ಸಮಸ್ಯೆಗಳು ಬದುಕಿನ ದಿಕ್ಕೂಚಿಗಳಾಗಲಿ: ಶ್ರೀ ರಂಭಾಪುರಿ ಜಗದ್ಗುರುಗಳು

ಬಾಳೆಹೊನ್ನೂರು: “ಮಾನವನ ಜೀವನದಲ್ಲಿ ಸಮಸ್ಯೆಗಳು ಎಂಬುದು ಪ್ರಗತಿಗೆ ಅಡ್ಡಿಪಡಿಸುವ ತಡೆಗೋಡೆಗಳಲ್ಲ, ಅವು ನಾವು ಸಾಗಬೇಕಾದ ದಾರಿಯನ್ನು ತೋರಿಸುವ ದಿಕ್ಕೂಚಿಗಳಾಗಿವೆ,” ಎಂದು ಶ್ರೀ ರಂಭಾಪುರಿ ಪೀಠದ ಜಗದ್ಗುರುಗಳಾದ ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.

ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಪೀಠದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಧರ್ಮ ಧ್ವಜಾರೋಹಣ ಮತ್ತು ಹರಿದ್ರಾ ಲೇಪನ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.

ಬೆವರಿನ ಸ್ನಾನ ಇತಿಹಾಸ ಬದಲಿಸಬಲ್ಲದು:

“ಕೇವಲ ನೀರಿನಲ್ಲಿ ಸ್ನಾನ ಮಾಡಿದರೆ ಬಟ್ಟೆ ಬದಲಿಸಬಹುದು. ಆದರೆ ಕಠಿಣ ಪರಿಶ್ರಮ ಎಂಬ ಬೆವರಿನಲ್ಲಿ ಸ್ನಾನ ಮಾಡಿದವನು ಇತಿಹಾಸವನ್ನೇ ಬದಲಿಸಬಲ್ಲ” ಎಂದು ಜಗದ್ಗುರುಗಳು ಯುವಜನತೆಗೆ ಕರೆ ನೀಡಿದರು. ವಿಜ್ಞಾನ ಎಲ್ಲಿ ನಿರುತ್ತರವಾಗುತ್ತದೆಯೋ ಅಲ್ಲಿಂದ ಭಾರತೀಯ ಆಧ್ಯಾತ್ಮ ಚಿಂತನೆ ಆರಂಭವಾಗುತ್ತದೆ ಎಂಬ ಡಾ. ಎಸ್. ರಾಧಾಕೃಷ್ಣನ್ ಅವರ ಮಾತುಗಳು ಸಾರ್ವಕಾಲಿಕ ಸತ್ಯ ಎಂದರು.

ಆಧ್ಯಾತ್ಮಿಕ ಜ್ಞಾನದ ಅಗತ್ಯ:

ಲೌಕಿಕ ಬದುಕಿನ ಯಶಸ್ಸಿಗೆ ಶ್ರದ್ಧೆ, ನಿಷ್ಠೆ ಮತ್ತು ಪರಿಶ್ರಮದ ಅಗತ್ಯವಿದೆ. ಕೇವಲ ಹಣ ಮತ್ತು ಕೀರ್ತಿ ಗಳಿಸುವುದೇ ಜೀವನದ ಗುರಿಯಾಗಬಾರದು. ನೊಂದ ಮನಸ್ಸಿಗೆ ಶಾಂತಿ ನೀಡಲು ಆಧ್ಯಾತ್ಮಿಕ ಜ್ಞಾನ ಅತ್ಯಗತ್ಯ. ಸಿದ್ಧಾಂತ ಶಿಖಾಮಣಿಯಲ್ಲಿ ರೇಣುಕಾಚಾರ್ಯರು ಬೋಧಿಸಿದಂತೆ ಪ್ರತಿಯೊಬ್ಬರೂ ಜೀವನದಲ್ಲಿ ಸಂಸ್ಕಾರ ಮತ್ತು ಆದರ್ಶ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು

ಸಮಾರಂಭದಲ್ಲಿ ಯಡಿಯೂರು ಕ್ಷೇತ್ರದ ರೇಣುಕ ಶಿವಾಚಾರ್ಯರು, ಮಳಲಿ ಮಠದ ಡಾ. ನಾಗಭೂಷಣ ಶಿವಾಚಾರ್ಯರು, ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯರು, ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯರು, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು, ಬೇರುಗಂಡಿ ಮಠದ ರೇಣುಕ ಮಹಾಂತ ಶಿವಾಚಾರ್ಯರು ಸೇರಿದಂತೆ ಕೊಣ್ಣೂರು ಮರಡಿಮಠ, ಹುಡುಗಿ ಹಿರೇಮಠ, ಆಡೂರು ಬೃಹನ್ಮಠ, ಚಿಮ್ಮಲಗಿ ಹಿರೇಮಠ ಹಾಗೂ ದೊಡ್ಡಸಗರ ನಾಗಠಾಣ ಹಿರೇಮಠದ ಶ್ರೀಗಳು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.

ಮಾಜಿ ಜಿ.ಪಂ. ಉಪಾಧ್ಯಕ್ಷ ಎಂ.ಎಸ್.ಚನ್ನಕೇಶವ, ಆರ್.ಡಿ.ಮಹೇಂದ್ರ, ಮಹೇಶ ಆಚಾರಿ, ಕೋಕಿಲಮ್ಮ, ಎಂ.ಎಸ್.ಅರುಣೇಶ್, ಹನೀಫ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಧಾರ್ಮಿಕ ವಿಧಿವಿಧಾನ:

ಬೆಳಿಗ್ಗೆ ನ್ಯಾಮತಿ ಬಸವರಾಜ ಹೊಸಕಟ್ಟೆ ನೇತೃತ್ವದಲ್ಲಿ ಶ್ರೀ ವೀರಭದ್ರಸ್ವಾಮಿಗೆ ಗುಗ್ಗುಳ ಪೂಜೆ ನೆರವೇರಿತು. ದಾವಣಗೆರೆಯ ಈಶ್ವರಪ್ಪ ಶೆಟ್ಟರು, ಶಿವಯೋಗಿ, ಪ್ರಭುಶಾಸ್ತ್ರಿ ಹಾಗೂ ಕೆ.ವಿ.ಮಲ್ಲಿಕಾರ್ಜುನ ಕುಟುಂಬದವರು ಸೇವಾಕರ್ತರಾಗಿ ಭಾಗವಹಿಸಿದ್ದರು. ನ್ಯಾಮತಿ ಪುರವಂತಿಕೆ ಕಲಾ ತಂಡದಿಂದ ಕಲಾ ಸೇವೆ ಜರುಗಿತು. ಸಂಜೆ ಶ್ರೀ ವೀರಭದ್ರಸ್ವಾಮಿ ಹಾಗೂ ಭದ್ರಕಾಳಿ ದೇವಿಗೆ ಹರಿದ್ರಾ ಲೇಪನ ಪೂಜೆ ನೆರವೇರಿದ್ದು, ಭಕ್ತಾದಿಗಳಿಗೆ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು

 

Related Articles

Comments (0)

Leave a Comment