ಲೋಕಸಭೆ ಮಾಜಿ ಸ್ಪೀಕರ್ ಶಿವರಾಜ ಪಾಟೀಲ ಅಗಲಿಕೆಗೆ ಕಾಶಿ ಪೀಠದ ಜಗದ್ಗುರುಗಳ ಸಂತಾಪ
- by Suddi Team
- December 12, 2025
- 6 Views
ಲಾತೂರ(ಮಹಾರಾಷ್ಟ್ರ):ಸಾರ್ಥಕ 90 ವಸಂತಗಳನ್ನು ಕಂಡಿದ್ದ ಲೋಕಸಭೆಯ ಮಾಜಿ ಸ್ಪೀಕರ್ ಶಿವರಾಜ ಪಾಟೀಲ ನಿಧನಕ್ಕೆ ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ರಾಜಕೀಯ ಸಂತ : ಮೂಲತಃ ಮಹಾರಾಷ್ಟçದ ಲಾತೂರ ನಗರದವರಾದ ಶಿವರಾಜ ಪಾಟೀಲ ಅವರು ಲಾತೂರ ನಗರಸಭೆಯ ಅಧ್ಯಕ್ಷರಾಗಿ, 2 ಬಾರಿ ಮಹಾರಾಷ್ಟç ವಿಧಾನ ಸಭಾ ಸದಸ್ಯರಾಗಿ, ವಿಧಾನಸಭೆಯ ಸ್ಪೀಕರ್ ಆಗಿ ಸೇವೆಗೈದಿದ್ದರು. ಲಾತೂರ ಲೋಕಸಭಾ ಕ್ಷೇತ್ರದಿಂದ ಸತತ 7 ಬಾರಿ ಸಂಸದರಾಗಿ ಆಯ್ಕೆಯಾಗಿ ಲೋಕಸಭಾ ಸ್ಪೀಕರ್ ಆಗಿ, ಕೇಂದ್ರ ಸರಕಾರದಲ್ಲಿ ಗೃಹ ಮಂತ್ರಿ, ರಕ್ಷಣಾ ಮಂತ್ರಿ ಸೇರಿ ಪ್ರಮುಖ ಸಚಿವ ಹುದ್ದೆಗಳನ್ನು ಪಡೆದಿದ್ದರು. ಹಲವಾರು ಮಹತ್ವದ ಸಂಸದೀಯ ಸಮಿತಿಗಳ ಅಧ್ಯಕ್ಷರಾಗಿ ಮಾರ್ಗದರ್ಶನ ಮಾಡಿದ್ದರು. ಪಂಜಾಬ ಮತ್ತು ರಾಜಸ್ಥಾನ ರಾಜ್ಯಗಳ ರಾಜ್ಯಪಾಲರಾಗಿಯೂ ಅವರು ಮಾಡಿದ ಸೇವೆ ಭಾರತದ ರಾಜಕಾರಣದಲ್ಲಿ ವ್ಯಾಪಕ ಮಹತ್ವವನ್ನು ಪಡೆದಿದೆ. ಎಷ್ಟೇ ಎತ್ತರಕ್ಕೆ ತಮ್ಮ ರಾಜಕೀಯ ಬೆಳವಣಿಗೆಯನ್ನು ಕಂಡಿದ್ದರೂ ಸಹ ಧರ್ಮ, ಸಂಸ್ಕೃತಿ, ಸಂಸ್ಕಾರ, ಸಜ್ಜನಿಕೆ, ಪಾರದರ್ಶಕ ವ್ಯಕ್ತಿತ್ವವನ್ನು ಮರೆಯದೇ ವಿಶಿಷ್ಟ ವ್ಯಕ್ತಿತ್ವದ ರಾಜಕಾರಣಿಯಾಗಿ ಓರ್ವ ರಾಜಕೀಯ ಸಂತರ0ತೆ ಕಾರ್ಯನಿರ್ವಹಿಸಿ ಜನಾನುರಾಗಿಯಾಗಿದ್ದ ಅವರು ಕಾಶಿ ಪೀಠಕ್ಕೆ ಆಗಮಿಸಿ ಆಶೀರ್ವಾದ ಪಡೆದಿದ್ದರು ಎಂದು ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ತಮ್ಮ ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ.
ಪಾಟೀಲ ಮನೆಗೆ ಭೇಟಿ : ನಿಧನದ ಸುದ್ದಿ ಅರಿತು ಶುಕ್ರವಾರ ಲಾತೂರಿನ ಶಿವರಾಜ ಪಾಟೀಲ ಮನೆಗೆ ಭೇಟಿ ನೀಡಿದ ಕಾಶಿ ಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಪಾರ್ಥಿವ ಶರೀರಕ್ಕೆ ಭಸ್ಮ ಧಾರಣೆ ಮಾಡಿ, ಮಾಲೆ ಹಾಕಿ ಶಿವರಾಜ ಪಾಟೀಲ ಅವರ ತೆಲೆಯ ಮೇಲೆ ಹಸ್ತವಿಟ್ಟು ಶಿವಪಂಚಾಕ್ಷರಿ ಮಹಾಮಂತ್ರದೊಂದಿಗೆ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
Related Articles
Thank you for your comment. It is awaiting moderation.


Comments (0)