ಸಂಸ್ಕಾರ ಸಂಸ್ಕೃತಿಯ ಪರಿಪಾಲನೆಯಿಂದ ಬಾಳು ಉಜ್ವಲ; ಶ್ರೀ ರಂಭಾಪುರಿ ಜಗದ್ಗುರುಗಳು

ಬಸವಕಲ್ಯಾಣ:ಭಾರತೀಯ ಪವಿತ್ರ ಸಂಸ್ಕೃತಿ ಎಲ್ಲರನ್ನು ಒಗ್ಗೂಡಿಸುವುದೇ ಹೊರತು ವಿಘಟಿಸುವುದಲ್ಲ. ಆಧುನಿಕ ಜಗತ್ತಿನಲ್ಲಿ ಪ್ರಗತಿಪರ ವಿಚಾರಧಾರೆಗಳ ಹೆಸರಿನಲ್ಲಿ ಉತ್ಕೃಷ್ಟ ಸಂಸ್ಕೃತಿ ಕಲುಷಿತಗೊಳ್ಳಬಾರದು. ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿಯ ಪರಿಪಾಲನೆಯಿಂದ ಬಾಳು ಉಜ್ವಲಗೊಳ್ಳುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಗುರುವಾರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ 4ನೇ ದಿನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಜಗದ್ಗುರುಗಳು,ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಸಂಸ್ಕಾರ ಬಹಳ ಮುಖ್ಯ ಭಗವಂತನಿತ್ತ ಸಂಪತ್ತು ಬಾಳಿನ ನಿಜವಾದ ಸಂಪತ್ತೆಂಬುದನ್ನು ಮರೆಯಬಾರದು. ಫಲವಿತ್ತ ರೆಂಜಿ, ಗೊನೆ ಹೊತ್ತ ಬಾಳೆ, ತೆನೆ ಹೊತ್ತ ದಂಟು ಯಾವಾಗಲೂ ಬಾಗುವಂತೆ ಸಂಸ್ಕಾರದಿಂದ ಮನುಷ್ಯ ಸದ್ಗುಣವಂತನಾಗಲು ಸಾಧ್ಯವಾಗುತ್ತದೆ. ದೇವರು ಮತ್ತು ಧರ್ಮವನ್ನು ಯಾರೂ ಮರೆಯಬಾರದು. ದೇವರು ಎಲ್ಲರಲ್ಲೂ ಇರುವನು. ಆದರೆ ಎಲ್ಲರೂ ದೇವರಲ್ಲಿ ಇಲ್ಲ, ಧಾರ್ಮಿಕ ಸಂಸ್ಕೃತಿಯ ಪುನರುತ್ಥಾನದ ಜೊತೆಗೆ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಿದ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ನೀತಿಯಿಲ್ಲದ ಶಿಕ್ಷಣ, ಭೀತಿಯಿಲ್ಲದ ಶಾಸನ, ಮಿತಿಯಿಲ್ಲದ ಜೀವನ ಮತ್ತು ಸೀಮಾತೀತವಾದ ಸ್ವಾತಂತ್ರ್ಯ ಮನುಷ್ಯನ ಬದುಕನ್ನು ನಾಶಗೊಳಿಸುತ್ತದೆ. ಬಾಳಿನ ಭಾಗೋದಯಕ್ಕೆ ಅಹಿಂಸಾ ಸತ್ಯ ಅಸ್ತೇಯ ಬ್ರಹ್ಮಚರ್ಯ. ದಯಾ ಕ್ಷಮಾ ದಾನ ಪೂಜಾ ಜಪ ಮತ್ತು ಧ್ಯಾನ ಮುಖ್ಯವಾದ ಅಂಶಗಳಾಗಿವೆ. ಸಮರ ಜೀವನವನ್ನು ಅಮರ ಜೀವನವನ್ನಾಗಿ ಪರಿವರ್ತಿಸುವಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿ ಪ್ರಮುಖ ಪಾತ್ರವನ್ನು ಪಡೆದಿವೆ. ಉತ್ತಮ ಬರಹಗಾರರಾದ ಮತ್ತು ಚಿಂತಕರಾದ ಕಲಬುರ್ಗಿಯ ಶ್ರೀಮತಿ ಅಮರಾವತಿ ಹಿರೇಮಠ ಅವರಿಗೆ ‘ಸಾಹಿತ್ಯ ಸಿರಿ” ಪ್ರಶಸ್ತಿ ಅನುಗ್ರಹಿಸಿರುವುದು ತಮಗೆ ಅತ್ಯಂತ ಸಂತೋಷ ಉಂಟು ಮಾಡಿದೆ. ಈ ಅಪೂರ್ವ ಸಂದರ್ಭದಲ್ಲಿ ಬಾಗಲಕೋಟೆಯ ವೀರೇಶ ಹಿರೇಮಠ ಅವರು ‘ಪರಿಶ್ರಮ ವಾರ್ತೆ’ ದಸರಾ ವಿಶೇಷ ಸಂಚಿಕೆಯನ್ನು ಮುದ್ರಿಸಿ ಧರ್ಮಾಭಿಮಾನಿಗಳ ಕೈಗೆ ಕೊಡುತ್ತಿರುವುದು ಅವರಲ್ಲಿರುವ ಧರ್ಮನಿಷ್ಠೆ ಶ್ರದ್ಧಾ ಮನೋಭಾವ ಮತ್ತು ಅಪಾರವಾದ ಅಭಿಮಾನವನ್ನು ಕಾಣುತ್ತೇವೆ ಎಂದರು.

ತುಮಕೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ. ಮೀನಾಕ್ಷಿ ಖಂಡಿಮಠ ಮಾತನಾಡಿ ಮನುಷ್ಯ ಜೀವನ ಸುಂದರ ಶುದ್ಧಗೊಳಿಸುವುದೇ ಸಂಸ್ಕಾರದ ಮೂಲ ಗುರಿಯಾಗಿದೆ. ಮನುಷ್ಯನಿಗೆ ಹೆತ್ತ ತಾಯಿ ಹೊತ್ತ ಭೂಮಿ’ ಎಷ್ಟು ಮುಖ್ಯವೋ ಅಷ್ಟೇ ಸಂಸ್ಕಾರ ಮುಖ್ಯವಾಗಿದೆ. ಸಂವೇದನಾಶೀಲ ಜೀವನಕ್ಕೆ ಸಂಸ್ಕಾರ ಸಂಸ್ಕೃತಿಗಳ ಪರಿಪಾಲನೆ ಬಹು ಪ್ರಮುಖ ಪಾತ್ರ ವಹಿಸುತ್ತದೆ. ಆದರ್ಶ ಬದುಕು ಸಂಸ್ಕಾರದಿಂದ ಮಾತ್ರ ಸಾಧ್ಯ ಹೊರತು ಬೇರೆ ಯಾವುದರಿಂದಲೂ ಸಾಧ್ಯವಾಗುವುದಿಲ್ಲ. ಭೌತಿಕ ಬದುಕಿಗೆ ಆಧ್ಯಾತ್ಮ ಜ್ಞಾನದ ಅರಿವನ್ನು ಉಂಟು ಮಾಡುವುದರಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಚಿಂತನಗಳು ಸಕಲರ ಬಾಳಿನಲ್ಲಿ ಬೆಳಕು ಮೂಡಿಸಿವೆ ಎಂದರು.

ನೇತೃತ್ವ ವಹಿಸಿದ ಶಕಾಪುರ ತಪೋವನಮಠದ ಡಾ. ಸಿದ್ದರಾಮ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಸುವಿಚಾರಗಳ ಮತ್ತು ಶುಭ ಭಾವನೆಗಳ ಬುಟ್ಟಿಯಾಗಬೇಕು ಎಲ್ಲರ ಮನಸ್ಸು, ಮನಸ್ಸು ಭಾವ ಪರಿಶುದ್ಧಗೊಂಡಾಗ ಬದುಕಿನಲ್ಲಿ ಶ್ರೇಯಸ್ಸು ದೊರಕುವುದರಲ್ಲಿ ಸಂದೇಹವಿಲ್ಲ. ಭವಿ ಭಕ್ತನಾಗುವ ನರ ಹರನಾಗುವ ಜೀವಾತ್ಮ ಪರಮಾತ್ಮನಾಗಲು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಚಿಂತನಗಳು ನಮ್ಮೆಲ್ಲರಿಗೆ ಆಶಾಕಿರಣವಾಗಿವೆ ಎಂದರು. ಸಮ್ಮುಖ ವಹಿಸಿದ ಅಫಜಲಪುರ ಹಿರೇಮಠದ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ದೊಡ್ಡ ದೊಡ್ಡ ಮಾತುಗಳನ್ನು ಆಡುವುದರಿಂದ ಮನುಷ್ಯ ದೊಡ್ಡವನಾಗುವುದಿಲ್ಲ. ದೊಡ್ಡ ಗುಣ ದೊಡ್ಡ ಮನಸ್ಸು ಇದ್ದರೆ ಮಾತ್ರ ದೊಡ್ಡವನಾಗಲು ಸಾಧ್ಯ ಶ್ರೀ ರಂಭಾಪುರಿ ಜಗದ್ಗುರುಗಳ ಧರ್ಮ ಜ್ಞಾನ ಯಜ್ಞ ನಮ್ಮೆಲ್ಲರನ್ನು ಪಾವನರನ್ನಾಗಿ ಮಾಡುತ್ತಿದೆ ಎಂದರು.

ಪರಿಶ್ರಮ ವಾರ್ತೆ ವಿಶೇಷ ಸಂಚಿಕೆ ಬಿಡುಗಡೆ ಮಾಡಿದ ಎಡೆಯೂರು ರೇಣುಕ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಮೌಲ್ಯಗಳ ಉಳಿವು ಬೆಳವಣಿಗೆ ಮಾನವನ ಆಚರಣೆಯಲ್ಲಿವೆ. ನೀತಿವಂತರು ನಿರಾಶರಾಗಬಾರದು. ನೋವು ನುಂಗಿ ನಲಿವು ಹೊರ ತೋರಬೇಕಾಗಿದೆ. ಬಹಳಷ್ಟು ಜನರಿಗೆ ಕರ್ತವ್ಯ ಪ್ರಜ್ಞೆಯಿಲ್ಲ, ನೀತಿ ಸಂಹಿತೆ ಅರಿತು ಬಾಳಲು ಇಂಥ ಪತ್ರಿಕೆಗಳ ಅವಶ್ಯಕತೆ ಬಹಳಷ್ಟಿದೆ. ಬಾಗಲಕೋಟೆ ವೀರೇಶ ಹಿರೇಮಠ ಈ ಪತ್ರಿಕೆಯ ಸಂಪಾದಕರಾಗಿ ಸಂಸ್ಕೃತಿ ಪುನರುತ್ಥಾನಗೊಳಿಸುವ ಕಾರ್ಯ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಪ್ರಾಸ್ತಾವಿಕ ಮಾತನಾಡಿದ ಆಲಮೇಲ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಇಂದಿನ ನಾಗರಿಕ ಸಮಾಜದಲ್ಲಿ ಹಲವಾರು ಅನಾಗರೀಕತೆಯ ವರ್ತನೆಗಳು ನಡೆಯುತ್ತಿರುವುದು ನೋವಿನ ಸಂಗತಿ, ಮನಸ್ಸು ಬುದ್ದಿ ಮತ್ತು ಸದ್ವಿಚಾರಗಳು ಸಮೃದ್ಧವಾಗಿ ಬೆಳೆದಾಗ ಶ್ರೇಯಸ್ಸು ನಿಶ್ಚಿತ. ಅಧಿಕಾರದ ದಾಹ, ಸಂಪತ್ತು ಮತ್ತು ಅವಿವೇಕತನದ ಮನುಷ್ಯನ ನಿಜವಾದ ಗುಣವನ್ನು ದೂರ ಮಾಡುತ್ತವೆ. ಸಮಾಜದಲ್ಲಿ ಶಾಂತಿ ಸಾಮರಸ್ಯ ಮೂಡಿ ಬರಲು ಧರ್ಮದ ನಿಜ ದಾರಿ ಅರಿಯಲು ಇಂಥ ಸಮಾರಂಭಗಳ ಅವಶ್ಯಕತೆ ಇದೆಯೆಂದರು.

ಪ್ರಶಸ್ತಿ: ಕಲಬುರ್ಗಿಯ ಅಮರಾವತಿ ಎಸ್. ಹಿರೇಮಠ ಇವರಿಗೆ ಸಾಹಿತ್ಯ ಸಿರಿ ಪ್ರಶಸ್ತಿಯನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಪ್ರದಾನ ಮಾಡಿ ಆಶೀರ್ವದಿಸಿದರು.

ಗೌರವ ಗುರುರಕ್ಷೆ : ಸ್ವಂತ ನರನಾಳ ಹಿರೇಮಠದ ಶಿವಕುಮಾರ ಶಿವಾಚಾರ್ಯರು, ಚಿಂಚಣಸೂರು ಕಲ್ಮಠದ ಸಿದ್ದಮಲ್ಲ ಶಿವಾಚಾರ್ಯರು, ಯದಲಾಪುರ ಚರಮಾತೇಶ್ವರ ಮಠದ ಶಿವಶಂಕರ ಶಿವಾಚಾರ್ಯರು, ಮಾಗಣಗೇರಿ ವಿಶ್ವಾರಾಧ್ಯ ಶಿವಾಚಾರ್ಯರು, ಹಳ್ಳಿಖೇಡದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯರು, ಹುಡಗಿ ವಿರಕ್ತಮಠದ ಚನ್ನಮಲ್ಲ ಸ್ವಾಮಿಗಳು ಇವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗೌರವ ಗುರುರಕ್ಷೆ ನೀಡಿ ಆಶೀರ್ವದಿಸಿದರು.

ಬೈಲಹೊಂಗಲ ತಾಲೂಕಿನ ದೊಡ್ಡವಾಡದ ಅಜ್ಜಯ್ಯ ಪೂಜಾರ ಇವರು ಹೆಳವನ ವೇಷದಲ್ಲಿ ಬಂದು ಶ್ರೀ ಜಗದ್ಗುರು ರಂಭಾಪುರಿ ಪೀಠದ ಇತಿಹಾಸವನ್ನು ತಿಳಿಸಿದ್ದು ಜನಮನವನ್ನು ಸೆಳೆಯಿತು.

Related Articles

Comments (0)

Leave a Comment