ಅಂತರಂಗ ಬಹಿರಂಗ ಶುದ್ದಿಯೇ ವೀರಶೈವ ಧರ್ಮದ ಗುರಿ : ಶ್ರೀ ರಂಭಾಪುರಿ ಜಗದ್ಗುರುಗಳು
- by Suddi Team
- September 27, 2025
- 419 Views

ಬಸವಕಲ್ಯಾಣ:ಧರ್ಮ ಮತ್ತು ಆಧ್ಯಾತ್ಮಿಕತೆ ಬದುಕಿನ ಉನ್ನತಿಗೆ ಆಶಾಕಿರಣ. ವೀರಶೈವ ಧರ್ಮ ಕೊಟ್ಟ ಸಂಸ್ಕಾರ ಸಂಸ್ಕೃತಿ ಬಲು ದೊಡ್ಡದು. ಸಂವೇದನಾಶೀಲ ಜೀವನಕ್ಕೆ ವೀರಶೈವ ಧರ್ಮದ ಕೊಡುಗೆ ಅಪಾರ. ಅಂತರಂಗ ಮತ್ತು ಬಹಿರಂಗ ಇವೆರಡನ್ನು ಶುದ್ಧಿಗೊಳಿಸುವುದೇ ವೀರಶೈವ ಲಿಂಗಾಯತ ಧರ್ಮದ ಮೂಲ ಗುರಿಯಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಶುಕ್ರವಾರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ 5ನೇ ದಿನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಜಗದ್ಗುರುಗಳು,ಮಾನವನ ಉಸಿರಾಟಕ್ಕೆ ಗಾಳಿ ಎಷ್ಟು ಮುಖ್ಯವೋ ಅಷ್ಟೇ ಜೀವನದ ಉಜ್ವಲ ಭವಿಷ್ಯಕ್ಕೆ ಧರ್ಮ ಆಶಾ ಕಿರಣವಾಗಿದೆ. ಆಚಾರ್ಯರ ಮತ್ತು ಶರಣ ಸತ್ಪುರುಷರ ಮಾರ್ಗದರ್ಶನ ಜೀವನದ ಶ್ರೇಯಸ್ಸಿಗೆ ಸ್ಪೂರ್ತಿಯಾಗಿದೆ. ವೀರಶೈವ ಧರ್ಮದ ಬೇರುಗಳನ್ನು ಶಿವಾಗಮಗಳಲ್ಲಿ ಕಾಣುತ್ತೇವೆ. ಶಿವಾಗಮಗಳ ಆಚಾರ್ಯರ ಹಾಗೂ ಶಿವಶರಣರ ಸಾಹಿತ್ಯ ಬದುಕಿ ಬಾಳುವ ಮನುಷ್ಯನ ಎರಡು ಕಣ್ಣು ಇದ್ದ ಹಾಗೆ. ಮೂಲ ನಂಬಿಕೆಗಳನ್ನು ಮೂಡ ನಂಬಿಕೆ ಎಂದು ತಿಳಿಯದೇ ಸಮನ್ವಯದಿಂದ ಬಾಳಿ ಬದುಕುವ ಧೈಯವಾಗಬೇಕು. ಯಾವಾಗಲೂ ನಾಶವಾಗದೇ ಇರುವುದು ಧರ್ಮ. ಇದನ್ನು ನಾಶ ಮಾಡುವ ಶಕ್ತಿ ಯಾರಿಗೂ ಯಾವ ಕಾಲಕ್ಕೂ ಇಲ್ಲ ಎಂದರು.
ಸುಸಂಸ್ಕೃತ ಸದೃಢ ಸಮಾಜ ನಿರ್ಮಾಣಕ್ಕೆ ಭದ್ರ ಅಡಿಪಾಯವಾಗಿರುವ ಆಧ್ಯಾತ್ಮ ಜ್ಞಾನದ ಅನುಸಂಧಾನ ಮುಖ್ಯ ವೀರಶೈವ ಧರ್ಮದ ಸಂವಿಧಾನಗಳು ಭಾರತೀಯರ ಬದುಕಿಗೆ ಸಜ್ಜನಿಕೆಯ ಜೀವ ತುಂಬಿವೆ. ಸತ್ಯ ಮತ್ತು ಶಾಂತಿ ಎಲ್ಲರ ಬಾಳಿಗೂ ಅಗತ್ಯವಾಗಿದೆ. ಶಿವಜ್ಞಾನದ ತಂಗಾಳಿ ಜೀವನದ ಉನ್ನತಿಗೆ ಸಹಕಾರಿಯಾಗಿವೆ. ಶಿವ ಜೀವ ಐಕ್ಯದ ವಿದ್ಯೆಯಲ್ಲಿ ಯಾರು ಆಸಕ್ತರಾಗಿರುವರೋ ಅವರೆಲ್ಲರೂ ವೀರಶೈವರು. ಗುರು ಕೊಟ್ಟ ಇಷ್ಟಲಿಂಗವನ್ನು ಎದೆಯ ಮೇಲೆ ಧರಿಸಿ ಪೂಜಿಸುವಾತನೇ ನಿಜವಾದ ವೀರಶೈವ. ಸಾಮಾಜಿಕ ಬದುಕಿನಲ್ಲಿ ಎಲ್ಲರೊಂದಿಗೆ ಬೆರೆತು ಬಾಳುವುದೇ ವೀರಶೈವ ಧರ್ಮದ ಗುರಿಯಾಗಿದೆ. ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಹಾಗೂ ಬಸವಾದಿ ಶರಣರು ವೀರಶೈವ ಲಿಂಗಾಯತ ಧರ್ಮದ ಎರಡು ಕಣ್ಣು ಎಂಬುದನ್ನು ಯಾರೂ ಮರೆಯಬಾರದೆಂದರು.
‘ವೀರಶೈವ ಲಿಂಗಾಯತ ಧರ್ಮದ ಸಮಷ್ಟಿ ಪ್ರಜ್ಞೆ ಚಿಂತನ ಗೋಷ್ಠಿ’ಯನ್ನು ಉದ್ಘಾಟಿಸಿದ ಕೇಂದ್ರ ಗ್ರಾಹಕ ವ್ಯವಹಾರ ಮತ್ತು ಸಾರ್ವಜನಿಕ ವಿತರಣಾ ಖಾತೆ ಸಚಿವ ಪ್ರಹ್ಲಾದ ಜೋಷಿ ಮಾತನಾಡಿ ಮಾನವ ಧರ್ಮಕ್ಕೆ ಜಯವಾಗಲಿ ಎಂದು ಘೋಷಿಸಿದ ಪೀಠ ರಂಭಾಪುರಿ ಪೀಠ. ಶ್ರೀ ರಂಭಾಪುರಿ ಜಗದ್ಗುರುಗಳು ನಿರಂತರ ಧರ್ಮ ಪ್ರಚಾರದೊಂದಿಗೆ ಜನತೆಯನ್ನು ಆದ್ಯಾತ್ಮ ಪರಂಪರೆಯಲ್ಲಿ ಕೊಂಡೊಯ್ಯಲು ಪ್ರಯತ್ನ ಮಾಡುತ್ತಿದ್ದಾರೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಶ್ರೀ ರಂಭಾಪುರಿ ಪೀಠ ಸ್ಥಾಪನೆ ಮಾಡಿದ್ದಾರೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಅಗಸ್ಯರಿಗೆ ಬೋಧನೆ ಮಾಡಿದ್ದು ಸಿದ್ಧಾಂತ ಶಿಖಾಮಣಿ ಹೆಸರಿನಲ್ಲಿ ಶಿವಾಗಮಗಳ ಸಾರವನ್ನು ತಿಳಿಸುವ ಗ್ರಂಥವಾಗಿದೆ. ಜೀವ ಜಗತ್ತಿಗೆ ಆಧ್ಯಾತ್ಮದ ಕೊಡುಗೆ ಅಮೂಲ್ಯ, ವ್ಯಕ್ತಿ ಹಿತಕ್ಕಿಂತ ಸಾಮಾಜಿಕ ಹಿತಾಸಕ್ತಿ ಉಂಟು ಮಾಡುವುದೇ ಧರ್ಮದ ಗುರಿಯಾಗಿದೆ. ಅಖಂಡತೆಗೆ ಇರುವ ಬೆಲೆ ವಿಘಟನೆಯಲ್ಲಿ ಇರುವುದಿಲ್ಲ. ವೀರಶೈವ ಲಿಂಗಾಯತ ಧರ್ಮದ ಉತ್ಕೃಷ್ಟ ಸಂಸ್ಕೃತಿ ಕೊಟ್ಟ ಶ್ರೀ ಜಗದ್ಗುರು ರೇಣುಕಾಚಾರ್ಯರ ಮತ್ತು ಶ್ರೀ ಬಸವೇಶ್ವರರ ವಿಚಾರ ಧಾರೆಗಳ ಅರಿವು ಅನುಸಂಧಾನ ಮುಖ್ಯ ಬಾಳೆಹೊನ್ನೂರು ಜಗದ್ಗುರುಗಳು ಸದಾ ಸಂಚರಿಸಿ ಜಾಗೃತಿ ಉಂಟು ಮಾಡುತ್ತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ ಎಂದರು.
ಬಸವನ ಬಾಗೇವಾಡಿ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ,ಅಸತ್ಯದಿಂದ ಸತ್ಯದೆಡೆಗೆ ಕತ್ತಲೆಯಿಂದ ಬೆಳಕಿನೆಡೆ ಮೃತ್ಯುವಿನಿಂದ ಅಮೃತತ್ವದ ಕಡೆಗೆ ಕರೆದೊಯ್ಯುವುದೇ ಧರ್ಮದ ಗುರಿಯಾಗಿದೆ. ಬಾಲ್ಯದಲ್ಲಿ ಜ್ಞಾನ ತಾರುಣ್ಯದಲ್ಲಿ ಸಂಪತ್ತು ವೃದ್ಧಾಪ್ಯದಲ್ಲಿ ಪುಣ್ಯ ಸಂಪಾದಿಸಿಕೊಂಡು ಬಾಳಬೇಕು. ವೀರಶೈವ ಲಿಂಗಾಯತ ಧರ್ಮಜಾತಿ ಜಂಜಡಗಳನ್ನು ಕಿತ್ತು ಜೀವನದ ಉನ್ನತಿಗೆ ಬೇಕಾದ ಪರಮ ಜ್ಞಾನವನ್ನು ಬೋಧಿಸಿದೆ. ವೀರಶೈವ ಧರ್ಮದಲ್ಲಿ ಬೆಟ್ಟದಷ್ಟು ಆಧ್ಯಾತ್ಮ ಸಂಪತ್ತು ಇದ್ದರೂ ಅರಿಯಲಾರದ ಸ್ಥಿತಿ ನಮ್ಮದಾಗಿದೆ. ಉದಾತ್ತ ಮಾನವೀಯ ಮೌಲ್ಯಗಳನ್ನು ಸಾರಿದ ಶ್ರೀ ಜಗದ್ಗುರು ರೇಣುಕಾಚಾರ್ಯರ ಹಾಗೂ ಜಗಜ್ಯೋತಿ ಬಸವಣ್ಣನವರ ವಿಚಾರ ಧಾರೆಗಳು ನಮ್ಮೆಲ್ಲರ ಬಾಳಿಗೆ ಬೆಳಕು ತೋರುತ್ತವೆ ಎಂದರು.
ಮಾಜಿ ಸಂಸದ ಬಸವರಾಜ ಪಾಟೀಲ (ಸೇಡಂ) ಮಾತನಾಡಿ 21 ವರ್ಷದ ಹಿಂದೆ ಶ್ರೀ ರಂಭಾಪುರಿ ಪೀಠದಲ್ಲಿ ಗುರು ವಿರಕ್ತರ ಸಮಾವೇಶ ಮಾಡಿದ ಕೀರ್ತಿ ಶ್ರೀ ರಂಭಾಪುರಿ ಜಗದ್ಗುರುಗಳಿಗೆ ಸಲ್ಲುತ್ತದೆ. ಈ ಹಿಂದೆ ಜೇವರ್ಗಿಯಲ್ಲಿ ಅಡ್ಡಪಲ್ಲಕ್ಕಿ ಮಹೋತ್ಸವಕ್ಕೆ ವಿರೋಧ ಬಂದಾಗ ತಾವು ಜಿಲ್ಲಾಧಿಕಾರಿಗಳನ್ನು ಕಂಡು ಯಾರ ಹಕ್ಕನ್ನು ಯಾರೂ ಕಸಿಯಬಾರದಾಗಿ ವಿನಂತಿಸಿದ್ದೇನೆ. ಅವರವರ ಪರಂಪರೆ ಅವರದು. ಯಾರನ್ನೂ ಪಂಚ ಪೀಠಗಳೊಂದಿಗೆ ಹೋಲಿಕೆ ಮಾಡುವುದು ಸರಿಯಲ್ಲ ಎಂದರು.
ವಿ.ಪ.ಸದಸ್ಯ ಬಿ.ಜಿ. ಪಾಟೀಲ, ಬಸವಕಲ್ಯಾಣದ ಪ್ರದೀಪ ವಾತಡೆ, ತಾಲೂಕಾ ಅ.ಭಾ.ವೀ. ಮಹಾಸಭಾ ಅಧ್ಯಕ್ಷ ರಾಜಕುಮಾರ ಸಿರಗಾಪೂರ, ಹೈದರಾಬಾದಿನ ಎಂ.ವೀರಮಲ್ಲೇಶ, ನ್ಯಾಯವಾದಿ ವಿಜಯಕುಮಾರ ಹೇರೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಗೌರವ ಗುರುರಕ್ಷೆ : ಹಣೆಗಾಂವ ಹಿರೇಮಠದ ಶಂಕರಲಿಂಗ ಶಿವಾಚಾರ್ಯರು, ಮಂಠಾಳ ಚೌಕಿಮಠದ ಅಭಿನವ ಚನ್ನಬಸವ ಸ್ವಾಮಿಗಳು, ಕೆಲಂಗಾಣ ರಾಜ್ಯ ಜಂಗಮ ಸಮಾಜದ ಅಧ್ಯಕ್ಷ ಆರ್. ವಿಶ್ವೇಶ್ವರಯ್ಯ, ತೆಲಂಗಾಣ ರಾಜ್ಯ ವೀರಶೈವ ಧರ್ಮ ಪ್ರಚಾರ ಸಂಗಮದ ಅಧ್ಯಕ್ಷ ಜಗದೇವ ಹಿರೇಮಠ, ಕೊಲನಪಾಕ ಕ್ಷೇತ್ರದ ಜಿ.ಎಂ. ಭೂಷಣಂ, ಪ್ರಧಾನ ಆರ್ಚಕ ಜಿ.ಎಂ. ಸೋಮಯ್ಯ ಸ್ವಾಮಿ, ಜಿ.ಎಂ.ಗಂಗಾಧರ, ಜಿ.ಎಂ.ಚಂದ್ರಶೇಖರ, ಶ್ರೀನಿವಾಸ ಯಾದವ, ಭಾರತ ಸರ್ಕಾರದ ರಾಜ್ಯ ಅಭಿವೃದ್ಧಿ ಸಮನ್ವಯ-ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯಾ ಸ್ವಾಮಿ ಕಮಠಾಣಾ ಇವರಿಗೆ ಗೌರವ ಗುರುರಕ್ಷೆ ಹಾಗೂ ಬಸವಕಲ್ಯಾಣದ ನಿವೃತ್ತ ಶಿಕ್ಷಕರು-ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತರಾದ ಪಂಚಾಕ್ಷರಿ ಹಿರೇಮಠ ಹಾಗೂ ಬೆಳಗಾವಿಯ ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತರಾದ ಗಂಗಾಧರ ಬಿ. ಮಠಪತಿ ಎ.ಸಿ.ಪಿ. ಇವರಿಗೆ ವಿಶೇಷ ಗುರುರಕ್ಷೆ ನೀಡಿ ಶ್ರೀ ರಂಭಾಪುರಿ ಜಗದ್ಗುರುಗಳು ಆಶೀರ್ವದಿಸಿದರು.
Related Articles
Thank you for your comment. It is awaiting moderation.
Comments (0)