ಮಹಿಷಾಸುರ ಮರ್ದಿನಿ ಡಿಕೆ ಶಿವಕುಮಾರ್ ಮರ್ದನ ಮಾಡುವ ಕಾಲ ದೂರವಿಲ್ಲ;ವಿಜಯೇಂದ್ರ

ಬೆಂಗಳೂರು:ಚಾಮುಂಡಿ ತಾಯಿಯನ್ನು ಕೆಣಕಲು ಹೋದರೆ ರಾಜಕೀಯವಾಗಿ ಭಸ್ಮವಾಗಿ ಹೋಗುವಿರಿ ಎಚ್ಚರ,ಮಹಿಷಾಸುರ ಮರ್ದಿನಿ ನಿಮ್ಮನ್ನು ಮರ್ದನ ಮಾಡುವ ಕಾಲ ದೂರವಿಲ್ಲ ಎನ್ನುವ ಮೂಲಕ ಡಿಸಿಎಂ ಡಿಕೆ ಶಿವಕುಮಾರ್ ಅವರ ಹೇಳಿಕೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ‌ ಬಿವೈ ವಿಜಯೇಂದ್ರ ಟೀಕಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು,ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್  ಅವರೇ, ನಿಮ್ಮ ಪಕ್ಷದಲ್ಲಿ ನಿಮಗೆ ಎದುರಾಗಿರುವ ಕಂಟಕದಿಂದ ಪಾರಾಗಲು ಚಾಮುಂಡಿ ಬೆಟ್ಟ ಹಾಗೂ ಸಂಪ್ರದಾಯದ ದಸರವನ್ನು ಬಳಸಿಕೊಳ್ಳಬೇಡಿ. ಬಂಡೆಯೆಂದು ಬೀಗುತ್ತಿದ್ದ ನೀವು ಈಗಾಗಲೇ ಮುದ್ದೆಯಾಗಿ ಹೋಗಿದ್ದೀರಿ. ಚಾಮುಂಡಿ ತಾಯಿಯನ್ನು ಕೆಣಕಲು ಹೋದರೆ ರಾಜಕೀಯವಾಗಿ ಭಸ್ಮವಾಗಿ ಹೋಗುವಿರಿ ಎಚ್ಚರ ಎಂದಿದ್ದಾರೆ.

ಪೈಪೋಟಿಯ ಮೇಲೆ ನೀವೂ, ನಿಮ್ಮ ಕಾಂಗ್ರೆಸಿಗರು ಹಿಂದೂ ಧರ್ಮದ ಅವಹೇಳನ, ಹಿಂದೂ ಧಾರ್ಮಿಕ ಕೇಂದ್ರಗಳ ಅಪಪ್ರಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದೀರಿ, ಇದೀಗ ಹಿಂದೂ ಪರಂಪರೆಯ ವಿಜಯ ದಶಮಿ ಹಬ್ಬವನ್ನು ಮಲಿನ ಮಾಡಲು ಹೊರಟಿದ್ದೀರಿ, ಮಹಿಷಾಸುರ ಮರ್ದಿನಿ ನಿಮ್ಮನ್ನು ಮರ್ದನ ಮಾಡುವ ಕಾಲ ದೂರವಿಲ್ಲ.“ಚಾಮುಂಡಿ ತಾಯಿ ಶ್ರದ್ಧೆಯ ಭಕ್ತರ ಸ್ವತ್ತು, ಅದನ್ನು ಮುಟ್ಟಲು ಹೋದರೆ ಕಾದಿದೆ ನಿಮಗೆ ಆಪತ್ತು” ಎಂದು ವಾರ್ನಿಂಗ್ ನೀಡಿದ್ದಾರೆ.

ಇನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೂಡ ಈ ಕುರಿತು ಪ್ರತಿಕ್ರಿಯೆ ನೀಡಿದ್ದು,ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ, ‘ಚಾಮುಂಡೇಶ್ವರಿ ಮಾತೆಯು ಹಿಂದೂಗಳ ದೇವಿ ಅಲ್ಲವೆಂದಾದರೆ, ‘ಮುಸ್ಲಿಮರ ದೇವಿಯೇ’. ಮುಸ್ಲಿಮರು ಚಾಮುಂಡೇಶ್ವರಿ ದೇವಿಯನ್ನು ಭಕ್ತಿ, ಭಾವದಿಂದ ಪೂಜಿಸುತ್ತಾರೆಯೇ?ಹಿಂದೂಗಳ ದೇವಸ್ಥಾನ, ಹಿಂದೂಗಳ ದೇವರ ವಿಷಯದಲ್ಲಿ ಮಾತ್ರ ನಿಮ್ಮ ಜಾತ್ಯಾತೀತತೆಯ ಭಾವ ಎದ್ದು ನಿಲ್ಲುತ್ತದೆಯೇ? ಹಿಂದೂಗಳು ನಿಮ್ಮ ಗ್ಯಾರಂಟಿಯ ಹಾಗೇ ‘ಉಚಿತ’ವೆಂದು ಭಾವಿಸಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.

ಈ ನಿಮ್ಮ ಜಾತ್ಯಾತೀತ ಭಾವ ಮಸೀದಿ, ಚರ್ಚುಗಳ ವಿಷಯದಲ್ಲಿ ಯಾಕೆ ಜಾಗೃತಗೊಳ್ಳುವುದಿಲ್ಲ. ಮತ್ತೊಮ್ಮೆ ಹೇಳುತ್ತೇನೆ ತಾಯಿ ಚಾಮುಂಡಿ ಹಾಗೂ ಚಾಮುಂಡಿ ಬೆಟ್ಟ ಸಮಸ್ತ ಹಿಂದೂಗಳ ಆಸ್ತಿ. ತಾಯಿ ಚಾಮುಂಡಿಯನ್ನು ಆರಾಧಿಸುವವರು, ತಾಯಿ ಚಾಮುಂಡೇಶ್ವರಿಯನ್ನು ನಂಬುವವರ ಆಸ್ತಿ.ಆರ್.ಎಸ್.ಎಸ್ ಗೀತೆ ಹಾಡಿ ಕ್ಷಮೆ ಕೋರಿರುವ ತಾವು, ಇದೀಗ ಅಸಂತುಷ್ಟಗೊಂಡ ಹೈಕಮಾಂಡ್ ಮೆಚ್ಚಿಸುವ ಕೆಲಸಕ್ಕಿಳಿದಿದ್ದೀರಾ? ಎಂದು ವಾಗ್ದಾಳಿ ನಡೆಸಿದ್ದಾರೆ.

Related Articles

Comments (0)

Leave a Comment