ಶ್ರೀಗಳು, ಕಾರ್ಯಕರ್ತರು, ಜನ ಬಯಸಿದ್ದು ತಪ್ಪು ಎಂದು ಹೇಳಲು ಆಗುವುದಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್
- by Suddi Team
- July 8, 2025
- 113 Views

ಬೆಂಗಳೂರು ದಕ್ಷಿಣ (ಕನಕಪುರ): ಕಾರ್ಯಕರ್ತರು, ಶ್ರೀಗಳು, ಜನರು ಬಯಸುತ್ತಾರೆ. ಯಾರು ಏನೇ ಬಯಸಿದರು ಅದನ್ನು ತಪ್ಪು ಎಂದು ಹೇಳಲು ಆಗುವುದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲೂಕಿನ ಕೋಡಿಹಳ್ಳಿ ನಿವಾಸದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇದರ ಬಗ್ಗೆ ಮಾತನಾಡಲು ಹೋಗಬೇಡಿ ಎಂದು ಹೇಳಿದ್ದಾರೆ. ಮಾತನಾಡಿದರೆ ತಪ್ಪಾಗುತ್ತದೆ. ನಾವೆಲ್ಲ ಪಕ್ಷ ಕಟ್ಟಿರುವವರು. ಪಕ್ಷದ ಶಿಸ್ತಿನ ಸಿಪಾಯಿಗಳು. ನಾನಾಗಲಿ ಸಿದ್ದರಾಮಯ್ಯ ಅವರಾಗಲಿ ಯಾರೇ ಆಗಿರಲಿ ನಾವೆಲ್ಲರೂ ಪಕ್ಷ ಏನು ಹೇಳುತ್ತದೆಯೋ ಅದನ್ನು ಕೇಳುತ್ತೇವೆ ಎಂದರು.
ಬಾಯಿ ಚಪಲಕ್ಕೆ ಮಾತನಾಡುತ್ತಾರೆ:
ಸಿದ್ದರಾಮಯ್ಯ ಅವರು ಅನೇಕ ಬಾರಿ ಹೇಳಿದ್ದಾರೆ. ಪದೇಪದೆ ಮಾಧ್ಯಮಗಳು, ವಿರೋಧ ಪಕ್ಷದವರು, ನಮ್ಮ ಪಕ್ಷದಲ್ಲಿನ ಕೆಲವರು ಚಪಲಕ್ಕೆ ಮಾತನಾಡುತ್ತಾರೆ. ಈಗ ಅದರ ಅವಶ್ಯಕತೆಯಿಲ್ಲ ಎಂದರು.
ಜನರು ನಮ್ಮನ್ನು ನಂಬಿ ಮತ ನೀಡಿದ್ದಾರೆ. ಅವರ ಆಶೋತ್ತರಗಳನ್ನು ನಾವು ಒಂದೊಂದಾಗಿ ಈಡೇರಿಸುತ್ತಿದ್ದೇವೆ. ಕೊಟ್ಟ ಮಾತನ್ನು ಈಡೇರಿಸುತ್ತಿದ್ದೇವೆ. ಇನ್ನೂ ಅನೇಕ ಯೋಜನೆಗಳಿವೆ, ಅದಕ್ಕೂ ನಾವು ತಯಾರು ಮಾಡಿಕೊಳ್ಳುತ್ತಿದ್ದೇವೆ. ದೇವರ, ವರುಣನ ಕೃಪೆಯಿಂದ ಉತ್ತಮ ಮಳೆ ಬೀಳುತ್ತಿದೆ ಎಂದರು.
ಒಡಂಬಡಿಕೆಯಂತೆ ನೀವು ಸಿಎಂ ಆಗಬೇಕು ಎನ್ನುವ ರಂಭಾಪುರಿ ಶ್ರೀಗಳ ಮಾತಿನ ಬಗ್ಗೆ ಕೇಳಿದಾಗ, ಬಹಿರಂಗವಾಗಿ ನಾನು ಏಕೆ ಮಾತನಾಡಲಿ? ನಾನುಂಟು, ಪಕ್ಷವುಂಟು. ನಾವೆಲ್ಲರೂ ಒಟ್ಟಿಗೆ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಒಕ್ಕಲಿಗರು ಹಾಗೂ ಲಿಂಗಾಯತರು ರಾಷ್ಟ್ರಮಟ್ಟದಲ್ಲಿ ಒಬಿಸಿಗಳು: ಡಿಸಿಎಂ ಡಿ.ಕೆ.ಶಿವಕುಮಾರ್
ದೇಶದಲ್ಲಿ ಒಬಿಸಿಗಳ ಸಂಖ್ಯೆ ವ್ಯಾಪಕವಾಗಿದೆ. ಒಕ್ಕಲಿಗರು ಹಾಗೂ ಲಿಂಗಾಯತರು ರಾಷ್ಟ್ರಮಟ್ಟದಲ್ಲಿ ಒಬಿಸಿಗಳೇ. ಸಮಾಜದಲ್ಲಿ ಹಿಂದುಳಿದ ವರ್ಗಗಳ ಜನರನ್ನು ಮುನ್ನೆಲೆಗೆ ತರಬೇಕು ಎಂದು ಒಬಿಸಿ ಸಲಹಾ ಸಮಿತಿ ಸಭೆ ನಡೆಸಲಾಗುತ್ತಿದೆ ಎಂದು ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ ಅವರನ್ನು ಕಳುಹಿಸಲು ಅವರಿಗೆ ಪಕ್ಷದ ಒಬಿಸಿ ಸಲಹಾ ಮಂಡಳಿ ಜವಾಬ್ದಾರಿ ನೀಡಿದ್ದಾರೆ ಎನ್ನುವ ಬಿಜೆಪಿ ಟೀಕೆಯ ಬಗ್ಗೆ ಕೇಳಿದಾಗ, ಪಕ್ಷದಲ್ಲಿ ಅಲ್ಪಸಂಖ್ಯಾತ, ಪರಿಶಿಷ್ಟ ಸೇರಿ ಇದೇ ರೀತಿ ಅನೇಕ ಘಟಕಗಳಿವೆ. ಅಲ್ಪಸಂಖ್ಯಾತರಲ್ಲಿ ಜೈನ, ಸಿಖ್ ಧರ್ಮದವರೂ ಸೇರುತ್ತಾರೆ. ಇದನ್ನೆಲ್ಲ ಟೀಕೆ ಮಾಡಲಿಲ್ಲ ಎಂದರೆ ಬಿಜೆಪಿಯವರಿಗೆ ಸಮಾಧಾನವಾಗಬೇಕಲ್ಲ. ಟೀಕೆಗಳು ಸಾಯುತ್ತವೆ. ಕೆಲಸಗಳು ಉಳಿಯುತ್ತವೆ ಎಂದರು.
ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿ ಇರುವ ಕಾರಣಕ್ಕೆ ಪಕ್ಷದ ಒಬಿಸಿ ಸಲಹಾ ಮಂಡಳಿಯ ಸಭೆ ಕೆಪಿಸಿಸಿ ಕಚೇರಿಯಲ್ಲಿಯೇ ನಡೆಯಲಿ ಎಂದು ಸಲಹೆ ನೀಡಿದ್ದೆ. ಅದರಂತೆ ಇಲ್ಲಿ ಸಭೆ ಏರ್ಪಡಿಸಲಾಗಿದೆ. ರಾಷ್ಟ್ರಮಟ್ಟದ ಸುಮಾರು 40ಕ್ಕೂ ಅಧಿಕ ನಾಯಕರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
Related Articles
Thank you for your comment. It is awaiting moderation.
Comments (0)