ಕಾಶಿ ಪೀಠದ ಹಿರಿಯ ಜಗದ್ಗುರುಗಳಿಂದ ಪಶ್ಚಿಮ ಬಂಗಾಲದ ತರುಣರಿಗೆ ಇಷ್ಟ ಲಿಂಗದೀಕ್ಷೆ
- by Suddi Team
- February 21, 2026
- 12 Views
ವಾರಾಣಸಿ(ಉ.ಪ್ರ) :ಜೀವನ ವಿಧಾನದ ನಡೆನುಡಿಯಲ್ಲಿ ಶುದ್ಧತೆಯನ್ನು ಸಾಧಿಸಿದವರೆಲ್ಲರೂ ಇಷ್ಟಲಿಂಗ ದೀಕ್ಷೆಯನ್ನು ಪಡೆಯಬಹುದಾಗಿದ್ದು, ಇಷ್ಟಲಿಂಗ ದೀಕ್ಷೆಯನ್ನು ಪಡೆಯಲು ವರ್ಣ-ವರ್ಗಗಳ ಭೇದವಿರುವುದಿಲ್ಲ ಎಂದು ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಅವರು ಉತ್ತರಪ್ರದೇಶದ ವಾರಾಣಸಿಯ ಧರ್ಮಪೀಠದಲ್ಲಿ ಪಶ್ಚಿಮ ಬಂಗಾಲದ ನದಿಯಾ ಜಿಲ್ಲೆಯ ಬನಮಾಲಿಪಾರ ಗ್ರಾಮ ನಿವಾಸಿಗಳಾದ ಸನಾತನ ಹಿಂದೂ ಧರ್ಮದ ರುದ್ರೇಶ ಬಿಸ್ವಾಸ್ ಮತ್ತು ರಕ್ತಿಮ್ ಜೋರ್ದಾರ್ ಎಂಬ ಇಬ್ಬರು ವಿದ್ಯಾರ್ಥಿಗಳಿಗೆ ಇಷ್ಟಲಿಂಗ ದೀಕ್ಷೆಯನ್ನು ಅನುಗ್ರಹಿಸಿ ಆಶೀರ್ವಚನ ನೀಡಿದರು. ದೀಕ್ಷೆಯು ಬದುಕಿನ ಚಿತ್ಕಳೆಯಾಗಿದೆ. ಶ್ರೀಗುರುವು ಕರುಣಿಸುವ ಇಷ್ಟಲಿಂಗದ ಅನುಸಂಧಾನದಲ್ಲಿ ಅಂತರಂಗದ ಸಂಪರ್ಕ ಸಾಧ್ಯವಾಗಿ ಅಲ್ಲಿ ಕಾಣಸಿಗುವ ಬಯಲಬೆಳಗಿನ ಮಹಾಪ್ರಕಾಶದಲ್ಲಿ ಜೀವಾತ್ಮನು ಪರಮಾತ್ಮನ ದಿವ್ಯಸಾನ್ನಿಧ್ಯದಲ್ಲಿ ಶಾಶ್ವತ ಆನಂದವನ್ನು ಅನುಭವಿಸುವುದೇ ಮೋಕ್ಷ ಮಾರ್ಗದ ತಿರುಳಾಗಿದೆ ಎಂದೂ ಅವರು ಹೇಳಿದರು.
ಇಷ್ಟಲಿಂಗ ಧಾರಣೆ : ಪಶ್ಚಿಮ ಬಂಗಾಲದ ಯುವಕರಲ್ಲಿಯ ಇಷ್ಟಲಿಂಗಾರ್ಚನೆಯ ಆಸಕ್ತಿ ಮತ್ತು ಭಕ್ತಿಯ ಬದ್ಧತೆಯನ್ನು ಪರೀಕ್ಷಿಸಿದ ಕಾಶಿ ಜಗದ್ಗುರುಗಳವರು, ಉಭಯತರಿಗೆ ವೀರಶೈವ ಧರ್ಮ ಸಿದ್ಧಾಂತದಂತೆ ದೀಕ್ಷೆ ನೀಡಿ ಇಷ್ಟಲಿಂಗ ಧಾರಣೆಮಾಡಿ ಶಿವಪಂಚಾಕ್ಷರಿ ಮಹಾಮಂತ್ರವನ್ನು ಉಪದೇಶಮಾಡಿ ನಂತರ ಪೂಜೆ ಹಾಗೂ ಮಂತ್ರದ ವಿಧಿ ವಿಧಾನಗಳನ್ನು ತಿಳಿಸಿಕೊಟ್ಟರು. ಹೆಚ್ಚಿನ ಅಧ್ಯಯನಕ್ಕಾಗಿ ಇಬ್ಬರಿಗೂ ಹಿಂದಿ ಭಾಷೆಯ ಶ್ರೀಸಿದ್ಧಾಂತ ಶಿಖಾಮಣಿ ಹಾಗು ಅಷ್ಟಾವರಣಗಳ ಮಹತ್ವ ಸಾರುವ ಗ್ರಂಥಗಳನ್ನು ಅನುಗ್ರಹಿಸಿ ಆಶೀರ್ವದಿಸಿದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಪಶ್ಚಿಮ ಬಂಗಾಳದಲ್ಲಿ ವೀರಶೈವ ಧರ್ಮ ಜಾಗೃತಿ ಕೈಂಕರ್ಯಕ್ಕೆ ತೆರೆದುಕೊಂಡು ಅಪೇಕ್ಷಿತರನ್ನು ಕಾಶಿಗೆ ಕರೆದುಕೊಂಡು ಬಂದು ಇಷ್ಟಲಿಂಗ ದೀಕ್ಷೆಯನ್ನು ಪಡೆಯುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರುದ್ರೇಶ ಬಿಸ್ವಾಸ್ ಮತ್ತು ರಕ್ತಿಮ್ ಜೋರ್ದಾರ್ ಅವರು, ತಾವು ಇಲ್ಲಿಯವರೆಗೆ ಖುದ್ದಾಗಿ ಒಂದೂ ಬಾರಿ ಕಾಶಿ ಜಗದ್ಗುರುಗಳವರನ್ನು ಭೇಟಿಮಾಡಿಲ್ಲ. ಕೇವಲ ಫೇಸ್ಬುಕ್, ಇನ್‌ಸ್ಟಾಗ್ರಾಂ ಮತ್ತು ಯೂಟ್ಯೂಬ್ ಮುಖಾಂತರ ಕಾಶಿ ಜಗದ್ಗುರುಗಳವರ ಆಶೀರ್ವಚನಗಳನ್ನು ನಿರಂತರ ಆಲಿಸಿ ಸನಾತನ ವೀರಶೈವ ಧರ್ಮದ ಮಹತ್ವವನ್ನು ಅರಿತುಕೊಂಡು ಪೂರ್ಣ ಪ್ರಭಾವಿತರಾಗಿ ಇಷ್ಟಲಿಂಗ ದೀಕ್ಷೆ ಪಡೆದುಕೊಳ್ಳಲು ತೀರ್ಮಾನಿಸಿ ಕಾಶಿ ಧರ್ಮಪೀಠಕ್ಕೆ ಆಗಮಿಸಿದೆವು. ಅತ್ಯಂತ ಪ್ರೀತಿಯಿಂದ ಸ್ಪಂದನೆ ಮಾಡಿದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಇಷ್ಟಲಿಂಗ ದೀಕ್ಷೆ ಅನುಗ್ರಹಿಸಿದ್ದರಿಂದ ಒಂದು ವಿಶಿಷ್ಟ ಚೈತನ್ಯ ನಮ್ಮೊಳಗನ್ನು ತುಂಬಿಕೊಂಡಿದೆ ಎಂದು ಭಾವತುಂಬಿ ನುಡಿದರು.
Related Articles
Thank you for your comment. It is awaiting moderation.


Comments (0)