ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ತುಮಕೂರು ದಸರಾ ಯಶಸ್ವಿಗೊಳಿಸಿ; ಡಾ.ಜಿ ಪರಮೇಶ್ವರ್
- by Suddi Team
- September 11, 2025
- 16 Views

ತುಮಕೂರು: ಸೆಪ್ಟೆಂಬರ್ 22 ರಿಂದ 11 ದಿನಗಳ ಕಾಲ ನಡೆಯಲಿರುವ ತುಮಕೂರು ಜಿಲ್ಲಾ ದಸರಾ ಉತ್ಸವದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಜಿಲ್ಲೆಯ ಜನತೆ ಸಹಕರಿಸಿ ನಾಡದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಮನವಿ ಮಾಡಿದ್ದಾರೆ.
ತುಮಕೂರು ದಸರಾ ಉತ್ಸವ ಅಂಗವಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಿರ್ಮಾಣ ಮಾಡಲಿರುವ ಬೃಹತ್ ಧಾರ್ಮಿಕ ಮಂಟಪ ನಿರ್ಮಾಣಕ್ಕೆ ಡಾ.ಜಿ ಪರಮೇಶ್ವರ್ ಭೂಮಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು,ಸೆಪ್ಟೆಂಬರ್ 22 ರಿಂದ 11 ದಿನಗಳ ಕಾಲ ನಡೆಯಲಿರುವ ತುಮಕೂರು ಜಿಲ್ಲಾ ದಸರಾ ಉತ್ಸವದ ಅಂಗವಾಗಿ ನಾಡದೇವಿ ಚಾಮುಂಡೇಶ್ವರಿಯನ್ನು ಪೂಜಿಸಿ ಹೋಮ-ಹವನ, ಮತ್ತಿತರ ಪೂಜಾ ಕೈಂಕರ್ಯಗಳನ್ನು ನಡೆಸಲು ಭವ್ಯವಾದ ಧಾರ್ಮಿಕ ಮಂಟಪವನ್ನು ನಿರ್ಮಿಸಲಾಗುವುದು.ಮಂಟಪದಲ್ಲಿ ಕಳೆದ ಬಾರಿ 9 ದಿನಗಳ ಕಾಲ ತಾಯಿ ಚಾಮುಂಡೇಶ್ವರಿಯನ್ನು ಅಲಂಕರಿಸಿ ಪೂಜಿಸಿದಂತೆ, ಈ ಬಾರಿಯೂ ದೇವಿಯು ಪ್ರತಿ ದಿನ ನವದುರ್ಗೆಯರ ವಿವಿಧ ರೂಪಗಳಲ್ಲಿ ಭಕ್ತರಿಗೆ ದರುಶನ ನೀಡಲಿದ್ದಾಳೆ ಎಂದರು.
ದಸರಾ ಉತ್ಸವವು ನಿರ್ವಿಘ್ನವಾಗಿ ನಡೆಯಲೆಂದು ಸಂಕಷ್ಟಹರ ಗಣಪತಿ ಚತುರ್ಥಿ ವ್ರತ ಪೂಜೆಯ ದಿನದಂದೇ ಧಾರ್ಮಿಕ ಮಂಟಪ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿರುವುದು ಶುಭ ಸೂಚಕವಾಗಿದೆ. ಜಿಲ್ಲಾ ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳಿಗೆ ನೀಡಿದ ಆಹ್ವಾನಕ್ಕೆ ಸಕರಾತ್ಮಕವಾದ ಸ್ಪಂದನೆ ಸಿಕ್ಕಿದೆ. ಮುಖ್ಯಮಂತ್ರಿಗಳು ಕಳೆದ ವರ್ಷದಂತೆ ಈ ವರ್ಷವೂ ಸರ್ಕಾರದಿಂದ ದಸರಾ ಉತ್ಸವಕ್ಕೆ ಅನುದಾನ ನೀಡುವ ಭರವಸೆ ನೀಡಿದ್ದಾರೆ ಎಂದರು.
ಉತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ, ಭಕ್ತಿಪ್ರಧಾನ ಕಾರ್ಯಕ್ರಮ, ಮಹಿಳಾ ದಸರಾ, ಯುವ ದಸರಾ, ಹೆಲಿರೈಡ್, ಹಾಟ್ ಏರ್ ಬಲೂನ್, ಫಲ-ಪುಷ್ಟ ಪ್ರದರ್ಶನ, ವಸ್ತುಪ್ರದರ್ಶನ, ಸಂಗೀತ ರಸ ಸಂಜೆ, ನೃತ್ಯ ರೂಪಕ ಸೇರಿದಂತೆ ಮತ್ತಿತರ ವಿಶೇಷ ಕಾರ್ಯಕ್ರಮಗಳು ಜರುಗಲಿವೆ.ನಗರದ ಸುಮಾರು 20 ಕಿ.ಮೀ. ಉದ್ದದ ಪ್ರಮುಖ ರಸ್ತೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುವುದು. ದೀಪಾಲಂಕಾರಕ್ಕೆ ಸೆಪ್ಟೆಂಬರ್ 22ರಂದು ಚಾಲನೆ ನೀಡಲಾಗುವುದು. ಸಂಗೀತ, ನಾಟಕ ಕ್ಷೇತ್ರ ಸೇರಿದಂತೆ ಜಿಲ್ಲೆಯ ಸಾವಿರಾರು ಕಲಾವಿದರು ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಲು ವೇದಿಕೆ ಅವಕಾಶ ಕಲ್ಪಿಸಲಾಗುವುದು. ಸ್ಥಳೀಯ ಕಲಾವಿದರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಉತ್ಸವದ ಕಡೆಯ ದಿನ ಜಂಬೂ ಸವಾರಿ ಮೆರವಣಿಗೆಯಲ್ಲಿ ಆನೆ-ಕುದುರೆಗಳು ಪಾಲ್ಗೊಳ್ಳಲಿವೆಯಲ್ಲದೆ ನಗರದ ಸುತ್ತಮುತ್ತಲಿನ ಸುಮಾರು 50 ಗ್ರಾಮ ದೇವತೆಗಳು ಸಾರೋಟಿನಲ್ಲಿ ಸಾಗಲಿವೆ. ಅಂಬಾರಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ಹೆಲಿಕಾಪ್ಟರ್‌ನಿಂದ ಹೂವಿನ ಮಳೆ ಸುರಿಸಲಾಗುವುದು. ಸೆಪ್ಟೆಂಬರ್ 28ರಂದು ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳಿಂದ ಏರ್ಪಡಿಸಿರುವ ಪಂಜಿನ ಕವಾಯತು ಪ್ರದರ್ಶನ ಜನರನ್ನು ಆಕರ್ಷಿಸಲಿದೆ. ದಸರಾ ಉತ್ಸವದಲ್ಲಿ ಜನತೆ ಪಾಲ್ಗೊಂಡು ಯಶಸ್ವಿಗೊಳಿಸಿ ಜಿಲ್ಲೆಗೆ ಕೀರ್ತಿ ತರಬೇಕು ಎಂದು ಮನವಿ ಮಾಡಿದರು.
Related Articles
Thank you for your comment. It is awaiting moderation.
Comments (0)