ಸತ್ಕಾರ್ಯಗಳಿಂದ ಬದುಕು ಸಮೃದ್ಧ : ಶ್ರೀ ರಂಭಾಪುರಿ ಜಗದ್ಗುರುಗಳು
- by Suddi Team
- July 29, 2025
- 100 Views

ಶ್ರೀ ರಂಭಾಪುರಿ ಪೀಠ(ಬಾಳೆಹೊನ್ನೂರು):ಮಾನವ ಜೀವನ ದೇವರು ಕೊಟ್ಟ ಉದಾತ್ತ ಕೊಡುಗೆ. ಯೌವನ ಸಂಪತ್ತು ಆಯುಷ್ಯ ಶಾಶ್ವತವಲ್ಲ. ನಾವು ಮಾಡುವ ಸತ್ಕಾರ್ಯಗಳ ಸಾಧನೆಯಿಂದ ಬದುಕು ಸಮೃದ್ಧಗೊಳ್ಳುವುದೆಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಲಿಂ. ಶ್ರೀ ರಂಭಾಪುರಿ ಶಿವಾನಂದ ಜಗದ್ಗುರುಗಳವರ ಪುಣ್ಯ ಸ್ಮರಣೋತ್ಸವ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು,ನೋಡುವ ಕಣ್ಣು ಕೇಳುವ ಕಿವಿ ನುಡಿಯುವ ನಾಲಿಗೆ ಒಳ್ಳೆಯದನ್ನೇ ನುಡಿಯಬೇಕು, ಹಂಚಿ ತಿನ್ನುವ ಗುಣ ಅತ್ಯಂತ ಶ್ರೇಷ್ಠ ಹಂಚಿ ಉಂಡರೆ ಪ್ರಸಾದ ಆಗುತ್ತದೆ. ಮುಚ್ಚಿಟ್ಟುಕೊಂಡು ತಿಂದರೆ ಆಹಾರವಾಗುತ್ತದೆ. ಜೀವನ ವಿಕಸನಗೊಳ್ಳಲು ಧರ್ಮ ಹಲವು ದಾರಿ ಹಲವು. ಆದರೆ ಮೂಲ ಗುರಿ ಒಂದೇ. ಒಂದು ಧರ್ಮ ಇನ್ನೊಂದು ಧರ್ಮದ ಸತ್ಯವನ್ನು ಪರಿಗಣಿಸದಿದ್ದರೂ ಆ ಸತ್ಯ ಬದಲಾಗದು. ಸತ್ಯ ಸಂಸ್ಕೃತಿ ಗೌರವಿಸದೇ ಹೋದರೆ ಜೀವನ ನಾಶಗೊಳ್ಳುತ್ತದೆ. ವಸ್ತು ಒಡವೆಗಳ ಹೊರ ರೂಪ ಬದಲಾಗಬಹುದು. ಆದರೆ ಒಳಗಿರುವ ಮೂಲ ಸತ್ಯ ಬದಲಾಗುವುದಿಲ್ಲ. ಪರಿಶ್ರಮ ಮತ್ತು ಸಾಧನೆಯಿಂದ ಜೀವನದಲ್ಲಿ ಉನ್ನತಿ ಕಾಣಲು ಸಾಧ್ಯವಾಗುತ್ತದೆ. ಲಿಂ. ಶ್ರೀ ಶಿವಾನಂದ ಜಗದ್ಗುರುಗಳವರು ಶ್ರೀ ರಂಭಾಪುರಿ ಪೀಠದ ನವ ನಿರ್ಮಾಣ ಶಿಲ್ಪಿಯೆಂದು ಪ್ರಸಿದ್ದರಾಗಿದ್ದಾರೆ. ಅವರ ಜೀವನಾದರ್ಶಗಳು ಬದುಕಿ ಬಾಳುವ ಜನಾಂಗಕ್ಕೆ ಆಶಾ ಕಿರಣವಾಗಿವೆ. ಅವರ ಸವಿ ನೆನಪಿನಲ್ಲಿ ವಿದ್ಯಾರ್ಥಿ ನಿಲಯ, ಯಾತ್ರಿ ನಿವಾಸ, ಸಮುದಾಯ ಭವನ ನಿರ್ಮಿಸಿರುವುದು ಹೆಮ್ಮೆಯ ಸಂಗತಿ ಎಂದರು.
ಈ ಪವಿತ್ರ ಪುಣ್ಯಾರಾಧನಾ ಸಮಾರಂಭದಲ್ಲಿ ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶ್ರೀಗಳು, ಹುಡಗಿ ಹಿರೇಮಠದ ಸೋಮೇಶ್ವರ ಶ್ರೀಗಳು, ಸಿದ್ದರಬೆಟ್ಟದ ವೀರಭದ್ರ ಶ್ರೀಗಳು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.
ಹಲವಾರು ಗಣ್ಯರಿಗೆ ಹಾಗೂ ಧರ್ಮಾಭಿಮಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭಹಾರೈಸಿದರು. ಚಿಕ್ಕಮಗಳೂರಿನ ಯು.ಎಂ.ಬಸವರಾಜ, ಬಾಸಾಪುರ ಬಿ.ಎಂ.ಭೋಜೇಗೌಡರು, ಪರದೇಶಪ್ಪ ಮಠದ ಮಧುಸೂಧನ್, ಶಿವಶಂಕರ ಬೆಳಗೊಳ, ಪ್ರಭುದೇವ ಕಲ್ಮಠ, ಪ್ರಭು ಅಣ್ಣಿಗೇರಿ, ಲೆಕ್ಕಾಧಿಕಾರಿ ಸಂಕಪ್ಪನವರ, ಶಶಿ ಸುರಗಿಮಠ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಪ್ರಾತ:ಕಾಲ ಶ್ರೀ ರಂಭಾಪುರಿ ಶಿವಾನಂದ ಜಗದ್ಗುರುಗಳವರ ಗದ್ದುಗೆಗೆ ರುದ್ರಾಭಿಷೇಕ, ಅಷ್ಟೋತ್ತರ ಮಹಾಪೂಜೆ ನೆರವೇರಿತು. ಶ್ರೀ ಪೀಠದ ಎಲ್ಲ ದೈವಗಳಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
Related Articles
Thank you for your comment. It is awaiting moderation.
Comments (0)