ನನ್ನ ಬಾಯಲ್ಲಿ ತಪ್ಪು ನುಡಿಸದಂತೆ ಕೃಷ್ಣನಲ್ಲಿ ಪ್ರಾರ್ಥನೆ; ಡಿಸಿಎಂ ಡಿಕೆ ಶಿವಕುಮಾರ್
- by Suddi Team
- August 30, 2025
- 94 Views

ಉಡುಪಿ:ನಾನು ಏನು ಮಾತನಾಡಿದರೂ ಅದರಲ್ಲಿ ತಪ್ಪು ಕಂಡು ಹಿಡಿಯುವುದೇ ಹೆಚ್ಚಾಗಿದೆ. ಹೀಗಾಗಿ ನನ್ನ ಬಾಯಿಂದ ಯಾವುದೇ ತಪ್ಪು ನುಡಿಸದಂತೆ ಶ್ರೀಕೃಷ್ಣ ಪರಮಾತ್ಮನಲ್ಲಿ ಪ್ರಾರ್ಥಿಸುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠದ ಮಠಾಧೀಶರಾದ ಶ್ರೀ ಸುಗಣೇಂದ್ರತೀರ್ಥ ಶ್ರೀಪಾದರ 64ನೇ ಜನ್ಮನಕ್ಷತ್ರೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಕ್ಷದಲ್ಲಿ ಇತ್ತೀಚೆಗೆ ತಮ್ಮ ವಿರುದ್ಧ ಕೇಳಿಬಂದ ಟೀಕೆಗಳಿಗೆ ಬೇಸರಗೊಂಡಂತೆ ಕೃಷ್ಣನ ಸನ್ನಿದಿಯಲ್ಲಿ ಮಾತನಾಡಿದರು.ನನ್ನ ಬಾಯಿಂದ ಯಾವುದೇ ತಪ್ಪು ನುಡಿಸದಂತೆ ಶ್ರೀಕೃಷ್ಣ ಪರಮಾತ್ಮನಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದು ಇದಕ್ಕೆ ನಿದರ್ಶನವಾಗಿದೆ.
ಪಿತಾಸಿ ಲೋಕಸ್ಯ ಚರಾಚರಸ್ಯ ತ್ವಮಸ್ಯ ಪೂಜ್ಯಶ್ಚ ಗುರುರ್ಗರೀಯಾನ್ ನ ತ್ವತ್ಸಮೋಸ್ತ್ಯಾಭ್ಯಧಿಕಃ ಕುತೋನ್ಯೋ ಲೋಕತ್ರಯೇಪ್ಯಪ್ರತಿಮಪ್ರಭಾವ” ಎಂದು ಭಗವದ್ಗೀತೆಯ ಶ್ಲೋಕ ಪಠಿಸಿದ ಡಿಸಿಎಂ,ನಮ್ಮ ಧರ್ಮ ಮನುಷ್ಯನಿಗೆ ಆತ್ಮ ವಿಶ್ವಾಸ ಹೆಚ್ಚಿಸುವ ದಾರಿ. ಈ ವೇದಿಕೆ ಮೇಲೆ ಶ್ರೀಗಳು ಮೂರ್ನಾಲ್ಕು ಪುಸ್ತಕ ನೀಡಿದರು. ಅವರು ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣವನ್ನು ನೋಡಿದೆ. ಆ ಭಾಷಣದಲ್ಲಿ ಅವರು, ‘ನಾವು ಧರ್ಮಕ್ಕೆ ಅಂಟಿಕೊಂಡಿರಬಾರದು. ಬಂಧಿಸಲ್ಪಡಬಾರದು. ಬದಲಾಗಿ ನಾವು ಬಯಸಿ ಇಚ್ಛಿಸುವ ಧರ್ಮವನ್ನು ಆಯ್ಕೆ ಮಾಡಿಕೊಳ್ಳಬೇಕು’ ಎಂದಿದ್ದಾರೆ. ನಾನು ಅವರ ಮಾತುಗಳನ್ನು ಒಪ್ಪುತ್ತೇನೆ” ಎಂದು ಹೇಳಿದರು.
“ಧರ್ಮ ಯಾವುದಾದರೂ ತತ್ವವೊಂದೇ. ನಾಮ ನೂರಾದರೂ ದೈವವೊಂದೇ, ಪೂಜೆ ಯಾವುದಾದರೂ ಭಕ್ತಿಯೊಂದೇ, ಕರ್ಮ ಹಲವಾದರೂ ನಿಷ್ಠೆಯೊಂದೆ. ದೇವನೊಬ್ಬ ನಾಮ ಹಲವು. ನಾವು ಅನೇಕ ಹೆಸರಿನಲ್ಲಿ ದೇವರನ್ನು ಕರೆಯುತ್ತಿದ್ದೇವೆ. ನಾವು ಶಿವ, ಕೃಷ್ಣನನ್ನು ಬೇರೆ ಬೇರೆ ಹೆಸರಿನಲ್ಲಿ ಕರೆಯುತ್ತಾ ಬಂದಿದ್ದೇವೆ. ನಾವು ಕೃಷ್ಣನನ್ನು ಯಾಕೆ ಇಷ್ಟು ಪ್ರೀತಿಯಿಂದ ಒಪ್ಪುತ್ತೇವೆ ಎಂದರೆ ಕೃಷ್ಣ ಒಬ್ಬ ಶಿಕ್ಷಕ, ಮಾರ್ಗದರ್ಶಕ, ಚಿಂತಕ, ರಾಜಕಾರಣಿ, ಪ್ರೇಮಿ, ತತ್ವಜ್ಞಾನಿ” ಎಂದು ತಿಳಿಸಿದರು.
“ದಾರಿ ಇದ್ದಲ್ಲಿ ನಾವು ನಡೆಯಬೇಕು, ದಾರಿ ಇಲ್ಲದಿದ್ದರೆ, ದಾರಿಯನ್ನು ಹುಡುಕಿಕೊಂಡು ಹೋಗಬೇಕು. ನಮ್ಮ ಜೀವನದಲ್ಲಿ ಮರಳಿ ಬರದೇ ಇರುವ ವಸ್ತುಗಳು ಎಂದರೆ, ಸಮಯ, ಮಾತು, ನಂಬಿಕೆ ಹಾಗೂ ಅವಕಾಶ. ದೇವರು ವರ ಹಾಗೂ ಶಾಪ ನೀಡುವುದಿಲ್ಲ. ಕೇವಲ ಅವಕಾಶ ನೀಡುತ್ತಾನೆ. ಆದರೆ ಅವಕಾಶ ಮಾತ್ರ ನೀಡುತ್ತಾನೆ. ಮರಕ್ಕೆ ಬೇರು ಎಷ್ಟು ಮುಖ್ಯವೋ ಅದೇರೀತಿ ಮನುಷ್ಯನಿಗೆ ನಂಬಿಕೆ ಮುಖ್ಯ. ನಾವು ಇಂದು ಮಧ್ವಾಚಾರ್ಯರ ಆದರ್ಶ, ಮಾರ್ಗದರ್ಶನದಿಂದ ನಾವು ಇಂದು ಅವರ ಆಚಾರ ವಿಚಾರ ಸ್ಮರಿಸುತ್ತಿದ್ದೇವೆ. ಗುರುವಿನಲ್ಲಿ ನಾವು ಗುರಿ ಕಾಣಬಹುದು ಎಂದರು.
Related Articles
Thank you for your comment. It is awaiting moderation.
Comments (0)