾಯಿ, ತಂದೆ ಮತ್ತು ಆಚಾರ್ಯರನ್ನು ದೇವರೆಂದು ಅರಿತು ನಡೆಯಲು ಉಪನಿಷತ್ತುಗಳು ಸಲಹೆ ನೀಡುತ್ತವೆ ಎಂದರು.
ಆಧ್ಯಾತ್ಮಿಕ ಪ್ರವಚನ ನೀಡಿದ ಕಲ್ಬುರ್ಗಿ ಜಿಲ್ಲೆ ಶಹಬಾದ ತಾಲೂಕು ರಾವೂರ ಸಿದ್ದಲಿಂಗೇಶ್ವರ ಸಂಸ್ಥಾನಮಠದ ಶ್ರೀಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಮಾನವನ ಜೀವನದಲ್ಲಿ ಆಧ್ಯಾತ್ಮ ಕೇವಲ ಆಚರಣೆಯಾಗದೇ ಅದು ಆತ್ಮಸಾಕ್ಷಾತ್ಕಾರದ ಹುಡುಕಾಟವಾಗಿದೆ. ಆಧ್ಯಾತ್ಮವು ಪ್ರೀತಿ, ದಯೆ, ಕ್ಷಮೆ, ಸಹನೆ ಮುಂತಾದ ಮೌಲಿಕ ಗುಣಗಳನ್ನು ಬೆಳೆಸುತ್ತದೆ. ಬದುಕಿನ ಅನಂತ ಒತ್ತಡಗಳನ್ನು ನಿಖರ ನೆಲೆಯಲ್ಲಿ ನಿಭಾಯಿಸಲು ಆಧ್ಯಾತ್ಮವು ಆತ್ಮವಿಶ್ವಾಸ, ಧೈರ್ಯ, ಸಂಯಮವನ್ನು ತುಂಬುತ್ತದೆ. ಆಧ್ಯಾತ್ಮವು ಅಂತರಂಗದ ಬೆಳಗನ್ನು ಕಾಣಲು ಜ್ಯೋತಿ ಹೊತ್ತಿಸುತ್ತದೆ ಎಂದರು.
ಮಣಕವಾಡದ ಶ್ರೀಅಭಿನವ ಮೃತ್ಯುಂಜಯ ಸ್ವಾಮೀಜಿ ಶಿಷ್ಯರಾದ ಶ್ರೇಷ್ಠ ದೇವರು, ಗಿರಿಮಲ್ಲಯ್ಯ ಉಮಚಗಿಮಠ, ಗುರುಸಿದ್ಧಯ್ಯ ಮಠಪತಿ, ಮಲ್ಲಪ್ಪ ತೇಗೂರ, ಚೆನ್ನು ಬೆಟಗೇರಿ, ನಿಂಗಪ್ಪ ತೇಗೂರ, ಮನೋಜ ಆಯಟ್ಟಿ, ಏಗಪ್ಪ ದೇಸಾಯಿ, ಈರಣ್ಣ ಲಕ್ಕಮ್ಮನವರ, ಆಕಾಶ ಹಡಪದ, ಶ್ರೀಶೈಲ ಲಕ್ಕಮ್ಮನವರ, ಮಲ್ಲಿಕಾರ್ಜುನ ಯಾವಗಲ್ಲ, ಶ್ರೀಶೈಲ ದೇಸಾಯಿ, ಆಕಾಶ ಏಣಗಿ, ಶ್ರವಣಕುಮಾರ ಜೋಲಿ ಇದ್ದರು. ಉಮೇಶ ಅಕ್ಕಿ ನಿರೂಪಿಸಿದರು. ಸಂಜು ಮೊರಬದ ವಂದಿಸಿದರು. ಆಕಾಶವಾಣಿ ಕಲಾವಿದ ಗದಗ ವೀರೇಶ್ವರ ಪುಣ್ಯಾಶ್ರಮದ ವೀರೇಶಕುಮಾರ ಮಳಲಿ ಅವರ ಸಂಗೀತ ಸೇವೆಗೆ ಸಿದ್ಧರಾಮ ಬ್ಯಾಕೋಡ ತಬಲಾ ಸಾಥ ನೀಡಿದರು. ಕಾರ್ಯಕ್ರಮದ ನಂತರ ಅನ್ನಸಂತರ್ಪಣೆ ಜರುಗಿತು.
Related Articles
Thank you for your comment. It is awaiting moderation.


Comments (0)